ಕಾಂಗ್ರೆಸ್ ನಿಮಗೇನು ದ್ರೋಹ ಮಾಡಿತ್ತು? ನೀವೇಕೆ ಪಕ್ಷದ ಬೆನ್ನಿಗೆ ಇರಿದಿರಿ?; ಅನರ್ಹರಿಗೆ ಡಿಕೆಶಿ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಪಕ್ಷ ನಿಮಗೆ ಏನು ಮೋಸ ಮಾಡಿತ್ತು? ಎಲ್ಲೋ ಇದ್ದ ನಿಮಗೆ ಚಿಹ್ನೆ ನೀಡಿ, ಗೆಲ್ಲಿಸಿ, ಶಾಸಕರನ್ನಾಗಿ, ಮಂತ್ರಿ-ಮಹೋದಯರನ್ನಾಗಿ ಮಾಡಿದ ಪಕ್ಷಕ್ಕೆ ಈ ರೀತಿ ದ್ರೋಹ ಮಾಡಿದ್ದು ಸರಿಯೇ? ಇದು ಮಾತೃದ್ರೋಹ ಅಲ್ಲವೇ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೇರಿದಂತೆ ಅನರ್ಹ ಶಾಸಕರನ್ನು ಪ್ರಶ್ನಿಸಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಪರ ಭಾನುವಾರ ಪ್ರಚಾರ ನಡೆಸಿದ ಡಿ.ಕೆ. ಶಿವಕುಮಾರ್, ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾದ ಪಾಠ ಕಲಿಸಿ ಎಂದು ಕಾರ್ಯಕರ್ತರು ಹಾಗೂ ಮತದಾರರಿಗೆ ಕೈಮುಗಿದು ಕೇಳಿಕೊಂಡರು.

ಹೊಸಕೋಟೆ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡಿದ ಡಿ.ಕೆ. ಶಿವಕುಮಾರ್ ಅವರಿಗೆ ಹೋದಲೆಲ್ಲ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರಕಿತು. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಿವಕುಮಾರ್ ಅವರು ಸಾಥ್ ನೀಡಿದರು. ಅವರು ಹೋದೆಡೆಯೆಲ್ಲ ‘ಡೀಕೆ, ಡೀಕೆ’ ಎಂಬ ಘೋಷಣೆಗಳು ಕೇಳಿಬಂದವು. ತಮಗೆ ಸಿಕ್ಕ ಅಭೂತಪೂರ್ವ ಸ್ವಾಗತಕ್ಕೆ ಕೃತಜ್ಞತೆ ಸಲ್ಲಿಸಿ ಮಾತಾಡಿದ ಡಿ.ಕೆ. ಶಿವಕುಮಾರ್ ಒಟ್ಟಾರೆ ಹೇಳಿದ್ದಿಷ್ಟು:

‘ನಾನು ಬಂದಾಗ ನೀವು ತೋರುತ್ತಿರುವ ಅಭಿಮಾನ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಿಜೆಪಿ ಸ್ನೇಹಿತರು ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಿದಾಗ ನೀವೆಲ್ಲ ಮಾಡಿದ ಪೂಜೆ, ಪ್ರಾರ್ಥನೆ, ಹೋರಾಟದ ಪುಣ್ಯ ಫಲದಿಂದ ನಾನು ಇವತ್ತು ಮತ್ತೆ ನಿಮ್ಮ ಮುಂದೆ ಬಂದಿದ್ದೇನೆ. ಹೊಸಕೋಟೆ ರಣರಂಗದಲ್ಲಿ ಬಂದು ನಿಂತಿದ್ದೇನೆ. ನಾನು 7 ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದೇನೆ. ನನಗೂ ಸಣ್ಣ-ಪುಟ್ಟ ಆಸ್ತಿ ಇರಬಹುದು. ಆದರೆ ನಾನು ಎಂಟಿಬಿಯಷ್ಟು ಶ್ರೀಮಂತನಲ್ಲ. ಆದರೆ ನೀವು ತೋರಿದ ಪ್ರೀತಿ ಅಭಿಮಾನ ನೋಡಿ ನಿಮ್ಮ ಋಣ ಹೇಗೆ ತೀರಿಸಬೇಕು ಅಂತಾ ಗೊತ್ತಾಗುತ್ತಿಲ್ಲ. ನಿಮ್ಮಲ್ಲಿ ಅನೇಕ ಜನ ಮನೆಯಲ್ಲೇ ಕೂತು, ಅದರಲ್ಲೂ ಹೆಣ್ಣುಮಕ್ಕಳು, ಹಿರಿಯರು ಡಿಕೆ ಶಿವಕುಮಾರ್ ಗೆ ಆದ ಅನ್ಯಾಯ ನಮ್ಮ ಕುಟುಂಬದವರಿಗೆ ಆಗಿರುವಂಥದ್ದು ಎಂಬ ರೀತಿ ನೊಂದಿದ್ದೀರಿ. ನೊಂದು ನೀವೆಲ್ಲ ಪ್ರಾರ್ಥನೆ ಮಾಡಿದ್ದೀರಲ್ಲಾ, ನಿಮ್ಮ ಆ ಋಣ ತೀರಿಸಲು ನನಗೆ ಶಕ್ತಿ ಕೊಡಪ್ಪಾ ಅಂತ ಹೋದ ದೇವಸ್ಥಾನಗಳಲ್ಲೆಲ್ಲಾ ದೇವರನ್ನು ಪ್ರಾರ್ಥಿಸುತ್ತಿದ್ದೇನೆ.’

