ಮಂತ್ರಿ ಪಟ್ಟಕ್ಕಾಗಿ ಕಿತ್ತಾಟ..! ಡಿಸಿಎಂ ಸ್ಥಾನಗಳಿಗೂ ಎದುರಾಯ್ತು ಕುತ್ತು..!?

ಡಿಜಿಟಲ್ ಕನ್ನಡ ಟೀಮ್:

B.S ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಹೂರ್ತ ಮೂವರು ಫಿಕ್ಸ್ ಆಗಬೇಕಿದೆ. ಆಪರೇಷನ್ ಕಮಲಕ್ಕೆ ಸಹಕರಿಸಿ ರಾಜೀನಾಮೆ ಕೊಟ್ಟು ಗೆದ್ದು ಬಂದವರಿಗೆ ಮಂತ್ರಿ ಸ್ಥಾನ ಕೊಡಲೇ ಬೇಕಿದೆ. ಈ ನಡುವೆ ಹಾಲಿ ಬಿಜೆಪಿ ಶಾಸಕರಲ್ಲೂ ಮಂತ್ರಿ ಸ್ಥಾನದ ಆಸೆ ಚಿಗುರಿದೆ. ಅದರಲ್ಲೂ ಡಿಸಿಎಂ ಸ್ಥಾನದ ಆಕಾಂಕ್ಷಿಗಳಾದ ರಮೇಶ್ ಜಾರಕಿಹೊಳಿ ಹಾಗು ಶ್ರೀರಾಮುಲು ಪೈಪೋಟಿ ಸ್ವತಃ ಬಿಜೆಪಿ ಹೈಕಮಾಂಡ್ ನಿದ್ದೆಗೆಡಿಸಿದೆ. ಇಬ್ಬರೂ ಒಂದೇ ಸಮುದಾಯದ ನಾಯಕರು ಡಿಸಿಎಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ನಡುವೆ ಡಿಸಿಎಂ ಸ್ಥಾನವನ್ನೇ ಕೈ ಬಿಟ್ಟು ಕೇವಲ ಮಂತ್ರಿ ಸ್ಥಾನಗಳನ್ನು ಮಾತ್ರ ಇಟ್ಟುಕೊಳ್ಳುವ ಬಗ್ಗೆಯೂ ಚರ್ಚೆ ಶುರುವಾಗಿದೆ.

ಈಗ ಇರುವ ಡಿಸಿಎಂ ಸ್ಥಾನಕ್ಕೂ ಕೊಕ್..!?

ಈ ಬಗ್ಗೆ ಮಾತನಾಡಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಹಾಲಿ ಡಿಸಿಎಂಗಳಿಗೆ ಹಾಗೂ ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಸಿಎಂ ಸ್ಥಾನದಲ್ಲಿರೋರು ದುರ್ಬಲರಾಗಿದ್ರೆ ಡಿಸಿಎಂ ಸ್ಥಾನ ಸೃಷ್ಠಿ ಮಾಡಬೇಕು. ಆದರೆ ರಾಜ್ಯದಲ್ಲಿ ಸಿಎಂ ಸ್ಥಾನದಲ್ಲಿರುವ ಯಡಿಯೂರಪ್ಪ ಸಮರ್ಥ ನಾಯಕರಾಗಿದ್ದಾರೆ‌. ಇಂತಹ ಸಂದರ್ಭದಲ್ಲಿ ಡಿಸಿಎಂ ಸ್ಥಾನ ಯಾಕೇ ಬೇಕು.‌ ಈಗ ಇರುವ ಡಿಸಿಎಂ ಸ್ಥಾನಗಳನ್ನೂ ವಜಾಗೊಳಿಸಬೇಕು. ಈ ಬಗ್ಗೆ ನಮ್ಮ ಪಕ್ಷದ ನಾಯಕರಿಗೆ ನಾನು ಮನವಿ ಮಾಡುತ್ತೇನೆ ಎನ್ನುವ ಮೂಲಕ ಹಾಲಿ ಡಿಸಿಎಂ ಸ್ಥಾನದಲ್ಲಿ ಇರುವ ಮೂವರಿಗೆ ಹಾಗೂ ಡಿಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶ್ರೀರಾಮುಲು ಹಾಗು ರಮೇಶ್ ಜಾರಕಿಹೊಳಿಗೆ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ.

