ರಾಜ್ಯ ರಾಜಕೀಯದಲ್ಲೀಗ ಆಂತರಿಕ ತಿಕ್ಕಾಟದ ಪರ್ವ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ನಲ್ಲಿ ಮೂಲ ವರ್ಸಸ್ ವಲಸಿಗರ ಸಂಘರ್ಷ, ನಾಯಕತ್ವದ ಬದಲಾವಣೆ, ಬಿಜೆಪಿಯಲ್ಲಿ ಅಧಿಕಾರ ಹಂಚಿಕೆಯ ಅಸಮಾಧಾನ ಹಾಗೂ ಬಿರುಕು. ಒಡೆದ ಮನೆಯಗಿರುವ ಜೆಡಿಎಸ್… ಇವೆಲ್ಲವೂ ಸದ್ಯ ರಾಜ್ಯ ರಾಜಕೀಯದಲ್ಲೀಗ ಆಂತರಿಕ ತಿಕ್ಕಾಟದ ಪರ್ವ ಶುರುವಾಗಿರುವುದನ್ನು ಸ್ಪಷ್ಟಪಡಿಸುತ್ತಿವೆ.

ಉಪಚುನಾವಣೆಯಲ್ಲಿ ಸೋಲಿನ ನಂತರ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದಲ್ಲಿನ ಪ್ರಮುಖ ಹುದ್ದೆಗೆ ಪೈಪೋಟಿ ನಡೆಯುತ್ತಿದೆ. ಅಲ್ಲದೆ ಸಿದ್ದರಾಮಯ್ಯನವರ ನಿಯಂತ್ರಣ ತಪ್ಪಿಸಲು ಹಿರಿಯ ಕಾಂಗ್ರೆಸ್ ನಾಯಕರು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಇತ್ತ ಬಿಜೆಪಿ ಅನರ್ಹರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿ ಸುಭದ್ರ ಸರ್ಕಾರ ಮಾಡಿಕೊಂಡಿದೆ. ಆದರೆ ಈಗ ಹೊಸದಾಗಿ ಸೇರಿಕೊಂಡಿರುವ 15 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ತಲೆಬಿಸಿ ಆರಂಭವಾಗಿದೆ. ಮತ್ತೊಂದೆಡೆ ಶ್ರೀರಾಮುಲು ಅಸಮಾಧಾನ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಸಂಪುಟದಲ್ಲಿ ಈಗಿರುವ ಇಬ್ಬರು ಉಪಮುಖ್ಯಮಂತ್ರಿಗಳ ಜತೆ ಇನ್ನೆರಡು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಇದು ಎದ್ದಿರುವ ಅಸಮಾಧಾನ ತಣ್ಣಗಾಗಿಸುವ ಪ್ರಯತ್ನ ಎಂಬುದರಲ್ಲಿ ಅನುಮಾನವಿಲ್ಲ.

ಇನ್ನು ಜೆಡಿಎಸ್ ಕಥೆ, ಎತ್ತು ಏರಿಗೆ ಎಳಎದರೆ ಕೋಣ ನೀರಿಗೆ ಇಳಿಯಿತು ಎಂಬಂತಾಗಿದೆ. ಜೆಡಿಎಸ್ ನಾಯಕರು ಒಂದು ಹೇಳಿದರೆ ಅದಕ್ಕೆ ವಿರುದ್ಧವಾಗಿ ಅದರ ಶಾಸಕರು ಹೇಳಿಕೆ ನೀಡುತ್ತಿದ್ದಾರೆ. ಜೆಡಿಎಸ್ ನಾಯಕರು ಹಾಗೂ ಶಾಸಕರ ನಡುವೆ ತಿಕ್ಕಾಟ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಪಕ್ಷದ ಹಿರಿಯ ನಾಯಕರು ತಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನ ಶಾಸಕರನ್ನು ಮಾನಸಿಕವಾಗಿ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಕ್ಷದ ಕೆಲವು ನಾಯಕರು ಬಿಜೆಪಿ ನಾಯಕರ ಜತೆ ಗುರುತಿಸಿಕೊಳ್ಳುತ್ತಿದ್ದಾರೆ, ಅವರ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ಮತ್ತೆ ಕೆಲವರು ಬಿಜೆಪಿ ನಾಯಕರ ಕಾಲಿಗೆ ಬಿದ್ದು ತಮ್ಮ ನಿಯತ್ತು ಪ್ರದರ್ಶಿಸುತ್ತಿದ್ದಾರೆ.

ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಣ ತಿಕ್ಕಾಟಕ್ಕಿಂತ ತಮ್ಮ ಪಕ್ಷದೊಳಗಿನ ತಿಕ್ಕಾಟವೇ ಹೆಚ್ಚಾಗಿದ್ದು, ಇದು ಜನರ ಸಮಸ್ಯೆ ಆಲಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆಸಿದೆ.

Leave a Reply