ಅವಿದ್ಯಾವಂತರು, ಪಂಚರ್ ಹಾಕೋರು ಪ್ರತಿಭಟನೆ ಮಾಡಬಾರ್ದೆ ತೇಜಸ್ವಿ ಸೂರ್ಯ?

ಡಿಜಿಟಲ್ ಕನ್ನಡ ಟೀಮ್:

‘ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಬಂದು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಪಂಕ್ಚರ್ ಹಾಕೋರು ಬಂದು ಪ್ರತಿಭಟನೆ ಮಾಡುತ್ತಾರೆ…’ ಇದು ನಮ್ಮ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟಿರುವ ವಿವಾದಾತ್ಮಕ ಹೇಳಿಕೆ.

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಇಂದು ಟೌನ್​ಹಾಲ್ ಮುಂದೆ ನಡೆಯುತ್ತಿರುವ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ತೇಜಸ್ವಿ ಸೂರ್ಯ, ಈ ಹೇಳಿಕೆ ನೀಡಿದ್ದಾರೆ.

ಅವರ ಪ್ರಕಾರ ಪಂಚರ್ ಹಾಕೋರು, ಕೂಲಿ ಮಾಡೋರು, ಹಳೇ ಪೇಪರ್ ಕಬ್ಬಿಣ ಮಾರುವವರು, ಆಟೋ ಚಾಲಕರು ಸೇರಿದಂತೆ ಶ್ರಮ ಜೀವಿಗಳು ಹಾಗೂ ಅವಿದ್ಯಾವಂತರು ಪ್ರತಿಭಟನೆ ಮಾಡಬಾರದೇನೋ. ಹಾಗಾದ್ರೆ ಇವರು ಹನುಮ ಜಯಂತಿ ಪರ, ಟಿಪ್ಪು ಜಯಂತಿ ವಿರುದ್ಧ ಸೇರಿದಂತೆ ಅನೇಕ ವಿಚಾರಗಳಲ್ಲಿ ಪ್ರತಿಭಟನೆ ಮಾಡುವಾಗ ಪಿಎಚ್ಡಿ ಮಾಡಿರುವವರು, ಡಾಕ್ಟರ್, ಇಂಜಿನಿಯರ್, ಚಾರ್ಟೆಡ್ ಅಕೌಂಟೆಂಟ್ ಗಳನ್ನು ಸೇರಿಸಿ ಪ್ರತಿಭಟನೆ ಮಾಡಿದ್ದಾರೆ?

ಸಾಹಿತಿಗಳು, ಚಿಂತಕರು ನಿಮ್ಮ ವಿರುದ್ಧ ಮಾತನಾಡಿದರೆ, ದೇಶದ್ರೋಹಿ ಪಟ್ಟ ಕಟ್ಟುತ್ತೀರಿ, ಇಲ್ಲವಾದ್ರೆ ಗಂಜಿ ಗಿರಾಕಿ ಎಂದು ಲೇವಡಿ ಮಾಡುತ್ತೀರಿ. ಹೀಗೆ ಬಿಟ್ಟರೆ ಈಗ ಹೊಸ ಕಾಯ್ದೆ ಜಾರಿಗೆ ತಂದು ದೇಶದಲ್ಲಿ ಯಾರು ಇರಬೇಕು ಯಾರು ಇರಬಾರದು ಎಂದು ತೀರ್ಮಾನಿಸುತ್ತಿರುವ ನೀವು, ಮುಂದೆ ಯಾರು ಪ್ರತಿಭಟನೆ ಮಾಡಬೇಕು, ಯಾವ ವಿಚಾರಕ್ಕೆ ಮಾಡಬೇಕು ಎಂಬುದಕ್ಕೂ ಕಾನೂನು ತಂದರೆ ಅಚ್ಚರಿ ಇಲ್ಲ.

ಆರೆಸ್ಸೆಸ್ ಕೃಪೆ, ಮೋದಿ ಹೆಸರಿನ ನೆರಳಲ್ಲಿ ಬೆವರು ಹರಿಸದೇ ಚುನಾವಣೆ ಗೆದ್ದು ಸಂಸದರಾಗಿ ಲೋಕಸಭೆ ತಲುಪಿರುವುದರಿಂದ ಅಧಿಕಾರದ ಮದ ತಲೆಗೇರಿರುವುದು ತೇಜಸ್ವಿ ಮಾತಿನಲ್ಲಿ ಗೊತ್ತಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಿಷ್ಟು…

ಮೋದಿ ಸರ್ಕಾರ ಯಾಕೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ? ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡದೆ ದಿಕ್ಕು ತಪ್ಪಿಸಲಾಗುತ್ತಿದೆ. ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ. 2014ರಲ್ಲಿ ಮೋದಿ ಪ್ರಧಾನಿಯಾದಾಗಿಂದಲೂ ಟೀಕೆ ಮಾಡಲಾಗುತ್ತಿದೆ. ಯುವಕರ ಜೀವನದ ಜೊತೆ ಚೆಲ್ಲಾಟವಾಡಬೇಡಿ. ಹೊರ ರಾಷ್ಟ್ರದಿಂದ ಭಾರತಕ್ಕೆ ವಲಸಿಗರನ್ನು ರಾಷ್ಟ್ರದೊಳಗೆ ಬಿಟ್ಟು ಕೊಡುವುದಿಲ್ಲ ಎಂದರೆ ಇವರಿಗೇನು ಸಮಸ್ಯೆ ಅಂತ ಕಾಂಗ್ರೆಸ್​ಗೆ ತರಾಟೆ ತೆಗೆದುಕೊಳ್ಳಲಾಗುತ್ತಿದೆ. ಪಾಕಿಸ್ತಾನದ ಇಮ್ರಾನ್ ಖಾನ್, ಕಾಂಗ್ರೆಸ್ ನ ರಾಹುಲ್ ಗಾಂಧಿ ಒಂದೇ ಭಾಷಣ ಮಾಡುತ್ತಾರೆ. ಈ ಕಾನೂನು ಭಾರತೀಯ ಹಿಂದೂಗಳು, ಮುಸ್ಲಿಮರನ್ನು ಒಂದೇ ರೀತಿ ನೋಡುತ್ತದೆ.

ತೇಜಸ್ವಿ ಸೂರ್ಯ ಅವರು ಬಿಜೆಪಿ ಸಂಸದರಾಗಿ ತಮ್ಮ ಸರ್ಕಾರ ಸಮರ್ಥಿಸಿಕೊಳ್ಳಲಿ, ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳನ್ನು ಟೀಕಿಸಲಿ ಅದು ಅವರ ಕರ್ತವ್ಯ. ಆದರೆ ಅಧಿಕಾರದ ಮದ, ತಾನೇ ಮಹಾ ಬೃಹಸ್ಪತಿ ಎಂಬ ಧಿಮಾಕಿನಲ್ಲಿ ಜನಸಾಮಾನ್ಯರನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹೇಳಿಕೆ ನೀಡುವುದು ಸಂಸದ ಸ್ಥಾನಕ್ಕೆ ಶೋಭೆ ತರುವುದಿಲ್ಲ.

Leave a Reply