ರೇಣುಕಾಚಾರ್ಯ ಮಾತಿಗೆ ದನಿಗೂಡಿಸಿರುವ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಶ್ರೀರಾಮುಲು ಬಹಳ ವರ್ಷಗಳಿಂದ ಪಕ್ಷವನ್ನು ಕಟ್ಟಿದವರು, ಹಾಗಾಗಿ ಅವರು ಡಿಸಿಎಂ ಆಗಬೇಕು ಎಂದು ಅವರ ಅಭಿಮಾನಿಗಳ ಒತ್ತಾಯವಿದೆ.ಅವರು ವೈಯಕ್ತಿಕವಾಗಿ ಎಲ್ಲಿಯೂ ಡಿಸಿಎಂ ಸ್ಥಾನ ಬೇಕು ಎಂದು ಕೇಳಿಲ್ಲ. ಐದು-ಹತ್ತು ಡಿಸಿಎಂ ಮಾಡಿದ್ರೆ ಆ ಸ್ಥಾನಕ್ಕೆ ಗೌರವ ಇರಲ್ಲ. ಉಪ ಮುಖ್ಯಮಂತ್ರಿಗಳ ಗೌರವ ಕಡಿಮೆ ಆಗೋ ಕೆಲಸ ಮಾಡಬಾರದು. ನನಗೆ ಸಿಎಂ ಒಬ್ಬರಿದ್ದರೇ ಸಾಕು, ಎಲ್ಲರೂ ಮಂತ್ರಿಗಳಿದ್ದರೇ ಸಾಕು ಎಂದು ಡಿಸಿಎಂ ಸ್ಥಾನವೇ ಬೇಡ ಎನ್ನುವ ವಾದಕ್ಕೆ ಮಣೆ ಹಾಕಿದ್ದಾರೆ.

ಮಂತ್ರಿ ಪಟ್ಟದ ಪೈಪೋಟಿಯಲ್ಲಿ ಯಾರೆಲ್ಲಾ ಇದ್ದಾರೆ..?

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಸಚಿವ ಸ್ಥಾನ ಸಿಗೋದು‌ ಅನುಮಾನ ಎನ್ನಲಾಗುತ್ತಿರುವ ಶಾಸಕರಾದ ಶ್ರೀಮಂತ ಪಾಟೀಲ್, ನಾರಾಯಣ ಗೌಡ ಸಿಎಂ ಭೇಟಿ ಮಾಡಿ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಡಾಲರ್ಸ್ ಕಾಲೋನಿಯ ಸಿಎಂ ನಿವಾಸದಲ್ಲಿ ಭೇಟಿಯಾದ ಇಬ್ಬರು ಆಕಾಂಕ್ಷಿಗಳು, ಸಚಿವ ಸಂಪುಟ ವಿಸ್ತರಣೆ ವೇಳೆ ನಮ್ಮನ್ನು ಪರಿಗಣಿಸಿ ಎಂದು ಮನವಿ‌ ಮಾಡಿದ್ದಾರೆ.

