ಸೇಫ್ಟಿಗಾಗಿ ಶುರುವಾಯ್ತು ಎರಡನೇ ಆಪರೇಷನ್ ಕಮಲ..!?

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲದ ಮೂಲಕ 17 ಶಾಸಕರ ರಾಜೀನಾಮೆ ಕೊಡಿಸಿ ಅಧಿಕಾರದ ಗದ್ದುಗೆ ಹಿಡಿದಿರುವ ಬಿಜೆಪಿ ಉಪ ಚುನಾವಣೆ ಬೆನ್ನಲೇ ಎರಡನೇ ಆಪರೇಷನ್ ಗೆ ಸಿದ್ಧವಾಗಿದೆ.

ನಾಳೆ ನಡೆಯುತ್ತಿರುವ 15 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವಂತಹ ಫಲಿತಾಂಶ ಬರುವುದು ಅನುಮಾನ ಅನ್ನೊ ಲೆಕ್ಕಾಚಾರ ಶುರುವಾದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಕುರ್ಚಿ ಬಿಟ್ಟು ಇಳಿಯಬೇಕಾದ ಸ್ಥಿತಿಯನ್ನು ತಪ್ಪಿಸಲು ಮತ್ತೆ ಆಪರೇಷನ್ ಗೆ ಆದೇಶ ಕೊಟ್ಟಿದ್ದಾರೆ. ಆಪ್ತರ ಬಳಿ ಈ ಬಗ್ಗೆ ಗೌಪ್ಯವಾಗಿ ತಿಳಿಸಿರುವ ಸಿಎಂ ಡಿಸೆಂಬರ್ 9 ರಂದು ಫಲಿತಾಂಶ ಏನೇ ಬಂದರೂ ಸರ್ಕಾರಕ್ಕೆ ಯಾವುದೇ ಆತಂಕ ಎದುರಾಗಬಾರದು, ಈ ಬಗ್ಗೆ ಮಾಸ್ಟರ್ ಪ್ಲ್ಯಾನ್ ರೂಪಿಸಿ ಎಂದಿದ್ದಾರೆ.

ಈಗಾಗಲೇ ಸಿಎಂ ಆಪ್ತ ಬಳಗ ತನ್ನ ನಾಯಕ ಕೊಟ್ಟ ಆಪರೇಷನ್ ಕಂಪ್ಲೀಟ್ ಮಾಡಲು ಕೆಲಸ ಶುರು ಮಾಡಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಕಂಪ್ಲಿ ಶಾಸಕ ಗಣೇಶ್, ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌವ್ಹಾಣ್, ಚಾಮುಂಡೇಶ್ವರಿ ಶಾಸಕ ಜಿ.ಟಿ‌.ದೇವೇಗೌಡ, ಸಿಂಧಗಿ ಶಾಸಕ ಎಂ.ಸಿ ಮನಗೂಳಿ ಜೊತೆಗೆ ಬಿಜೆಪಿಯ ಬಿ.ಎಸ್ ಯಡಿಯೂರಪ್ಪ ಆಪ್ತ ನಾಯಕರು ಸಂಪರ್ಕ ಸಾಧಿಸಿದ್ದಾರೆ. ಫಲಿತಾಂಶ ಬಿಜೆಪಿಗೆ ವಿರೋಧವಾಗಿ ಬಂದ್ರೆ ಕೂಡಲೇ ರಾಜೀನಾಮೆ ನೀಡಬೇಕು ಎನ್ನುವ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿರೋ ಕಾಂಗ್ರೆಸ್ ನಾಯಕರು, ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿರುವ ಕಾಂಗ್ರೆಸ್ ಮುಖಂಡರು, ಬಿಜೆಪಿ ಬಲೆ ಬೀಸಿರೋ ಶಾಸಕರನ್ನ ಭೇಟಿಯಾಗಲು ಪ್ರಯತ್ನ ನಡೆಸಿದ್ದಾರೆ.

