‘ಮಹಾ’ ಸರ್ಕಾರ ಬಹುಮತ ಸಾಬೀತಿಗೆ ಸುಪ್ರೀಂ ಮುಹೂರ್ತ!

ಡಿಜಿಟಲ್ ಕನ್ನಡ ಟೀಮ್:

ನಾಟಕೀಯ ಬೆಳವಣಿಗೆಯಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಅವರು ನಾಳೆ ಸಂಜೆ 4.30ಕ್ಕೆ ಬಹುಮತ ಸಾಬೀತುಪಡಿಸಲು ಸುಪ್ರೀಂಕೋರ್ಟ್ ಮುಹೂರ್ತ ನಿಗದಿಪಡಿಸಿದೆ.

ದಿಢೀರ್ ಬೆಳವಣಿಗೆಯಲ್ಲಿ ರಚನೆಯಾದ ಮಹಾರಾಷ್ಟ್ರ ಸರಕಾರದ ವಿರುದ್ಧ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎನ್.ವಿ ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠ, ‘ನ್ಯಾಯಾಂಗವು ಕಾರ್ಯಾಂಗದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ವಿಶೇಷ ಸಂದರ್ಭದಲ್ಲಿ ಅಧಿಕಾರ ಮೊಟಕಾದಾಗ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟಿತು. ನಂತರ ಬಹುಮತ ಸಾಬೀತು ಪಡಿಸಲು ಸೂಚಿಸಿತು.

ಶನಿವಾರ ಬೆಳಗಿನ ಜಾವ ರಾಷ್ಟ್ರಪತಿ ಆಳ್ವಿಕೆ ತೆರವುಗೊಳಿಸಿ ಆತುರದಲ್ಲಿ ರಾಜ್ಯಪಾಲ ಕೊಶ್ಯಾರಿ ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಪ್ರಮಾಣ ವಚನ ನೀಡಿದರು. ಈ ಬೆಳವಣಿಗೆ ಇಡೀ ದೇಶದ ಗಮನವನ್ನೇ ಸೆಳೆದಿತ್ತು.

ಆದರೆ ನಂತರದ ಬೆಳವಣಿಗೆಯಲ್ಲಿ ಎನ್ ಸಿಪಿ ನಾಯಕ ಶರದ್ ಪವಾರ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿಲ್ಲ ಎಂದು ಉದ್ಧವ್ ಠಾಕ್ರೆ ಜತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ನಂತರ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಅಡ್ಡ ದಾರಿಯಲ್ಲಿ ಸರ್ಕಾರ ರಚಿಸಿದೆ ಎಂದು ಟೀಕಿಸಿದಲ್ಲದೆ ಎನ್ ಸಿಪಿ ಹಾಗೂ ಶಿವಸೇನಾ ಜತೆ ಸೇರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.

Leave a Reply