‘ಇದೊಂದು ವಿಶೇಷವಾದ ಚುನಾವಣೆ. ಸಿದ್ದರಾಮಯ್ಯನವರು ಈಗಾಗಲೇ ಪಕ್ಕದ ಹೋಬಳಿಯಲ್ಲಿ ಭಾಷಣ ಮಾಡುವಾಗ ಈ ಆಪರೇಷನ್ ಕಮಲದ ಬಗ್ಗೆ ಮಾತನಾಡಿ, ಯಡಿಯೂರಪ್ಪನವರನ್ನು ಆಪರೇಷನ್ ಕಮಲದ ಪಿತಾಮಹಾ ಎಂದಿದ್ದಾರೆ. ಹಳ್ಳಿಗಳ ಕಡೆ ದನ, ಕುರಿ, ಕೋಳಿಗಳಿಗೆ ಬೆಲೆ ಕಟ್ಟಿ ವ್ಯಾಪಾರ ಮಾಡಿದಂತೆ, ಒಂದು ಪಕ್ಷದಿಂದ ಗೆದ್ದ ಶಾಸಕರನ್ನು ಖರೀದಿ ಮಾಡಿ ಮತ್ತೊಂದು ಪಕ್ಷಕ್ಕೆ ಸೇರಿಸಿಕೊಳ್ಳುವ ಪದ್ಧತಿ ನಮ್ಮ ದೇಶದಲ್ಲೇ ಅಲ್ಲ ವಿಶ್ವದಲ್ಲೇ ಇರಲಿಲ್ಲ. ಇದು ಯಡಿಯೂರಪ್ಪನವರ ಕಾಲದಲ್ಲಿ ಅಸ್ತಿತ್ವಕ್ಕೆ ಬಂತು. ಇಂದು ಯಾವ ಮಟ್ಟಿಗೆ ಬಂದಿದೆ ಎಂದರೆ, ಮಂತ್ರಿಗಳನ್ನು ಕೂಡ ಖರೀದಿ ಮಾಡಿ ಆಪರೇಷನ್ ಕಮಲ ಮಾಡುವ ಸ್ಥಿತಿಗೆ ಬಂದು ನಿಂತಿದ್ದಾರೆ.’

‘ಕಳೆದ ಚುನಾವಣೆಯಲ್ಲಿ ನಾನು ಮತ್ತು ಕೃಷ್ಣ ಭೈರೇಗೌಡರು ಕೊನೆ ದಿನ ಬಂದು ಭಾಷಣ ಮಾಡಿ ಎಂಟಿಬಿ ನಾಗರಾಜ್ ಅವರಿಗೆ ನೀವು ಆಶೀರ್ವಾದ ಮಾಡಬೇಕು ಅಂತಾ ಕೇಳಿದ್ದೆವು. ನೀವು ಕೂಡ ಅವರನ್ನು ಗೆಲ್ಲಿಸಿಕೊಟ್ರಿ. ಗೆಲ್ಲಿಸಿದ ನಂತರ ಇಡೀ ಪಕ್ಷ ಸೇರಿ ಅವರಿಗೆ ಮಂತ್ರಿ ಸ್ಥಾನ ಕೊಡಿಸಿತು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ, ಎಂಟಿಬಿ ಅವರು ಏನೇ ಕೆಲಸ ಹೇಳಿದರೂ, ಅದು ವೈಯಕ್ತಿಕ ಕೆಲಸವೇ ಆಗಲಿ ಅಥವಾ ಕ್ಷೇತ್ರದ ಕೆಲಸವೇ ಆಗಲಿ, ಅದರಲ್ಲಿ ಒಂದೂ ಕೆಲಸವನ್ನು ಇಲ್ಲ ಎಂದಿರಲಿಲ್ಲ. ಸಾವಿರಾರು ಕೋಟಿ ರುಪಾಯಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಮಂಜೂರು ಮಾಡಿದ್ದರು. ಇವತ್ತು ಎಂಟಿಬಿ ನಾಗರಾಜ್ ಅವರಿಗೆ ಹೆಸರು ಬಂದಿದ್ದರೆ, ಅವರು ಶಾಸಕ, ಮಂತ್ರಿ ಆಗಿದ್ದರೆ ಅದಕ್ಕೆ ಕಾರಣ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷದಿಂದ ಮಾತ್ರ.’

