ಸಿದ್ದರಾಮಯ್ಯಗೆ ಹೃದಯ ಸಮಸ್ಯೆ! ಸಿಎಂ ಬಿಎಸ್ ವೈ ಭೇಟಿ!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಸಿ.ಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮೂಲಕ ಸ್ಟಂಟ್ ಅಳವಡಿಸಿಕೊಂಡಿದ್ದಾರೆ. ಇವತ್ತು ಆಸ್ಪತ್ರೆಯಿಂದ ಸಿದ್ದರಾಮಯ್ಯರನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಆದ್ರೆ ವೈದ್ಯರು ಆಸ್ಪತ್ರೆಯಲ್ಲೇ ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಡಿಸ್ಚಾರ್ಜ್ ಆಗದ ಕಾರಣ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಸಿಎಂ ಯಡಿಯೂರಪ್ಪ ಸೇರಿದಂತೆ ಹಲವಾರು ಪ್ರಮುಖ ನಾಯಕರು ಆಸ್ಪತ್ರೆಗೆ ಭೇಟಿ ನೀಡಿದ್ರು.
ದಿನೇಶ್ ಗುಂಡೂರಾವ್, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಹಾಗೂ ಪುತ್ರ ಪ್ರಕಾಶ್ ಕೋಳಿವಾಡ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ರು.


ವಿಧಾನಸೌಧದಿಂದ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆ ವೇಗಾಸ್ ಆಸ್ಪತ್ರೆಗೆ ಹೊರಟ ಸಿಎಂ ಯಡಿಯೂರಪ್ಪ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ರು. ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾನು ಇವತ್ತೇ ಡಿಸ್ಚಾರ್ಜ್ ಆಗ್ಬೇಕು ಅನ್ಕೊಂಡೆ. ಆದ್ರೆ, ಮನೆಗೆ ಹೋದ್ರೆ ಮತ್ತೆ ಜಾಸ್ತಿ ಜನ ಮನೆಗೆ ಬರೋಕೆ ಶುರು ಮಾಡ್ತಾರೆ. ಮತ್ತೆ ಇನ್ಸ್‌ಪೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಆದ್ರಿಂದ ಇನ್ನೂ ಎರಡು ದಿನ ಆಸ್ಪತ್ರೆಯಲ್ಲೇ ಇರಬೇಕು. ನಾನು ಆರೋಗ್ಯವಾಗಿದ್ದೇನೆ. ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಹೃದಯದ ಎರಡು ರಕ್ತನಾಳಗಳು ಬ್ಲಾಕ್ ಆಗಿದ್ದವು. ಹೀಗಾಗಿ ಸ್ಟಂಟ್ ಹಾಕಿಸಿದ್ದೆ. ಮತ್ತೆ ಬ್ಲಾಕ್ ಆಗಿದೆ ಅಂತ ವೈದ್ಯರು ಹೇಳಿದ್ರು. ಹಾಗಾಗಿ ಆಸ್ಪತ್ರೆಗೆ ದಾಖಲಾದೆ. ನನಗೆ ಯಾವುದೇ ತೊಂದರೆ ಅಗಿಲ್ಲ. ಆರೋಗ್ಯವಾಗಿದ್ದೇನೆ. ದಯವಿಟ್ಟು ಯಾರೂ ಆಸ್ಪತ್ರೆಗೆ ಬರಬೇಡಿ. ಮನೆಗೆ ಬಂದ ಬಳಿಕ ಮನೆಗೆ ಬಂದು ಆರೋಗ್ಯ ವಿಚಾರಿಸಿ ಸಾಕು. ನಾಳೆ, ನಾಡಿದ್ದು ಎರಡು ದಿನ ಇಲ್ಲಿಯೇ ಇರ್ತಿನಿ. ಐ ಆಮ್ ಟೋಟಲಿ ಫಿಟ್ ಎಂದಿದ್ದಾರೆ.

