ಜಾರ್ಖಂಡ್ ನಲ್ಲಿ ಜೆಎಂಎಂ- ಕಾಂಗ್ರೆಸ್ ಮೈತ್ರಿ ಮುಂದೆ ಜಾರಿ ಬಿದ್ದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

2014ರಲ್ಲಿ ಮೋದಿ ಅಲೆಯಲ್ಲಿ ತೇಲಿದ್ದ ಜಾರ್ಖಂಡ್ ಮತದಾರ ಈ ಬಾರಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಕಾಂಗ್ರೆಸ್ ಮೈತ್ರಿಗೆ ಸರಳ ಬಹುಮತ ನೀಡಿ ಆಶೀರ್ವದಿಸಿದ್ದಾನೆ.

2005 ಮತ್ತು 2009ರಲ್ಲಿ ಅತಂತ್ರ ವಿಧಾನಸಭೆ ಬಂದ ನಂತರ 2014ರಲ್ಲಿ ಬಿಜೆಪಿ ಅಲೆಗೆ ಜೈ ಅಂದಿದ್ದರು. ಆದರೆ ಸಿಎಂ ರಘುಬರ್ ದಾಸ್ ಅವರ ಆಡಳಿತದಿಂದ ಅಸಮಾಧಾನಗೊಂಡ ಮತದಾರ ಈಗ ಬಿಜೆಪಿಯನ್ನು ಮನೆಗೆ ಕಳಿಸಿ, ಕಾಂಗ್ರೆಸ್ ಮತ್ತು ಜೆಎಂಎಂ ಮೈತ್ರಿ ಕೈ ಹಿಡಿದಿದ್ದಾನೆ. 81 ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂಗೆ 30, ಬಿಜೆಪಿ 25, ಕಾಂಗ್ರೆಸ್ 16, ಆರ್ ಜೆಡಿ 1, ಜೆವಿಎಂ 3, ಎಜೆಎಸ್ ಯು 2, ಇತರೆ 4 ಸ್ಥಾನ ಪಡೆದಿವೆ. ಯುಪಿಎ ಭಾಗವಾಗಿರುವ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್ ಜೆಡಿ ಮೈತ್ರಿಗೆ 47 ಸ್ಥಾನಗಳನ್ನು ಪಡೆದು ಈ ಮೈತ್ರಿಗೆ ಬಹುಮತ ಸಿಕ್ಕಿದೆ.

ಫಲಿತಾಂಶ ನಂತರ ಸಿಎಂ ರಘುಬರ್ ದಾಸ್ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೋರೆನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಭಿನಂದನೆ ತಿಳಿಸಿದ್ದಾರೆ.

ಇದರೊಂದಿಗೆ ಲೋಕಸಭೆ ಚುನಾವಣೆ ನಂತರ ಬಿಜೆಪಿ ಮಹಾರಾಷ್ಟ್ರ ಸೇರಿದಂತೆ ಎರಡು ರಾಜ್ಯಗಳಲ್ಲಿ ತನ್ನ ಅಧಿಕಾರ ಕಳೆದುಕೊಂಡಂತಾಗಿದೆ.

Leave a Reply