‘ನಾನು ಇವತ್ತು ಎಂಟಿಬಿ ನಾಗರಾಜ್ ಅವರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಕಾಂಗ್ರೆಸ್ ನಿಮಗೆ ಏನು ಮೋಸ ಮಾಡಿದೆ? ಪಕ್ಷದ ಚಿಹ್ನೆ ಕೊಟ್ಟು, ಗೆಲ್ಲಿಸಿ, ಮಂತ್ರಿ ಮಾಡಿ ಅಧಿಕಾರ ಕೊಟ್ಟಿತು. ಹೊಸಕೋಟೆ ಮಹಾಜನತೆ ಮೂರು ಬಾರಿ ವಿಧಾನಸೌಧಕ್ಕೆ ಕಳುಹಿಸಿದರು. ಎಷ್ಟೇ ದೊಡ್ಡ ಶ್ರೀಮಂತ ಆದರೂ ವಿಧಾನಸೌಧಕ್ಕೆ ಹೋಗೋದು ಸುಲಭ ಅಲ್ಲ. ಈ ಜನತೆ ಆಶೀರ್ವಾದ ಇಲ್ಲ ಅಂದ್ರೆ ಯಾವ ಶ್ರೀಮಂತಿಕೆಯಿಂದಲೂ ವಿಧಾನಸೌಧಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮ ಹಣ ನಿಮ್ಮ ಪ್ರೀತಿ ಮುಂದೆ ಗೌಣ. ಇದನ್ನು ಎಂಟಿಬಿ ಅರ್ಥ ಮಾಡಿಕೊಳ್ಳಬೇಕಿತ್ತು.’

‘ಅವರು ನಿಮ್ಮ ಮತಕ್ಕೆ ಎಷ್ಟೇ ದುಡ್ಡು ಕೊಡಲಿ, 5 ಸಾವಿರ ಕೊಡಲಿ ಅಥವಾ 10ಸಾವಿರ ಕೊಡಲಿ ಅದನ್ನು ಬೇಡ ಎನ್ನಬೇಡಿ. ಮೊದಲು ಅದನ್ನು ತೆಗೆದುಕೊಳ್ಳಿ. ಯಾವುದನ್ನೂ ಬಿಡಬೇಡಿ. ಎಲ್ಲವನ್ನು ಪಡೆದು ಮತ್ತೆ ಈ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಂದಿದ್ದಾರೆ ಅಂತಾ ನಿಮ್ಮ ಕೈಗೆ, ನಿಮ್ಮ ಹಸ್ತದ ಗುರುತಿಗೆ ಮತ ಹಾಕಿ.

ಮ್ಯಾಚ್ ಫಿಕ್ಸಿಂಗ್ ಎಲ್ಲ ಮಾಡಲು ಸಾಧ್ಯವಿಲ್ಲ. ನಾವು 30, 40 ವರ್ಷಗಳ ಕಾಲ ಸಾಕಿದ್ದೀವಿ. ಇಲ್ಲಿನ ಅನೇಕ ನಾಯಕರು, ಸಿಎಂ ಲಿಂಗಪ್ಪ, ರೇವಣ್ಣ ಜತೆ ನಾವು ಮಾತನಾಡಿ ಅವತ್ತು ಚಿಕ್ಕೇಗೌಡ್ರು, ಮುನೆಗೌಡ್ರಿಗೆ ಕೊಡಬೇಕಿದ್ದ ಬಿ ಫಾರ್ಮ್ ಅನ್ನು ತೆಗೆದುಕೊಂಡು ನಾಗರಾಜ್ ಅವರಿಗೆ ನೀಡಿದೆವು. ಅವತ್ತು ನಾವು ಟಿಕೆಟ್ ಕೊಡದಿದ್ದರೆ ಎಂಟಿಬಿ ಶಾಸಕರಾಗುತ್ತಿದ್ರಾ, ಮಂತ್ರಿಯಾಗುತ್ತಿದ್ರಾ?!’

