ಅನರ್ಹರ ರಾಜಕೀಯ ಸಮಾಧಿಗೆ ಮತದಾರ ಕೊನೆ ಹಾರ ಹಾಕುತ್ತಾನೆ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಅಧಿಕಾರ ಅನುಭವಿಸಿದರೂ ಪಕ್ಷಕ್ಕೆ ದ್ರೋಹ ಬಗೆದ ಅನರ್ಹ ಶಾಸಕರು ರಾಜಕೀಯ ಸಮಾಧಿಯಾಗ್ತಾರೆ ಅಂತಾ ವಿಧಾನಸಭೆಯಲ್ಲಿ ಹೇಳಿದ್ದೆ. ಅವರ ರಾಜಕೀಯ ಸಮಾಧಿಗೆ ಮತದಾರ ಕೊನೆ ಹಾರ ಹಾಕುತ್ತಾನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ಹೊಸಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಪ್ರಚಾರ ಮಾಡಿದ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

ಈಗಾಗಲೇ ನಮ್ಮ ಪಕ್ಷದ ನಾಯಕರು ಎಂಟಿಬಿ ನಾಗರಾಜ್ ವಿಚಾರವಾಗಿ ಸಾಕಷ್ಟು ಚರ್ಚೆ ಮಾಡಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದ ಈ ಅನರ್ಹರು ರಾಜಕೀಯವಾಗಿ ಸಮಾಧಿ ಆಗ್ತಾರೆ ಅಂತಾ ನಾನು ವಿಧಾನಸಭೆಯಲ್ಲಿ ಹೇಳಿದ್ದೆ. ಯಾರು ಏನೇ ಮಾಡಿದರೂ ಮೇಲೊಬ್ಬ ಎಲ್ಲವನ್ನು ನೋಡುತ್ತಿದ್ದಾನೆ ಅವನು ಮನಸ್ಸು ಮಾಡಿದರೆ ಈ ಅನರ್ಹರಲ್ಲಿ ಯಾರೂ ಗೆಲ್ಲುವುದಿಲ್ಲ. ನೀವು ಮತ್ತೆ ಕಾಂಗ್ರೆಸ್ ಗೆ ಮತ ಹಾಕ್ತೀರಿ ಅಂತಾ ವಿಶ್ವಾಸ ಇದೆ. ಸುಪ್ರೀಂಕೋರ್ಟ್ ಕೂಡ ನೀನು ಅನರ್ಹ, ನೀನು ಚುನಾವಣೆ ಗೆಲ್ಲದೇ ಮಂತ್ರಿ ಆಗುವುದಿಲ್ಲ ಅಂತಾ. ಹೀಗಾಗಿ ಯಡಿಯೂರಪ್ಪ ಏನೇ ಆಸ್ತಿ ಬರೆದುಕೊಟ್ಟರು ಈತ ಗೆಲ್ಲುವುದಿಲ್ಲ.

ನಮ್ಮ ಸರ್ಕಾರದಲ್ಲಿ ಮಂತ್ರಿ ಆಗಿದ್ದರಲ್ಲ ಈಗ ಮತ್ಯಾವ ಮಂತ್ರಿ ಆಗಬೇಕು? ಪಕ್ಷಕ್ಕೆ ದ್ರೋಹ ಬಗೆದವರ ರಾಜಕೀಯ ಸಮಾಧಿಗೆ ಮತದಾರರಾದ ನೀವು ಕೊನೆ ಹಾರ ಹಾಕಬೇಕು. ತಾಯಿಗೆ ದ್ರೋಹ ಬಗೆದವರು ಮತ್ತೆ ಯಾವತ್ತೂ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಆ ರೀತಿ ಪಾಠ ಕಲಿಸಬೇಕು.

ಅವತ್ತು ನಾನು, ಎಸ್ಎಂ ಕೃಷ್ಟ, ಕೃಷ್ಣಪ್ಪ, ಮುನೇಗೌಡ್ರು, ಚಿಕ್ಕೆಗೌಡ್ರು ನಾವೆಲ್ಲಾ ಸೇರಿ ಎಂಟಿಬಿ ಕರೆದುಕೊಂಡು ಬಂದು ಟಿಕೆಟ್ ಕೊಟ್ಟೆವು. ಅವತ್ತು ನಮ್ಮ ಜವಾಬ್ದಾರಿ ಅಂತಾ ಹೇಳಿ ಮತ ಕೇಳಿದೆವು. ನೀವು ಗೆಲ್ಲಿಸಿದಿರಿ ನಾವು ಬೆಳೆಸಿದೆವು. ದಿನೇಶ್ ಹೇಳಿದಂತೆ ನಾವು ಏನು ಕಡಿಮೆ ಮಾಡಿದ್ದೀವಿ? ನಾವು ಅನುದಾನ ಕೊಟ್ಟಿದ್ದು ಅಭಿವೃದ್ಧಿಗಲ್ಲವೇ? ಇನ್ನೇನು ಕೊಡಬೇಕಿತ್ತು ಅವರಿಗೆ?

