ನಿರ್ಮಲಕ್ಕ ಈರುಳ್ಳಿ- ಬೆಳ್ಳುಳ್ಳಿ ತಿನ್ನೋಲ್ವಂತೆ, ಅದಕ್ಕೆ ಬೆಲೆ ಏರಿಕೆ ಬಗ್ಗೆ ಚಿಂತಿಸಲ್ವಂತೆ!

ಡಿಜಿಟಲ್ ಕನ್ನಡ ಟೀಮ್:

ನಾನು ಈರುಳ್ಳಿ, ಬೆಳ್ಳುಳ್ಳಿ ತಿನ್ನದ ಕುಟುಂಬದಿಂದ ಬಂದಿದ್ದು, ಹೀಗಾಗಿ ಇವುಗಳ ಬೆಲೆ ಏರಿಕೆ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ… ಇದು ಸನ್ಮಾನ್ಯ ಆರ್ಥಿಕ ಸಚಿವೆ ನಿರ್ಮಲಾ ಸೀತರಾಮನ್ ಅವರು ಲೋಕಸಭೆಯಲ್ಲಿ ಕೊಟ್ಟ ಹೇಳಿಕೆ.

ದೇಶದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆ ಇರುವ ಪರಿಣಾಮ ಈರುಳ್ಳಿ ಬೆಲೆ ಕೆಜಿಗೆ 200ರ ಗಡಿಯ ಸಮೀಪಕ್ಕೆ ಸಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ಆರಂಭವಾದಾಗ ಎನ್ಸಿಪಿ ಸಂಸದೆ ಸುಪ್ರಿಯಾ ಸುಲೆ ಅವರ ಪ್ರಶ್ನೆಗೆ ನಮ್ಮ ಸಚಿವರು ಕೊಟ್ಟಿರೋ ಉತ್ತರ ಈಗ ನಗೆಪಾಟಲಿಗೆ ಗುರಿಯಾಗಿದೆ.

ಸುಪ್ರಿಯಾ ಅವರು ಈರುಳ್ಳಿ ಬೆಲೆ ಏರಿಕೆ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತರಾಮನ್ ಉತ್ತರ ಕೊಟ್ಟಿದ್ದು ಹೀಗೆ…

‘ನಾನು ಬಹಳಷ್ಟು ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ. ಈರುಳ್ಳಿ ಬೆಳ್ಳುಳ್ಳಿಯನ್ನು ತಿನ್ನದ ಕುಟುಂಬದಿಂದ ನಾನು ಬಂದಿದ್ದೇನೆ. ಹೀಗಾಗಿ ಈರುಳ್ಳಿ ಬೆಲೆ ಏರಿಕೆ ಕುರಿತು ನಾನು ಹೆಚ್ಚು ಚಿಂತಿಸುವುದಿಲ್ಲ’ ಎಂಬರ್ಥದಲ್ಲಿ ಉತ್ತರಿಸಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿ ಕೂತಿರುವ ನಿರ್ಮಲಾ ಅವರ ಉತ್ತರ ಕೇಳಿ ಇಡೀ ಸದನ ದಂಗಾಗಿದೆ. ಸ್ವಲ್ಪ ಸಮಯದ ನಂತರ ತಮ್ಮ ಹೇಳಿಕೆಯ ಪರಿಣಾಮ ಅರಿತ ನಿರ್ಮಲಾ ಸೀತರಾಮನ್ ಅವರು, ‘ಈರುಳ್ಳಿ ಉತ್ಪಾದನೆ ಈ ವರ್ಷ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿರುವ ಪರಿಣಾಮ ಹಲವೆಡೆ ಬೆಲೆ ಕೆ.ಜಿ ಗೆ 100 ರೂ ದಾಟಿದೆ. ಹೀಗಾಗಿ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವ ಸಲುವಾಗಿ ರಫ್ತು ನಿಲ್ಲಿಸಲಾಗಿದೆ. ಅಲ್ಲದೆ, ಅಧಿಕ ಪ್ರಮಾಣದಲ್ಲಿ ಶೇಖರಿಸಲು ಹಾಗೂ ಹೆಚ್ಚುವರಿ ಈರುಳ್ಳಿಯನ್ನು ವಿದೇಶಗಳಿಂದ ಆಮದು ಮಾಡಿಕೊಂಡು ಕೊರತೆ ಇರುವ ಸ್ಥಳಗಳಿಗೆ ಪೂರೈಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ’ ಎಂದು ಉತ್ತರಿಸಿ ತೇಪೆ ಹಚ್ಚುವ ಕೆಲಸ ಮಾಡಿದರು.

Leave a Reply