ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಮಾತನಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಸಿದ್ದರಾಮಯ್ಯ ಅವರ ಮಾತನ್ನೂ ಲೆಕ್ಕಿಸದೇ ಪಕ್ಷ ತೊರೆದು ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ರಮೇಶ್ ಜಾರಕಿಹೊಳಿ ಇಂದು ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳಿದ್ದಾರೆ.

ಹೃದಯ ಸಮಸ್ಯೆಯಿಂದ ಆಂಜಿಯೋಪ್ಲ್ಯಾಸ್ಟಿ ಮೂಲಕ ಸ್ಟಂಟ್ ಆಳವಡಿಸಿಕೊಂಡಿರುವ ಸಿದ್ದರಾಮಯ್ಯ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ರಮೇಶ್ ಜಾರಕಿಹೊಳಿ ನಂತರ ಸಿದ್ದರಾಮಯ್ಯ ಅವರೇ ನಮ್ಮ ನಾಯಕ ಎಂದಿದ್ದಾರೆ.

ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಆರೋಗ್ಯ ವಿಚಾರಿಸುವ ನೆಪದಲ್ಲಿ ಭೇಟಿಯಾಗಿ ರಾಜಕೀಯ ಚರ್ಚೆ ನಡೆಸಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ಮಲ್ಲೇಶ್ವರಂ ಆಸ್ಪತ್ರೆಯಲ್ಲಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ರಮೇಶ ಜಾರಕಿಹೊಳಿ, ಸಿದ್ದರಾಮಯ್ಯ ನಮ್ಮ ನಾಯಕರು, ನಮ್ಮ ಗುರುಗಳು. ಪಕ್ಷ ಬದಲಾವಣೆ ಮಾಡಿದ್ರು, ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದಿದ್ದಾರೆ. ನಾನು ಗೆದ್ದ ತಕ್ಷಣವೇ ಅವರು ನಮ್ಮ ನಾಯಕರು ಅಂತಾ ಡಿಕ್ಲೇರ್ ಮಾಡಿದ್ದೆ, ಸಿದ್ದರಾಮಯ್ಯ ಅವರು ಆರೋಗ್ಯವಾಗಿದ್ದಾರೆ. ನಾಳೆ ಡಿಸ್ಚಾರ್ಜ್ ಆಗ್ತಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಇನ್ನು ಬಿ.ಸಿ ಪಾಟೀಲ್ ಮಾತನಾಡಿ ನಾವು ಮನೆ ಬದಲಾಯಿಸಿರಬಹುದು, ಆದರೆ ಮನಸ್ಸು ಬದಲಾಯಿಸೋಕಾಗಲ್ಲ. ನಾವು ಪಕ್ಷ ಬದಲಾಯಿಸಿದ್ದೇವೆ, ಆದರೆ ಮಾನವೀಯತೆಯನ್ನು ಮನುಷ್ಯತ್ವವನ್ನು ಮರೆಯೋಕಾಗಲ್ಲ. ರಾಜಕೀಯವೇ ಬೇರೆ, ಸಂಬಂಧಗಳೇ ಬೇರೆ. ಹೀಗಾಗಿ ನಮ್ಮ ಮಾಜಿ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದೇನೆ ಎಂದಿದ್ದಾರೆ.

ಆದ್ರೆ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಭೇಟಿ ವೇಳೆ ವೈದ್ಯರು ಹಾಗು ಆಪ್ತರನ್ನ ಹೊರಗೆ ಕಳುಹಿಸಿ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಜೊತೆ ಪ್ರತ್ಯೇಕವಾಗಿ ಮಾತನಾಡಿದ ರಮೇಶ ಜಾರಕಿಹೊಳಿ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಅರ್ಧ ಗಂಟೆ ಆಸ್ಪತ್ರೆಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ನಮ್ಮ ನಾಯಕರ ಜೊತೆ ಮಾತಾಡ್ಬೇಕು ಸ್ವಲ್ಪ ಹೊರಗೆ ಹೋಗಿ ಎಂದು ಆಪ್ತರಿಗೆ, ವೈದ್ಯರಿಗೆ ಸೂಚಿಸಿದ್ದಾರೆ. ಆ ಬಳಿಕ ಕಂಗ್ರಾಟ್ಸ್ ರಮೇಶ, ಕೊನೆಗೂ ಗೆದ್ದೆ ಎಂದಿದ್ದಾರಂತೆ. ಅದಕ್ಕೆ ಉತ್ತರಿಸಿದ ರಮೇಶ್ ಜಾರಕಿಹೊಳಿ, ನಿಮ್ಮ ಆಶೀರ್ವಾದದಿಂದ ಗೆದ್ದಿದ್ದೇನೆ. ಮಂತ್ರಿ ಆಗ್ತೇನೆ, ನಿಮ್ಮ ಆಶೀರ್ವಾದ ಇರಲಿ. ನಮ್ಮ ಗುರುಗಳು ನೀವು ಎಂದ್ರಂತೆ. ನನ್ನ ಆಶೀರ್ವಾದ ಯಾಕಪ್ಪ, ಯಡಿಯೂರಪ್ಪ ಆಶೀರ್ವಾದ ಇದ್ರೆ ಡಿಸಿಎಂ ಆಗ್ತೀಯಾ ಬಿಡು ಎಂದಿದ್ದಾರೆ. ಎಲ್ಲಿ ಸರ್, ನಮಗೆ ಪಾರ್ಟಿ ಬಿಟ್ಟಿದ್ದಕ್ಕೆ ಬೇಜಾರಿದೆ. ಪಕ್ಷದಲ್ಲಾದ ಕೆಲ ಬೆಳವಣಿಗೆಯಿಂದ ಬಿಡಬೇಕಾಯ್ತು ಎಂದ ರಮೇಶ್ ಜಾರಕಿಹೊಳಿಗೆ ಆಯ್ತು ಬಿಡು ಆ ಮಾತೇಕೆ ಈಗ. ಒಳ್ಳೆಯದಾಗ್ಲಿ ಹೋಗು. ನಾನು ಆರೋಗ್ಯವಾಗಿದ್ದೇನೆ. ನಾಳೆ ಡಿಸ್ಚಾರ್ಜ್ ಆಗ್ತೇನೆ ಎಂದಿದ್ದಾರೆ.

Leave a Reply