ಸಿಎಂ ಮುಂದಿನ ಟಾರ್ಗೆಟ್ ನೂತನ ಶಾಸಕರ ಒಗ್ಗಟ್ಟು..!? ಇದು ಹೈಕಮಾಂಡ್ ಆರ್ಡರ್..!?

  ಡಿಜಿಟಲ್ ಕನ್ನಡ ಟೀಮ್:

  ಕಾಂಗ್ರೆಸ್‌ನ 14 ಹಾಗೂ ಜೆಡಿಎಸ್‌ನ 3 ಶಾಸಕರು ಸೆಳೆದು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಸುಭದ್ರ ಸರ್ಕಾರ ಮಾಡಿಕೊಂಡಿರುವ ಯಡಿಯೂರಪ್ಪಗೆ ಸಂತೋಷದ ಜತೆಗೆ ದಿಗಿಲು ಕೂಡ ಇದೆ. ಅದಕ್ಕೆ ಕಾರಣ ಈ ಶಾಸಕರ ಒಗ್ಗಟ್ಟು.

  ತಮಗೆ ಅನುದಾನ, ಅಧಿಕಾರ ಎಲ್ಲವನ್ನು ಕೊಟ್ಟ ಮಾತೃ ಪಕ್ಷಕ್ಕೆ ದ್ರೋಹ ಬಗೆದು ಅಧಿಕಾರದ ದಾಹದ ಹಿಂದೆ ಓಡಿ ಬಂದಿರುವವರು ನಾಳೆ ನಮಗೂ ಕಂಟಕವಾಗಬಹುದು ಎಂಬ ಗುಮಾನಿ ಬಿಜೆಪಿ ಪಾಳಯದಲ್ಲಿ ಮೂಡಿದೆ. ಇದೇ ಕಾರಣಕ್ಕೆ ಈಗ ಈ 17 ಶಾಸಕರ ಒಗ್ಗಟ್ಟನ್ನು ಮುರಿಯುವುದು ಈಗ ಪ್ರಮುಖ ಗುರಿಯಾಗಿದೆ.

  ಉಪಚುನಾವಣೆಯಲ್ಲಿ ಗೆದ್ದ ನಂತರ ಸುಪ್ರೀಂಕೋರ್ಟ್ ಆದೇಶದ ಅನ್ವಯ ಸಚಿವರಾಗಲು, ನಿಗಮ ಮಂಡಳಿ ಅಧ್ಯಕ್ಷರಾಗಲು ತಯಾರಿ ನಡೆಸುತ್ತಿದ್ದಾರೆ. ಶಾಸಕರಾಗುವ ಮೊದಲು ಸಭೆ ನಡೆಸಿ ಒಮ್ಮತದಿಂದ ಸಿಎಂ ಅಥವಾ ಬಿಜೆಪಿ‌ನಾಯಕರಿಗೆ ತಮ್ಮ ಮನವಿ ಏನೆಂದು ಸಂದೇಶ ಕಳುಹಿಸುತ್ತಿದ್ದರು. ಆದ್ರೆ ಇದೀಗ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಬಳಿಕವೂ ತಾವು ಒಗ್ಗಟ್ಟು ಪ್ರದರ್ಶನ ಮಾಡಿಕೊಂಡು ಪ್ರತ್ಯೇಕವಾಗಿ ಸಭೆ ನಡೆಸಿದ್ರೆ, ಮತ್ತೊಂದು ಶಕ್ತಿ ಕೇಂದ್ರ ಉದ್ಭವಿಸುವ ಭಯದಲ್ಲಿದ್ದಾರೆ ಭಾಜಾಪ ನಾಯಕರು.

  ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ನೂತನ ಶಾಸಕರು ಇಂದು ಸಭೆ ನಡೆಸಲು ನಿರ್ಧಾರ ಮಾಡಿದ್ದಾರೆ. ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಸಲಿರುವ ಶಾಸಕರು, ಬಿಜೆಪಿ ಸರ್ಕಾರದ ಎದುರು ಇಡಬೇಕಾದ ಅಹವಾಲುಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಗೆದ್ದ ಮೇಲೆ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಯಾರು ಯಾರಿಗೆ ಸಚಿವ ಸ್ಥಾನ ಕೇಳಬೇಕು..? ಯಾವ ಖಾತೆಗಳನ್ನ ಕೇಳಬೇಕು..? ಸರ್ಕಾರದಲ್ಲಿ ನಮ್ಮ ಪಾತ್ರ ಏನು..? ಎನ್ನುವ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಯಿದೆ.

  ಆದ್ರೆ ಗೆಲುವು ಸಾಧಿಸಿರುವ ಕೆಲವು ಶಾಸಕರು ತಡರಾತ್ರಿ ಬೆಂಗಳೂರಿಗೆ ಬರುವುದಾಗಿದೆ ಹೇಳಿದ್ದಾರೆ. ಹೀಗಾಗಿ ಎಲ್ಲರೂ ಬಂದ ಬಳಿಕವಷ್ಟೇ ಸಭೆ ಸೇರುವುದಾಗಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

  ಜಯಸಾಧಿಸಿದ ಎಲ್ಲಾ ನೂತನ ಶಾಸಕರು ಬೆಂಗಳೂರಿಗೆ ಬಂದ ಬಳಿಕ ಒಟ್ಟಿಗೆ ಕುಳಿತು ಸಭೆ ಮಾಡುವ ಚಿಂತನೆ ನಡೆಸಿದ್ದಾರೆ. ಆ ಬಳಿಕ ಒಟ್ಟಿಗೆ ದೆಹಲಿಗೆ ಹೋಗಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಗುತ್ತೆ ಎನ್ನಲಾಗಿದೆ.

  ಇಷ್ಟೆಲ್ಲಾ ಬೆಳವಣಿಗೆಗಳು ಬಿಜೆಪಿ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿದೆ. ಎಲ್ಲರೂ ಒಟ್ಟಿಗೆ ಕುಳಿತು ಸಭೆ ನಡೆಸುವುದು, ಮಂತ್ರಿ ಸ್ಥಾನಕ್ಕಾಗಿ ಆಗ್ರಹ ಮಾಡುವುದು, ನಮಗೆ ಇಂತಹದ್ದೇ ಖಾತೆ ಬೇಕೆಂದು ಒತ್ತಡ ಹೇರುವುದು ಸರಿಯಲ್ಲ. ಮುಂದೆ ಪಕ್ಷದಲ್ಲಿ ಯಾವುದಾದರೂ ನಿರ್ಧಾರ ಕೈಗೊಳ್ಳುವ ವೇಳೆ ಈ ನೂತನ ಶಾಸಕರು ಪಕ್ಷದ ನಿರ್ಧಾರವನ್ನು ಪ್ರಶ್ನೆ ಮಾಡುವ ಹಂತ ತಲುಪಿದರು ಅಚ್ಚರಿಯಿಲ್ಲ. ಹಾಗಾಗಿ ಈ ನೂತನ ಶಾಸಕರ ಒಗ್ಗಟ್ಟನ್ನು ಈಗಲೇ ಮುರಿದು ಹಾಕಿ. ಇವರ ನಡುವೆ ಅಂತರದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಎಂಬ ಸಂದೇಶ ರವಾನೆಯಾಗಿದೆ ಎನ್ನಲಾಗ್ತಿದೆ.

  ಸಚಿವ ಸಂಪುಟ ವಿಸ್ತರಣೆ ವೇಳೆ ಎಲ್ಲರಿಗೂ ಕೇಳಿದ್ದನ್ನು ಕೊಡದೆ ಕೆಲವೊಂದಿಷ್ಟು ಜನರನ್ನು ಸಮಾಧಾನ ಮಾಡಿಕೊಂಡು ಎಲ್ಲರ ನಡುವೆ ಮನಸ್ತಾಪ ಬರುವಂತೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಪಕ್ಷಕ್ಕೂ ಇವರು ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋದರೂ ಆಶ್ಚರ್ಯ ಪಡಬೇಕಿಲ್ಲ ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

  Leave a Reply