ಬಿಜೆಪಿ ನಾಯಕರು ಅಂದುಕೊಂಡಷ್ಟು ಸುಲಭವಲ್ಲ ಕಾಂಗ್ರೆಸ್ ಮುಕ್ತ ಭಾರತ!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮುಕ್ತ ಭಾರತ… ಇಂತಹದೊಂದು ಕನಸನ್ನು ಇಟ್ಟುಕೊಂಡು 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆ ಆಯ್ತು, 2019ರ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದೆಯಾದರೂ ತಮ್ಮ ಕನಸು ಅಂದುಕೊಂಡಷ್ಟು ಸುಲಭ ಅಲ್ಲ ಎಂದು ಬಿಜೆಪಿ ನಾಯಕರಿಗೆ ಕಳೆದೊಂದು ವರ್ಷದಲ್ಲಿ ಅರಿವಾಗಿದೆ.

ಆರಂಭದಲ್ಲಿ ಮೋದಿ ಅಲೆಯನ್ನೇ ಬಂದವಾಳವನ್ನಾಗಿಟ್ಟುಕೊಂಡಿದ್ದ ಬಿಜೆಪಿ ಹಲವು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿ ದೇಶದ ಮುಕ್ಕಾಲು ಭಾಗದ ರಾಜ್ಯದಲ್ಲಿ ಅಧಿಕಾರ ಹಿಡಿದಿತ್ತು. ಒಂದು ಹಂತದಲ್ಲಿ ಕಾಂಗ್ರೆಸ್ ಸರ್ಕಾರ ಇದದ್ದು ಕೇವಲ 3 ರಾಜ್ಯಗಳಲ್ಲಿ ಮಾತ್ರ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ನಿನ್ನೆ ಪ್ರಕಟವಾದ ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶದೊಂದಿಗೆ ಕಳೆದ ಒಂದು ವರ್ಷದಲ್ಲಿ ಬಿಜೆಪಿ ಐದು ರಾಜ್ಯಗಳಲ್ಲಿ ತನ್ನ ಅಧಿಕಾರ ಕಳೆದುಕೊಂದಿದೆ.

ಕಳೆದ ವರ್ಷ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಲ್ಲಿ ಬಿಜೆಪಿ ಮೋದಿ ಅಲೆಯಲ್ಲಿ ಗೆಲ್ಲುತ್ತದೆ ಎಂದು ಬಿಂಬಿತವಾಗಿತ್ತು. ಆದ್ರೆ ಮತದಾರ ಕಾಂಗ್ರೆಸ್ ಕೈ ಹಿಡಿದು ಅಚ್ಚರಿ ಮೂಡಿಸಿದ. ಈ ಫಲಿತಾಂಶದೊಂದಿಗೆ ಬಿಜೆಪಿ ಲೋಕಸಭೆ ಚುನಾವಣಾಯಲ್ಲಿ ಹಿನ್ನಡೆ ಅನುಭವಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಮತದಾರ ಬಿಜೆಪಿಗೆ 300+ ಭರ್ಜರಿ ಬಹುಮತ ನೀಡಿದ್ದ. ನಂತರ ನಡೆದ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಭಾವಿಸಿದಾಗ ಮತದಾರ ಮತ್ತೆ ಸುಳ್ಳು ಮಾಡಿದ. ಕಳೆದೊಂದು ವರ್ಷದಲ್ಲಿ ಬಂದಿರುವ ಚುನಾವಣಾ ಫಲಿತಾಂಶಗಳನ್ನು ನೋಡಿದರೆ, ಬಿಜೆಪಿಯನ್ನು ರಾಷ್ಟ್ರಮಟ್ಟಕ್ಕೆ ಸೀಮಿತಗೊಳಿಸಿ, ರಾಜ್ಯದಲ್ಲಿ ಸ್ಥಳೀಯ ಪಕ್ಷಗಳು ಹಾಗೂ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಇದು ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಕನಸಿಗೆ ತಣ್ಣೀರೆರೆಚಿದೆ.

