ಆಪರೇಷನ್ ಮಾಸ್ಟರ್‌ ಯಡಿಯೂರಪ್ಪಗೆ ಹಂಟಿಂಗ್ ಸ್ಟಾರ್ ಕಾಟ..!?

ಡಿಜಿಟಲ್ ಕನ್ನಡ ಟೀಮ್:

ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದ ಬಿಎಸ್ ಯಡಿಯೂರಪ್ಪ ಅವರಿಗೆ ಹಂಟಿಂಗ್ ಸ್ಟಾರ್ ಕಾಟ ಶುರುವಾಗಿದೆ. ಐದಾರು ಬಾರಿ ಆಪರೇಷನ್ ಕಮಲ ಮಾಡಿ ಹೇಗೆ ವಿಫಲರಾದ ಮೇಲೆ ಆಪರೇಷನ್ ಮಾಸ್ಟರ್ ಯಡಿಯೂರಪ್ಪ 7ನೇ ಬಾರಿಗೆ ಸಕ್ಸಸ್ ಆದ್ರು. ಇಷ್ಟೂ ಬಾರಿ ಆಪರೇಷನ್ ಕಮಲ ಮಾಡಲು ಸಹಕರಿಸಿದ್ದು ಹಂಟಿಂಗ್ ಸ್ಟಾರ್ ರಮೇಶ್ ಜಾರಕಿಹೊಳಿ.

ಆಪರೇಷನ್ ಕಮಲಕ್ಕೆ ಸಾಥ್ ಕೊಟ್ಟು ಉಪಚುನಾವಣೆಯಲ್ಲೂ ಜಯ ಸಾಧಿಸಿರುವ ಹಂಟಿಂಗ್ ಸ್ಟಾರ್ ರಮೇಶ್ ಜಾರಕಿಹೊಳಿ, ಆಪರೇಷನ್ ಮಾಸ್ಟರ್ ಯಡಿಯೂರಪ್ಪ ಅವರಿಗೆ ತಲೆ ಬಿಸಿ ಉಂಟು ಮಾಡಿದ್ದಾರೆ. ಮುಂದೇನು ಮಾಡುವುದು ಎನ್ನುತ್ತ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯನ್ನೇ ಮುಂದೂಡಿ ತಂತ್ರಗಾರಿಕೆ ಮಾಡ್ತಿದ್ದಾರೆ.

ರಮೇಶ್ ಜಾರಕಿಹೊಳಿ ಮಾಡಿದ್ದೇನು..?

ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಬರುವುದಾಗಿ ಒಪ್ಪಂದ ಮಾಡಿಕೊಂಡ ಬಳಿಕವಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು. ನಾನು ರಾಜೀನಾಮೆ ಕೊಡುವುದಾದರೆ ಒಬ್ಬನೇ ಕೊಡಲ್ಲ, ಸಾಕಷ್ಟು ಜನರನ್ನು ಕರೆದುಕೊಂಡು ಹೋಗ್ತೇನೆ ಎಂದಿದ್ರು. ಅದರಂತೆ ಬಿಜೆಪಿಯಲ್ಲಿ ಜಲಸಂಪನ್ಮೂಲ ಖಾತೆ ಜೊತೆಗೆ ಡಿಸಿಎಂ ಪಟ್ಟ ಕೊಡುವುದಾಗಿ ಮಾತುಕತೆಯಾಗಿತ್ತು. ಆಪರೇಷನ್ ಕಮಲದ ವೇಳೆ ಸುಮ್ಮನಿದ್ದ ಕಮಲ ಕಲಿಗಳು ಇದೀಗ ವರಸೆ ಶುರುಮಾಡಿದ್ದು ಉಪಮುಖ್ಯಮಂತ್ರಿ ಪಟ್ಟ ಸಿಗೋದು ಅನುಮಾನವಾಗಿದೆ. ಒಂದು ವೇಳೆ ರಮೇಶ್ ಜಾರಕಿಹೊಳಿಗೆ ಉಪಮುಖ್ಯಮಂತ್ರಿ ಪಟ್ಟ ಕೊಟ್ಟರೆ, ಬಿಜೆಪಿ ಒಳಗೆ ಮತ್ತೊಂದು ಗುಂಪು ರೆಡಿಯಾಗುವ ಮುನ್ಸೂಚನೆ ಸಿಕ್ಕಿದೆ. ಒಂದು ವೇಳೆ ಉಪಮುಖ್ಯಮಂತ್ರಿ ಮಾಡದೆ ಇದ್ದರೆ ರಮೇಶ್ ಜಾರಕಿಹೊಳಿ ತನ್ನ ಸಂಗಡಿಗರ ಜೊತೆ ಮತ್ತೆ ಹಳೇ ಟೀಂ ಹಿಡಿದು ಬೆದರಿಸಲು ಸಿದ್ಧತೆ ನಡೆಸಿದ್ದಾರೆ.

