ಉನ್ನಾವೋ ಅತ್ಯಾಚಾರ: ಬಿಜೆಪಿ ಮಾಜಿ ಶಾಸಕನಿಗೆ ಜೀವಾವಧಿ

ಡಿಜಿಟಲ್ ಕನ್ನಡ ಟೀಮ್:

ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆಸಂಬಂಧಿಸಿದಂತೆ ಅಪರಾಧಿ ಬಿಜೆಪಿ ಮಾಜಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಗೆ ದೆಹಲಿ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.

ಶುಕ್ರವಾರಕ್ಕೆ ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಧೀಶ ಧರ್ಮೇಶ್ ಶರ್ಮಾ ಅವರು ತೀರ್ಪು ಪ್ರಕಟಿಸಿದ್ದು, ಜೀವಾವಧಿ ಜೈಲು ಶಿಕ್ಷೆ ಜತೆಗೆ 25 ಲಕ್ಷ ದಂಡ ವಿಧಿಸಿದೆ. ಅಲ್ಲದೆ ಈ ದಂಡವನ್ನು 1 ತಿಂಗಳ ಔಳಗಾಗಿ ಕಟ್ಟಬೇಕು ಎಂದು ಗಡವು ನೀಡಿದೆ.

ಕುಲ್ದೀಪ್ ಸಿಂಗ್ ಜನರ ಸೇವಕರಾಗಿದ್ದು, ಜನರು ಇಟ್ಟಿದ್ದ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಇದೊಂದು ಗಂಭೀರ ಪ್ರಕರಣ ಎಂದು ಕೋರ್ಟ್ ಪರಿಗಣಿಸಿದ್ದು, ಸಂತ್ರಸ್ತೆಯ ನಿರಂತರ ನರಳಾಟವನ್ನು ಕೋರ್ಟ್ ಗಮನಿಸಿದೆ ಎಂದು ತೀರ್ಪು ಪ್ರಕಟಿಸುವ ವೇಳೆ ನ್ಯಾಯಾಧೀಶರು ಅಭಿಪ್ರಾಯಪಟ್ಟರು. ಅಲ್ಲದೆ ದಂಡದ ಜತೆಗೆ ಪ್ರಕರಣದಲ್ಲಿ ಸಂತ್ರಸ್ತೆ ತಾಯಿಗೆ ಪರಿಹಾರವಾಗಿ 10 ಲಕ್ಷ ರೂ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.

2017ರಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ಥೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ನಂತರವಷ್ಟೇ ದೂರು ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೆ ಸಂತ್ರಸ್ತೆಯ ತಂದೆ ಮೇಲೆ ಕುಲ್ದೀಪ್ ಸಹೋದರ ಅತುಲ್ ಸೆಂಗರ್ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆ ಸಂದರ್ಭದಲ್ಲಿ ಹಲ್ಲೆಗೊಳಗಾದ ಸಂತ್ರಸ್ತೆ ತಂದೆಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ಯದೇ ಜೈಲಿಗೆ ಹಾಕಿದ್ದರು. ಪರಿಣಾಮ ಎರಡು ದಿನಗಳ ನಂತರ ಆತ ಮೃತಪಟ್ಟಿದ್ದ. ಈ ಎಲ್ಲ ಬೆಳವಣಿಗೆಗಳು ವ್ಯಾಪಕ ಖಂಡನೆಗೆ ವ್ಯಕ್ತವಾದ ನಂತರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ನಂತರ ಕುಲ್ದೀಪ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿತ್ತು.

Leave a Reply