ನಿಮ್ಮ ಹಕ್ಕು ಯಾರೂ ಕಸಿದುಕೊಳ್ಳುವುದಿಲ್ಲ, ಈಶಾನ್ಯ ರಾಜ್ಯಗಳ ಪ್ರತಿಭಟನಾಕಾರರಿಗೆ ಮೋದಿ ಕರೆ

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದೆ. ಇದರ ಬೆನ್ನಲ್ಲೇ ಅಸ್ಸಾಂ ಹಾಗೂ ತ್ರಿಪುರಾ ಸೇರಿದಂತೆ ಈ ಶಾನ್ಯ ಭಾರತದ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದು, ‘ನಿಮ್ಮ ಹಕ್ಕುಗಳನ್ನು ಯಾರೂ ಕಸಿದುಕೊಳ್ಳುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.

ಭಾರೀ ವಿವಾದ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಮಸೂದೆ ಮಂಗಳವಾರ ಲೋಕಸಭೆಯಲ್ಲಿ ಅಂಗೀಕಾರವಾದರೆ, ಬುಧವಾರ ರಾಜ್ಯಸಭೆಯಲ್ಲಿ ಎಂಟು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆ ಪಡೆದುಕೊಂಡಿತ್ತು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ ರಾಜ್ಯಸಭೆ, ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿತ್ತು. ಮಸೂದೆಯ ಪರವಾಗಿ 125 ಸದಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧವಾಗಿ 105 ಮತಗಳು ಚಲಾವಣೆಯಾಗಿದ್ದವು.

ಈ ಹೊಸ ತಿದ್ದುಪಡಿ ಮಸೂದೆಯಿಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಲ್ಲಿನ ಹಿಂದೂ, ಸಿಖ್, ಜೈನ, ಕ್ರೈಸ್ತ, ಬೌದ್ಧ, ಪಾರ್ಸಿಯ ಅಲ್ಪಸಂಖ್ಯಾತರು ಭಾರತಕ್ಕೆ ವಲಸೆ ಬಂದು ಪೌರತ್ವವನ್ನು ಪಡೆಯಲು ವಕಾಶ ಕಲ್ಪಿಸಿದೆ. ಇದರಿಂದ ಲಕ್ಷ ಸಂಖ್ಯೆಯಲ್ಲಿ ನಿರಾಶ್ರಿತರಾಗಿ ಜನರು ಭಾರತಕ್ಕೆ ಬರಲಿದ್ದಾರೆ. ಆಗ ಹೊರಗಿನವರು ಬಂದಾಗ ಯಾವುದೇ ರಾಜ್ಯದಲ್ಲಾಗಲಿ ಸಹಜವಾಗಿ ಅಲ್ಲಿನ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಪರಿಣಾಮ ಆಗುತ್ತದೆ. ಅಲ್ಲದೆ, ಹೊರಗಿನಿಂದ ಬಂದವರು  ಹಕ್ಕುಗಳನ್ನು ಕಸಿದುಕೊಳ್ಳಬಹುದು ಎನ್ನುವ ಭಯವೂ ಕಾಡುತ್ತದೆ. ಇದೇ ಆತಂಕ ಈಗ ಈಶಾನ್ಯ ರಾಜ್ಯಗಳ ಜನತೆಯನ್ನು ಕಾಡುತ್ತಿದೆ.

ಈ ಆಂತಕ ದೂರ ಮಾಡಲು ಪ್ರಧಾನಿ ಟ್ವೀಟ್ ಮಾಡಿದ್ದು, “ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅಸ್ಸಾಂನ ಸಹೋದರ-ಸಹೋದರಿಯರು ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಹಕ್ಕು, ನಿಮ್ಮ ಸುಂದರ ಸಂಸ್ಕೃತಿಯನ್ನು ಯಾರೊಬ್ಬರೂ ಕಸಿದುಕೊಳ್ಳುವುದಿಲ್ಲ. ಅದು ಹಾಗೆಯೇ ಮುಂದುವರಿಯಲಿದೆ.”

 “ನಾನು ಹಾಗೂ ಕೇಂದ್ರ ಸರ್ಕಾರ ಅಸ್ಸಾಂ ರಾಜಕೀಯ, ಭಾಷೆ, ಸಂಸ್ಕೃತಿ ಹಾಗೂ ಭೂ ಹಕ್ಕನ್ನು ರಕ್ಷಿಸಲು ಬದ್ಧರಾಗಿದ್ದೇವೆ,” ಎಂದು ತಿಳಿಸಿದ್ದಾರೆ.

Leave a Reply