ಈಡನ್ ಗಾರ್ಡನ್ ನಲ್ಲೇ ಪಿಂಕ್ ಬಾಲ್ ‘ಟೆಸ್ಟ್’ ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ವಿಶ್ವ ಕ್ರಿಕೆಟ್ ಗೆ ಲಾರ್ಡ್ಸ್ ಕ್ರಿಕೆಟ್ ಮೈದಾನ ಹೇಗೆ ಪವಿತ್ರ ಮೈದಾನವೋ ಅದೇ ರೀತಿ ಭಾರತ ಕ್ರಿಕೆಟ್ ಗೆ ಕೊಲ್ಕತ್ತಾದ ಈಡನ್ ಗಾರ್ಡನ್! ಇದೇ ಕಾರಣಕ್ಕೆ ಈಡನ್ ಗಾರ್ಡನ್ ಅನ್ನು ಭಾರತ ಕ್ರಿಕೆಟ್ ಕಾಶಿ ಅಂತಾ ಕರೆಯುತ್ತಾರೆ. ನಾಳೆಯಿಂದ ಈ ಮೈದಾನ ಭಾರತದ ಮೊದಲ ಹೊನಲು ಬೆಳಕಿನ ಪಂದ್ಯದ ಆತಿಥ್ಯ ವಹಿಸುತ್ತಿದೆ.

ದೇಶದಲ್ಲಿ ಅನೇಕ ವಿಶ್ವ ದರ್ಜೆ ಕ್ರಿಕೆಟ್ ಮೈದಾನಗಳಿವೆ, ಮುಂಬೈನ ವಾಂಖಡೆ, ಬೆಂಗಳೂರಿನ ಚಿನ್ನಸ್ವಾಮಿ, ಚೆನ್ನೈನ ಚೆಪಕ್, ದೆಹಲಿಯ ಫಿರೋಜ್ ಷಾ ಕೋಟ್ಲಾದಂತಹ ಪ್ರಮುಖ ಕ್ರೀಡಾಂಗಣಗಳಿದ್ದರೂ ಈಡನ್ ಗಾರ್ಡನ್ ನಲ್ಲೇ ಈ ಪ್ರಯೋಗಕ್ಕೆ ಮುಂದಾಗಲು ಕಾರಣ ಇದೆ.

ಈಡನ್ ಗಾರ್ಡನ್ ಮೈದಾನ ಪೂರ್ಣ ಪ್ರಮಾಣದಲ್ಲಿ ಹಸಿರು ಹುಲ್ಲನ್ನು ಹೊದ್ದಿದೆ. ಔಟ್ ಫೀಲ್ಡ್ ಹುಲ್ಲಿನಿಂದ ಕೂಡಿರುವುದರಿಂದ ಪಿಂಕ್ ಚೆಂಡು ಹೆಚ್ಚು ಬಾಳಿಕೆ ಬರುತ್ತದೆ. ಇನ್ನು ಪಿಚ್ ನಲ್ಲಿ ಇರುವ ಕಪ್ಪು ಮಣ್ಣು ಮೃಧುವಾಗಿದ್ದು, ಚೆಂಡಿನ ಮೇಲ್ಪದರ ಬೇಗ ಹರಿಯುವುದಿಲ್ಲ.

ಈಡನ್ ಗಾರ್ಡನ್ ಮೈದಾನ ನಿರ್ಮಾಣ ಆಗಿದ್ದು, 1864ರಲ್ಲಿ ಅಂದರೆ 155 ವರ್ಷಗಳ ಹಿಂದೆ. ಇದು ಭಾರತದ ಅತಿ ಹಳೆಯ ಕ್ರಿಕೆಟ್ ಮೈದಾನ, 1932ರಲ್ಲಿ ಭಾರತ, ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಿತು. ನಂತರ 1933ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೊದಲ ಬಾರಿಗೆ ಭಾರತದಲ್ಲಿ ನಡೆದಾಗ ಪಂದ್ಯದ ಆತಿಥ್ಯವನ್ನು ಈಡನ್ ಗಾರ್ಡನ್ ವಹಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಕ್ರೀಡಾಂಗಣ ಭಾರತ ಕ್ರಿಕೆಟ್ ನ ಅನೇಕ ಸಿಹಿ ಹಾಗೂ ಕಹಿ ಕ್ಷಣಗಳಿಗೆ ಸಾಕ್ಷಿಯಾಗಿದೆ. ಈಗ ಬಾಂಗ್ಲಾದೇಶದ ವಿರುದ್ಧ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯದ ಆತಿಥ್ಯ ವಹಿಸುತ್ತಿದೆ. ಈ ಸಂದರ್ಭದಲ್ಲಿ ಈಡನ್ ಗಾರ್ಡನ್ ನಲ್ಲಿ ನಡೆದಿರುವ ಅವಿಸ್ಮರಣೀಯ ಕ್ಷಣಗಳನ್ನು ಮೆಲಕು ಹಾಕೋಣ ಬನ್ನಿ…

1933: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯದ ಆತಿಥ್ಯ.

1987: ಮೊದಲ ಬಾರಿಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಹೊರತಾಗಿ ಹೊರಗಡೆ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಆತಿಥ್ಯ. ಆಸ್ಟ್ರೇಲಿಯಾಗೆ ಮೊದಲ ವಿಶ್ವಕಪ್ ಜಯ.

1991: ವರ್ಣಭೇದ ನೀತಿಯಿಂದ ಎರಡು ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿರ್ಬಂಧಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕಾ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಲಿದ್ದು ಇದೇ ಈಡನ್ ಗಾರ್ಡನ್ ನಲ್ಲಿ. ಈ ಪಂದ್ಯದಲ್ಲಿ ಭಾರತಕ್ಕೆ 3 ವಿಕೆಟ್ ಜಯ.

1993: ಹೀರೊ ಕಪ್ ಟೂರ್ನಿಯಲ್ಲಿ ಭಾರತ ಮೊದಲ ಬಾರಿಗೆ ಈ ಅಂಗಳದಲ್ಲಿ ಹೊನಲು ಬೆಳಕಿನ ಏಕದಿನ ಪಂದ್ಯ ಆಡಿತ್ತು.

1996: ವಿಶ್ವಕಪ್ ಸೆಮಿಫೈನಲ್ ನಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಸೋಲು.

2001: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಐತಿಹಾಸಿಕ ಜಯ. ಈ ಶತಮಾನದಲ್ಲಿ ಫಾಲೋ ಆನ್ ಪಡೆದು ಟೆಸ್ಟ್ ಪಂದ್ಯ ಗೆದ್ದ ಏಕೈಕ ತಂಡ ಭಾರತ.

2001: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿ ಪಡೆದಿದ್ದು ಇದೇ ಅಂಗಳದಲ್ಲಿ.

2008: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ವಿದಾಯದ ಪಂದ್ಯ.

2009: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಏಕದಿನ ಶತಕ ಬಾರಿಸಿದ್ದು ಇದೇ ಮೈದಾನದಲ್ಲಿ.

2014: ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಯ 264 ರನ್ ಬಾರಿಸಿದ್ದು.

2019: ಬಾಂಗ್ಲಾದೇಶ ವಿರುದ್ಧ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ.

Leave a Reply