ನಾನು ಕೃಷ್ಣಭೈರೇಗೌಡ ರಾತ್ರಿಎಲ್ಲ ನ್ಯಾಯ ಹೇಳಿದೆವು. ಅವರನ್ನು ನಾವು ಬೆಳೆಸಿದ್ರು, ಸಿದ್ದರಾಮಯ್ಯ ಅವರ ಮಾತು ಕೇಳ್ತಾರೆ ಅಂತಾ ಅವರ ಮನೆಗೂ ಕರೆದುಕೊಂಡು ಹೋದೆವು. ಆಗ ನಾನು ಸುಧಾಕರ್ ನನ್ನು ಕೇಳಬೇಕು ಅಂತಾ ಹೇಳ್ತಾರೆ. ಕೊನೆಗೆ ಸಿದ್ದರಾಮಯ್ಯ ಅವರ ಮನೆ ಹತ್ರ ಮೈಕಲ್ಲಿ ನಾನು ಇಲ್ಲೇ ಇರ್ತೀನಿ ಅಂತಾ ಹೇಳಿ ಆಮೇಲೆ ಬಾಂಬೆಗೆ ಓಡಿ ಹೋದರು.

ಈ ಚುನಾವಣೆಯಲ್ಲಿ ಪದ್ಮಾವತಿ ಸುರೇಶ್ ಗೆ ನಾನು ಟಿಕೆಟ್ ಕೊಟ್ಟಿಲ್ಲ. ದಿನೇಶ್ ಕೊಟ್ಟಿಲ್ಲ, ಸಿದ್ದರಾಮಯ್ಯ ಕೊಟ್ಟಿಲ್ಲ, ಟಿಕೆಟ್ ಕೊಟ್ಟಿರೋದು ಸೋನಿಯಾ ಗಾಂಧಿ. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಇಂದಿರಾಗಾಂಧಿ ಅವರ ಸೊಸೆ, ರಾಜೀವ್ ಗಾಂಧಿ ಅವರ ಧರ್ಮಪತ್ನಿ ಆ ತಾಯಿ ಇಂದು ಪದ್ಮಾವತಿ ಸುರೇಶ್ ಗೆ ಟಿಕೆಟ್ ನೀಡಿದ್ದಾರೆ. ಯುಪಿಎ ಸರ್ಕಾರ ಮಾಡುವಾಗ ಎಲ್ಲ ಸಂಸದರು ಬೆಂಬಲ ನೀಡಿದರೂ ಪ್ರಧಾನಿ ಸ್ಥಾನವನ್ನು ದೇಶದ ಆರ್ಥಿಕತೆ, ಅಭಿವೃದ್ಧಿ, ಯುವಕರಿಗೆ ಉದ್ಯೋಗ ಸಿಗಲಿ ಅಂತಾ ತ್ಯಾಗ ಮಾಡಿದ ತಾಯಿ ಆಕೆ. ಆಕೆ ಇವತ್ತು ಪದ್ಮಾವತಿ ಅವರಿಗೆ ಹಸ್ತದ ಚಿಹ್ನೆ ಕೊಟ್ಟಿದ್ದಾರೆ. ಇವತ್ತು ಆ ಹೆಣ್ಣುಮಗಳ ಬಗ್ಗೆ ಮಾತಾಡ್ತಾನಲ್ಲಾ ಈ ಎಂಟಿಬಿ ನಾಗರಾಜ್.

ಈ ಹೆಣ್ಣುಮಗಳು ಲಕ್ಷ್ಮಿ, ನಿಮ್ಮ ಮನೆ ಬಾಗಿಲಿಗೆ ಬಂದಿದ್ದಾಳೆ. ಪೂಜೆ ಮಾಡಿ ಬಾಗಿಲು ತೆಗೆದು ಒಳಗೆ ಕರೆದುಕೊಂಡು ನಿಮ್ಮ ಮನೆ ಬೆಳಕು ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ನೀವು ನಿಮ್ಮ ಮತ ಮಾರಿಕೊಳ್ಳಬೇಡಿ. ಇವತ್ತು ಇಷ್ಟು ಜನ ನಾಯಕರು ಇಲ್ಲಿಗೆ ಬಂದಿರೋದು ನಾವೆಲ್ಲರೂ ನಿಮ್ಮ ಜತೆ ಇದ್ದೇವೆ ಎಂದು ಹೇಳುವುದಕ್ಕೆ.

ನಾನಿರಬಹುದು, ಸಿದ್ದರಾಮಯ್ಯ ಇರಬಹುದು, ಖರ್ಗೆ ಇರಬಹುದು, ಎಲ್ಲರೂ ಬಂದಿರೋದು ನಿಮ್ಮ ಕಷ್ಟದಲ್ಲಿ ನಿಮ್ಮ ಜತೆ ಇದ್ದೇವೆ. ನೀವು ಈ ಹೆಣ್ಣುಮಗಳನ್ನು ಗೆಲ್ಲಿಸಬೇಕು ಅಂತಾ ಕೇಳಿಕೊಳ್ಳುತ್ತೇವೆ.

Leave a Reply