ಇನ್ನು ಎಂಟು ಬಾರಿ ಗೆಲುವು ಸಾಧಿಸಿದ್ದೇನೆ, ನಾನು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಉಮೇಶ್ ಕತ್ತಿ ಕೂಡ ನಾನು ಎಂಟು ಬಾರಿ ಗೆದ್ದಿದ್ದೇನೆ, ನನಗೆ ಸಚಿವನಾಗೋ ಯೋಗ್ಯತೆ ಇದೆ. ಹಾಗಾಗಿ ಸಚಿವ ಸ್ಥಾನ ಕೇಳ್ತೀನಿ. ಯಡಿಯೂರಪ್ಪಗೆ ಯೋಗ್ಯತೆ ಇದೆ ಹಾಗಾಗಿ ಸಿಎಂ ಆಗಿದ್ದಾರೆ. ನನ್ನನ್ನು ಮಂತ್ರಿ ಮಾಡೋ ಭರವಸೆಯನ್ನು ಸಿಎಂ ಕೊಟ್ಟಿದ್ದಾರೆ ಎಂದಿದ್ದಾರೆ. ನಾನು ಎಂಟು ಬಾರಿ ಶಾಸಕನಾಗಿದ್ದೇನೆ ಮಂತ್ರಿ ಮಾಡಲೇಬೇಕು, ಯಾಕೆ ಮಾಡಲ್ಲ..? ಎಂದು ಸಿಎಂ ಬಿಎಸ್‌ವೈ ಬಳಿ ಗಟ್ಟಿ ಧ್ವನಿಯಲ್ಲಿ ಉಮೇಶ್ ಕತ್ತಿ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ನಾನು ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ನನ್ನನ್ನು ಸಚಿವನಾಗಿ ಮಾಡಿದ್ರೆ ಕೊಟ್ಟ ಇಲಾಖೆಗೆ ನ್ಯಾಯ ದೊರಕಿಸಿಕೊಡ್ತೀನಿ. 16 ಶಾಸಕರ ಭರವಸೆ ಈಡೇರಿಸಿ ಜೊತೆಗೆ ನನಗೂ ಅವಕಾಶ ಕಲ್ಪಿಸಿದರೆ ನಾನು ಸಚಿವನಾಗಲು ಸಿದ್ದನಿದ್ದೇನೆ ಎನ್ನುವ ಮೂಲಕ ಹಿರಿಯ ಶಾಸಕ ಮುರುಗೇಶ್ ನಿರಾಣಿ ಹೇಳುವ ಮೂಲಕ ನಾನೂ ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ.

ಸಂಸದ ಶ್ರೀನಿವಾಸ್‌ಪ್ರಸಾದ್ ಅಳಿಯ, ನಂಜನಗೂಡು‌ ಶಾಸಕ ಹರ್ಷವರ್ಧನ್ ಕೂಡ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾಯ. ಕೇಂದ್ರದಲ್ಲಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಹಾಗಾಗಿ ರಾಜ್ಯದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಎಸ್​ಸಿ ಬಲಗೈ ಜನಾಂಗದಿಂದ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಚಾಮರಾಜನಗರದ ನಂಜನಗೂಡಿನಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸಿದ್ದೇವೆ. ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗಲು ನಮಗೆ ಸಚಿವ ಸ್ಥಾನ ಇರಲೇಬೇಕು. ಕ್ಷೇತ್ರದ ಜನರ ಹೆಚ್ಚಿನ ಬಯಕೆ ಸಚಿವ ಸ್ಥಾನವಾಗಿರುತ್ತದೆ.ಬಲಗೈ ಜನಾಂಗದ ಪರವಾಗಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಸಚಿವ ಸ್ಥಾನದ ಬಯಕೆಯನ್ನು ತಿಳಿಸಿದ್ದೇನೆ ಎಂದಿದ್ದಾರೆ.

ಒಟ್ಟಾರೆ ಆಪರೇಷನ್ ಕಮಲದ ನಿರ್ಮಾತೃ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆ ಸಂಕಷ್ಟ ತಂದಿದ್ರೆ‌ ಹಾಲಿ ಡಿಸಿಎಂಗಳಿಗೆ ಡಿಸಿಎಂ ಸ್ಥಾನ ಕಳೆದುಕೊಳ್ಳುವ ಆತಂಕ ಶುರುವಾಗಿದೆ.

Leave a Reply