ಹೊಸ ಇತಿಹಾಸಕ್ಕೆ ನಾಂದಿ ಹಾಡಿದ ಉಪಚುನಾವಣೆ! ಅನರ್ಹರನ್ನು ಅರ್ಹರು ಎಂದು ತೀರ್ಮಾನಿಸಿದ ಮತದಾರ

ಡಿಜಿಟಲ್ ಕನ್ನಡ ಟೀಮ್:

ಅನರ್ಹ ಶಾಸಕರು ಅರ್ಹರು, ಮಂಡ್ಯದಲ್ಲಿ ಮೊದಲ ಬಾರಿಗೆ ಅರಳಿದ ಕಮಲ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವಿಜಯ ಪತಾಕೆ, ಸ್ಥಿರ ಸರ್ಕಾರದತ್ತ ಮತದಾರನ ಒಲವು… ಇವಿಷ್ಟು 15 ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶದ ಒಟ್ಟಾರೆ ಸಾರಾಂಶ.

15 ವಿಧಾನಸಭಾ ಕ್ಷೇತಗಳ ಪೈಕಿ ಬಿಜೆಪಿ 12, ಕಾಂಗ್ರೆಸ್ 2, ಇತರೆ 1, ಜೆಡಿಎಸ್ 0 ಸಾಧನೆ ಮಾಡಿವೆ. ಇದರೊಂದಿಗೆ ವಿಧಾನಸಭೆಯಲ್ಲಿ ಬಿಜೆಪಿ 117, ಕಾಂಗ್ರೆಸ್ 68, ಜೆಡಿಎಸ್ 34, ಇತರೆ 3 ಸಂಖ್ಯಾಬಲ ಸಾಧಿಸಿದ್ದು, ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಂತಾಗಿದೆ.

ಹುಣಸೂರಿನಲ್ಲಿ ಹೆಚ್.ಪಿ ಮಂಜುನಾಥ್ ಗೆಲುವು, ಶಿವಾಜಿನಗರದಲ್ಲಿ ರಿಜ್ವಾನ್ ಹರ್ಷದ್ ಮುನ್ನಡೆ, ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೆಗೌಡ ಮುನ್ನಡೆ ಸಾಧಿಸಿದ್ದು ಉಳಿದೆಲ್ಲೆಡೆ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.

ಇನ್ನು ಈ ಫಲಿತಾಂಶ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದು, ಕೆ.ಆರ್ ಪೇಟೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿಗೆ ಮಂಡ್ಯದಲ್ಲಿ ಅರಳಿದೆ. ಇಲ್ಲಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೆಂದ್ರ ಅವರು ನಾರಾಯಣ ಗೌಡರನ್ನು ಗೆಲ್ಲಿಸುವ ಮೂಲಕ ಮಂಡ್ಯ ರಾಜಕೀಯದಲ್ಲಿ ಭದ್ರವಾಗಿ ಕಾಲಿಟ್ಟಿದ್ದಾರೆ.

ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆ ಇದ್ದ ಚಿಕ್ಕಬಳ್ಳಾಪುರವನ್ನು ಸುಧಾಕರ್ ಬಿಜೆಪಿ ತೆಕ್ಕೆಗೆ ತಂದುಕೊಟ್ಟಿದ್ದಾರೆ. ಇನ್ನು ಫಲಿತಾಂಶದ ನಂತರ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದ್ದ ಜೆಡಿಎಸ್ ಖಾತೆ ತೆರೆಯದೆ ಮಕಾಡೆ ಮಲಗಿದೆ.

ಇನ್ನು ಹೊಸಕೋಟೆಯ ಶರತ್ ಗೆಲುವಿನತ್ತ ಸಾಗಿದ್ದು, ಎಂಟಿಬಿ ನಾಗರಾಜ್ ಮುಖಭಂಗ ಅನುಭವಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದರೂ ರಾಜಕೀಯ ರಣರಂಗದ ಪಂಥಾಹ್ವಾನದಲ್ಲಿ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಎಂಟಿಬಿ ವಿರುದ್ಧ ಗೆದ್ದಿದೆ.

Leave a Reply