‘ಇವತ್ತು ರಾಜಕೀಯ ಇತಿಹಾಸ ನೋಡಿದಾಗ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಮಧ್ಯರಾತ್ರಿ ನಾನು ಮತ್ತು ಎಂಎಲ್ಸಿ ರವಿ ಅವರು ಎಂಟಿಬಿ ಅವರ ಮನೆಗೆ ಹೋಗಿದ್ದೆವು. ರಾತ್ರಿ ಎಲ್ಲಾ ಮಾತನಾಡಿದೆವು. ಆಗ ಅವರ ಮಗ ಪಾಪ ಅಶೋಕ್ ಗೆ ನೇರವಾಗಿ ವಿಡಿಯೋ ಕಾಲ್ ಮಾಡುತ್ತಿದ್ದ. ನಾನು ಆಗ ಕೇಳಿದೆ. ಇಷ್ಟೇಲ್ಲ ಕಷ್ಟಪಟ್ಟು ಸಹಾಯ ಮಾಡಿದ್ದೇವೆ. ಎಲ್ಲ ಸೇರಿ ಮಂತ್ರಿ ಮಾಡಿದ್ದೇವೆ. ಅಧಿಕಾರ ಇದೆ. ಬಡವರಿಗೆ ಸಹಾಯ ಮಾಡೋದು ಬಿಟ್ಟು ಈ ರೀತಿ ಕೆಲಸ ಯಾಕೆ ಮಾಡುತ್ತಿದ್ದೀಯಾ ಅಂತಾ ಕೇಳಿದೆವು. ಆದರೂ ಅವರು ಕಾಂಗ್ರೆಸ್ ಬೆನ್ನಿಗೆ ಇರಿದು ಹೋದರು.’

‘ನಮ್ಮ ಅಭ್ಯರ್ಥಿ ಪದ್ಮಾವತಿ ಅವರು ಲಕ್ಷ್ಮಿ ಇದ್ದಂತೆ. ಆಕೆಯನ್ನು ಬಾಗಿಲು ತೆರೆದು ಮನೆ ಒಳಗೆ ಕರೆಸಿಕೊಳ್ಳಿ. ನಿಮಗೆ ಒಳ್ಳೆಯದಾಗುತ್ತದೆ. 20 ವರ್ಷದ ಹಿಂದೆ ಎಂಬಿಟಿಗೆ ನಾನೇ ಬಿ ಫಾರಂ ಕೊಡಿಸಿದ್ದೆ. ಸ್ವತಃ ಎಸ್.ಎಂ ಕೃಷ್ಣ ಅವರೂ ಪ್ರಚಾರ ಮಾಡಿ ಗೆಲ್ಲಿಸಿದ್ರು. ಎಂಟಿಬಿ ದೊಡ್ಡ ಶ್ರೀಮಂತರು ಅನ್ನೋದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಅವರಿಗೆ ರಾಜಕೀಯ ಶಕ್ತಿ ಕೊಟ್ಟು ಬೆಳೆಸಿದ್ದು ಕಾಂಗ್ರೆಸ್. ಯಾರನ್ನು ಹೇಳದೇ ಕೇಳದೇ, ಮತ ಕೊಟ್ಟ ನಿಮ್ಮನ್ನು ಪರಿಗಣಿಸದೇ ಏಕಾಏಕಿ ತೀರ್ಮಾನ ಕೈಗೊಂಡಿದ್ದಾರೆ. ಸೀಟು ಕೊಟ್ಟವರಿಗೂ ಬೆಲೆ ಇಲ್ಲ, ಮತ ಕೊಟ್ಟವರಿಗೂ ಬೆಲೆ ಇಲ್ಲದಂತೆ ಮಾಡಿದ್ದಾರೆ. ಸಿಕ್ಕ ಮಂತ್ರಿ ಸ್ಥಾನ ಧಿಕ್ಕರಿಸಿ ಏನು ಸಾಧಿಸಲು ಹೊರಟಿದ್ದಾರೆ. ರಾಜಕೀಯದಲ್ಲಿ ಇವರು ಮಾಡಿರುವ ತಾಯಿದ್ರೋಹವನ್ನು ಯಾರೂ ಕೂಡ ಮರೆಯಬಾರದು. ಕಾಂಗ್ರೆಸ್ ಎಲ್ಲವನ್ನು ಕೊಟ್ಟಿದೆ. ಆದರೂ ಅದಕ್ಕೆ ದ್ರೋಹ ಬಗೆದಿದ್ದಾರೆ. 15 ಕ್ಷೇತ್ರಗಳಲ್ಲೂ ಮತದಾರರು ಅನರ್ಹರಿಗೆ ಬುದ್ಧಿ ಕಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ.’

Leave a Reply