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ ಸಿಎಂ ಬಿ ಎಸ್ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗು ಸಚಿವ ಕೆ. ಎಸ್ ಈಶ್ವರಪ್ಪ ಕೂಡ ಆಸ್ಪತ್ರೆಗೆ ಆಗಮಿಸಿದ್ರು‌. ಆರೋಗ್ಯ ವಿಚಾರಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ, ಇನ್ನು ಎರಡು ದಿನ ಇಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ಹೇಳಿದ್ದಾರೆ. ಸಹಜವಾಗಿ ನಾನು ಹೋದ ತಕ್ಷಣ ಅವರಿಗೆ ಖುಷಿಯಾಯ್ತು. ರಾಜಕಾರಣವೇ ಬೇರೆ ಸ್ನೇಹವೇ ಬೇರೆ ಎಂದಿದ್ದಾರೆ. ಕೆ.ಎಸ್ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯ ಆರೋಗ್ಯವಾಗಿದ್ದಾರೆ. ಇವತ್ತೇ ಅವರು ಡಿಸ್ಚಾರ್ಜ್ ಆಗ್ಬೇಕಿತ್ತು. ಆದ್ರೆ ಮತ್ತೆ ಇನ್ಫೆಕ್ಷನ್ ಆಗಬಾರದು ಅನ್ನೋ ಕಾರಣಕ್ಕೆ ಇನ್ನೂ ಒಂದೆರಡು ದಿನ ಆಸ್ಪತ್ರೆಯಲ್ಲಿ ಇರ್ತಾರೆ. ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಇರೋ ಎಲ್ಲಾ ಡಾಕ್ಟರ್ ಹೇಳಿದ್ದಾರೆ ಅನ್ನೋ ಕಾರಣಕ್ಕೆ ಇದ್ದಾರಷ್ಟೇ. ರಾಜಕಾರಣ ಬೇರೆ, ಸಂಬಂಧಗಳು ಬೇರೆ. ನನ್ನ ತಲೆ ಕಡಿದರೂ ನಾನು ನನ್ನ ಪಕ್ಷ ಬಿಡಲ್ಲ. ಸಿದ್ದರಾಮಯ್ಯ ಕೂಡ ಅವರ ಪಕ್ಷ ಬಿಡಲ್ಲ. ನನ್ನ ಪಕ್ಷದ ಬಗ್ಗೆ ಅವರೇನಾದರೂ ಹೇಳಿದರೂ ನಾನು ಸುಮ್ಮನಿರಲ್ಲ. ಅವರ ಪಕ್ಷದ ಬಗ್ಗೆ ನಾನೇನಾದರೂ ಹೇಳಿದರೂ ಅವರು ಸುಮ್ಮನಿರಲ್ಲ. ಆದ್ರೆ ರಾಜಕೀಯ ಹೊರತುಪಡಿಸಿ ನಮ್ಮಲ್ಲಿ ಉತ್ತಮ ಮಾನವೀಯ ಸಂಬಂಧಗಳಿವೆ. ಅಧಿವೇಶನದ ವೇಳೆ ಸದನದಲ್ಲಿ ಕಿತ್ತಾಡ್ತ ಇದ್ವಿ, ಬಳಿಕ ಒಟ್ಟಿಗೆ ಕುಳಿತು ಟೀ ಕುಡಿತಾ ಇದ್ವಿ. ನಾವು ಕಿತ್ತಾಡೋದನ್ನ ನೋಡಿದ್ರೆ, ಈ ಜನ್ಮದಲ್ಲಿ ಇವರು ಮುಖ ನೋಡಲ್ಲ ಅನ್ಕೊಳ್ಳೋರು. ಆದ್ರೆ ಅವರು ಸಿಎಂ ಆಗಿದ್ದಾಗ ಊಟಕ್ಕೆ ಅವರ ಪಕ್ಕದಲ್ಲೇ ಆಸನ ಹಾಕಿಸಿ ಕಾಯ್ತಾ ಇದ್ರು. ಒಮ್ಮೆ ಸದನದಲ್ಲಿ ಮಾತಿನ ಚಕಮಕಿ ಆಗಿತ್ತು. ಸಭಾಪತಿ ಶಂಕರಮೂರ್ತಿ ಅವರ ಕೊಠಡಿಯಲ್ಲಿ ಕುಳಿತಿದ್ದೆ. ಸಿದ್ದರಾಮಯ್ಯ ಸಿಎಂ ಆಗಿದ್ರು.‌ ಅವರು ಅಲ್ಲಿಗೆ ಬಂದ್ರು.‌ ನಾನು ಹೊರಡಲು ರೆಡಿಯಾದೆ. ಈಶ್ಚರಪ್ಪ ಕುಳಿತುಕೊಳ್ಳಿ ಎಲ್ಲಿಗೆ ಹೋಗ್ತಿದ್ದೀರಿ ಅಂತಾ ಹೇಳ್ತಾನೆ ಕುಳಿತು ಟೀ ಕುಡಿದ್ವಿ. ನಾನು ಡಿಸಿಎಂ ಇರಬೇಕಾದ್ರೆ ಅವರ ಒಂದಿಷ್ಟು ನೋಟ್‌ಗಳು ನನ್ನ ಬಳಿ ಬರೋದು. ಅವರನ್ನ ನೋಡಿ ಸಹಿ ಮಾಡ್ಲಾ ಅಂದ್ರೆ ತಲೆ ಅಲ್ಲಾಡಿಸುತ್ತಿದ್ದರು, ನಾನು ಸಹಿ ಮಾಡ್ತಿದ್ದೆ. ಅವರು ಸಿಎಂ ಆದಾಗ ನನ್ನ ನೋಟ್‌ಗಳು ಹೋದಾಗ ಸಹಿ ಮಾಡಿ ಅಂತಿದ್ದೆ ಆಗಲು ತಲೆ ಅಲ್ಲಾಡಿಸಿ ಸಹಿ ಮಾಡ್ತಾ ಇದ್ರು. ಇದೆಲ್ಲವೂ ರಾಜಕಾರಣ ಹೊರತುಪಡಿಸಿ ಇರೋ ಸಂಬಂಧಗಳು. ಕುಮಾರಣ್ಣ ಜೊತೆಯೂ ಇಂತಹದ್ದೇ ಸಂಬಂಧ ಇದೆ. ದೇವೇಗೌಡರು ದೊಡ್ಡವರು ಅಲ್ಲಿವರೆಗೂ ನಾನು ಹೋಗಿಲ್ಲ ಎಂದಿದ್ದಾರೆ.

Leave a Reply