ಬಿಜೆಪಿಯ ಸೀಕ್ರೆಟ್ ಆಪರೇಷನ್ ನಿನ್ನೆ ರಾತ್ರಿಯೇ ಬಹಿರಂಗವಾಗಿದ್ದು, ಬಿಜೆಪಿ ಸೆಕೆಂಡ್ ಆಪರೇಷನ್ ಕಮಲಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬೆಚ್ಚಿಬಿದ್ದಿದ್ದಾರೆ. ಕಾಂಗ್ರೆಸ್ ಶಾಸಕರ ಜೊತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಟ್ಸಪ್ ಕಾಲ್ ಮೂಲಕ ಮಾತುಕತೆ ನಡೆಸಿದ್ದು, ಬಿಜೆಪಿಯ ಯಾವುದೇ ಆಮಿಷಗಳಿಗೆ ಬಲಿಯಾಗದಂತೆ ಮನವಿ ಮಾಡಿದ್ದಾರೆ. ನಾಳೆ ಸಂಜೆಯೊಳಗೆ ಬೆಂಗಳೂರಿಗೆ ಬಂದು ಭೇಟಿಯಾಗುವಂತೆಯೂ ಸೂಚನೆ ಕೊಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕೂಡ ಜಿ.ಟಿ ದೇವೇಗೌಡ ಅವರನ್ನು ಹೊರತುಪಡಿಸಿ ಉಳಿದ ಜೆಡಿಎಸ್ ಶಾಸಕರ ಜೊತೆ ಸಂಪರ್ಕ ಸಾಧಿಸಿದ್ದು, ಬಿಜೆಪಿ ನಾಯಕರು ತೋರಿಸುವ ಆಸೆ ಆಮಿಷಗಳಿಗೆ ಬಲಿಯಾಗದಂತೆ ಮನವಿ ಮಾಡಿದ್ದಾರೆ.

ಆಪರೇಷನ್ ಕಮಲದ ವಿರುದ್ಧ ಕಾಂಗ್ರೆಸ್ ನಾಯಕರು ಹೋರಾಟ ರೂಪಿಸಲು ಮುಂದಾಗಿದ್ದು, ಫಲಿತಾಂಶ ಬಂದ ಬಳಿಕ ಮತ್ತೆ ಆಪರೇಷನ್ ಕಮಲ ಮಾಡುವ ಮುನ್ಸೂಚನೆ ಸಿಗುತ್ತಿದ್ದ ಹಾಗೆ ಈ ಬಾರಿ ರಾಜ್ಯಾದ್ಯಂತ ಬೀದಿಗಿಳಿದು ದೊಡ್ಡಮಟ್ಟದ ಹೋರಾಟ ರೂಪಿಸುವ ಚಿಂತನೆಯಲ್ಲಿದೆ. ಕಾಂಗ್ರೆಸ್ ಪಕ್ಷದ ಸಹ ಸಂಘಟನೆಗಳಾದ ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ವಿದ್ಯಾರ್ಥಿ ಕಾಂಗ್ರೆಸ್, ಕಾಂಗ್ರೆಸ್‌ನ ವಿವಿಧ ಮೋರ್ಚಾಗಳನ್ನು ಬಳಸಿಕೊಂಡು ಹೋರಾಟ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗ್ತಿದೆ. ಒಟ್ಟಾರೆ ಸೆಕೆಂಡ್ ಆಪರೇಷನ್ ಕಮಲ ಜಾರಿಯಾಗಿದೆ ಅನ್ನೋ ಮಾಹಿತಿ ಪಕ್ಕಾ ಆಗಿದ್ರೆ ಬಿಜೆಪಿ ಗೆಲ್ಲುವ ಚಾನ್ಸಸ್ ಕಡಿಮೆ ಆಗಿದ್ದು, ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳುವ ಕೆಲಸಕ್ಕೆ ಕೈ ಹಾಕಿದೆ ಅನ್ನೋದು ಸತ್ಯವಾಗಿದೆ.

Leave a Reply