ರಮೇಶ್ ಡಿಸಿಎಂ ಆದರೆ ಶ್ರೀರಾಮುಲುಗೆ ಯಾಕೆ ತೊಂದರೆ..!?

ರಮೇಶ್ ಜಾರಕಿಹೊಳಿ ವಾಲ್ಮೀಕಿ ಸಮುದಾಯದ ನಾಯಕ. ಶ್ರೀರಾಮುಲು ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಾಯಕನಾಗಿದ್ದು, ಜಾತಿ ವೈ಼ಷಮ್ಯ ಶುರುವಾಗಿದೆ. ತನ್ನದೇ ಜಾತಿಯ ಮತ್ತೋರ್ವ ನಾಯಕ ಪಕ್ಷದಲ್ಲಿ ಬೆಳವಣಿಗೆ ಆದರೆ ಮುಂದೆ ರಾಜಕೀಯ ಜೀವನ ಮಂಕಾಗುವ ಆತಂಕದಲ್ಲಿ ಶ್ರೀರಾಮುಲು ಪರಿತಪಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಪಕ್ಷದ ಮೇಲೆ ಹಿಡಿತ ಸಾಧಿಸಿದ್ರೆ ಮುಂದಿನ ದಿನಗಳಲ್ಲಿ ಪ್ರಾಬಲ್ಯ ಬೆಳೆಸಿಕೊಳ್ಳುವುದಲ್ಲದೆ ತನ್ನ ಬಳಗದಲ್ಲಿ ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿಕೊಂಡ ಆನಂದ್ ಸಿಂಗ್ ಬಳ್ಳಾರಿಯಲ್ಲಿ ಅಬ್ಬರ ಶುರು ಮಾಡಿಕೊಳ್ಳುವ ಸಂಕಟವೂ ಎದುರಾಗಿದೆ. ಈಗಾಗಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿಯಿಂದ ಹೊರಬಿದ್ದಿರುವ ಶ್ರೀರಾಮುಲು, ಜಿಲ್ಲೆ ಮೇಲಿನ ಹಿಡಿತವನ್ನು ಆನಂದ್ ಸಿಂಗ್‌ಗೆ ಬಿಟ್ಟು ಕೊಡಬೇಕಾದ ಅನಿವಾರ್ತೆಯಲ್ಲಿ ಸಿಲುಕಿದ್ದಾರೆ.

ಒಂದು ವೇಳೆ ಈಗ ಬಳ್ಳಾರಿ ಮೇಲಿನ ಹಿಡಿತ ಬಿಟ್ಟುಕೊಟ್ಟರೆ, ಆನಂದ್ ಸಿಂಗ್ ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲಾ ರಚನೆ ಮಾಡಲಿದ್ದಾರೆ. ಹಾಗಾಗಿ ಈಗಲೇ ಜಿಲ್ಲೆ ಮೇಲೆ‌ಹಿಡಿತ ಸಾಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಕವಾಗಿದ್ದು, ಕ್ಯಾಬಿನೆಟ್ ಸಭೆಗೂ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಸಿಎಂ ಯಡಿಯೂರಪ್ಪ ಕರೆದಿದ್ದ ಸಭೆಯಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಡಿಸಿಎಂ ಸ್ಥಾನ ಕೊಡದಿದ್ದರೆ ತನ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶಾಸಕರನ್ನು ಒಟ್ಟು ಮಾಡಿಕೊಂಡು ಸರ್ಕಾರಕ್ಕೆ ಅಭ್ರತೆ ಉಂಟು ಮಾಡುವ ಲೆಕ್ಕಾಚಾರವೂ ನಡೆಯುತ್ತಿದೆ‌. ಇಕ್ಕಟ್ಟಿನಲ್ಲಿ ಸಿಲುಕಿರುವ ಆಪರೇಷನ್ ಮಾಸ್ಟರ್‌ಗೆ ಹಂಟಿಂಗ್ ಸ್ಟಾರ್‌ಗಳಿಂದ ಸಂಕಷ್ಟ ಎದುರಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

Leave a Reply