ಬಿಜೆಪಿಗೆ ಆಗಿರುವ ಹಿನ್ನಡೆ ಕಾಂಗ್ರೆಸ್ ಪಕ್ಷಕ್ಕೆ ವರ ಎಂದು ಭಾವಿಸಿದರೆ ತಪ್ಪಾಗುತ್ತದೆ. ಬಿಜೆಪಿ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಕಮಲ ಮುಕ್ತ ಭಾರತ ಎಂಬ ಮಾತುಗಳು ಆರಂಭಿಸಿವೆ. ಇದು ಕೇವಲ ಭ್ರಮೆ ಅಷ್ಟೇ. ಕಾಂಗ್ರೆಸ್ ಮುಕ್ತ ಭಾರತ ಕನಸು ಎಂದು ಪರಿಗಣಿಸುವುದಾದರೆ ಕಮಲ ಮುಕ್ತ ಭಾರತ ಸದ್ಯಕ್ಕೆ ಭ್ರಮೆ ಎಂದೇ ಪರಿಗಣಿಸಬೇಕು. ಕಾರಣ, ಲೋಕಸಭೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಬಹುಮತ ಹೊಂದಿದೆ. ಇನ್ನು ರಾಜ್ಯಸಭೆಯಲ್ಲಿ ಮಿತ್ರ ಪಕ್ಷಗಳ ಜತೆ ಬಹುಮತ ಪಡೆಯುವ ಹಂತಕ್ಕೆ ಬಂದಿದೆ. ಇನ್ನು ವಿರೋಧ ಪಕ್ಷವಾಗಲು ಯಾವ ಒಂದು ಪಕ್ಷಕ್ಕೂ ಸಂಖ್ಯಾಬಲ ಇಲ್ಲ. ಇಂತಹ ಸಮಯದಲ್ಲಿ ಕಮಲ ಮುಕ್ತ ಭಾರತ ಭ್ರಮೆಯೇ ಸರಿ.

ಸತತ ಕುಸಿತ ಕಾಣುತ್ತಿದ್ದ ಕಾಂಗ್ರೆಸ್ ಗೆ ಕಳೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಕೊಂಚ ನೆಮ್ಮದಿ ನೀಡಿದೆ. ಹಾಗಂತ ಕಾಂಗ್ರೆಸ್ ಎಚ್ಚರ ತಪ್ಪಿದರೆ ಪ್ರಮಾಡವೇ ಸರಿ. ಹೀಗಾಗಿ ಕಾಂಗ್ರೆಸ್ ಕೆಲವು ವಿಚಾರಗಳಲ್ಲಿ ತನ್ನ ತಪ್ಪು ತಿದ್ದುಕೊಳ್ಳಬೇಕು. ಆಗ ಮಾತ್ರ ಬಿಜೆಪಿಗೆ ಪೈಪೋಟಿ ನೀಡಲು ಸಾಧ್ಯ. ಇಲ್ಲವಾದರೆ ಕೇವಲ ಭ್ರಮೆಯಲ್ಲೇ ಬದುಕುವ ಪರಿಸ್ಥಿತಿ ಬರಬಹುದು.

ಸದ್ಯ ಕಾಂಗ್ರೆಸ್ ಕಾಂಗ್ರೆಸ್ ಲೋಕಸಭಾ ಚುನಾವಣೆ ಸೇರಿದಂತೆ ಕೇಂದ್ರ ಸರ್ಕಾರವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ. ಇನ್ನು ಮೋದಿಗೆ ಪರ್ಯಾಯವಾಗಿ ದೇಶದ ಜನರು ಒಪ್ಪಿಕೊಳ್ಳುವಂತಹ ನಾಯಕನನ್ನು ಆಯ್ಕೆ ಮಾಡಲು ಕಾಂಗ್ರೆಸ್ ವಿಫಲವಾಗಿದೆ. ಇನ್ನು ಕೇಂದ್ರ ಸರ್ಕಾರ ಭಾವನಾತ್ಮಕ ವಿಚಾರಗಳನ್ನು ಚುನಾವಣೆ ತಂತ್ರಗಾರಿಕೆ ಪ್ರಯೋಗಿಸಿದಾಗ ಅದನ್ನು ನಿಭಾಯಿಸುವಲ್ಲಿ ವಿಫಲವಾಗುತ್ತಿದೆ. ಕೇಂದ್ರ ಸರ್ಕಾರವನ್ನು ದೂಷಿಸುವ ಭರದಲ್ಲಿ ತಾನೇ ಜನರ ಕಣ್ಣಿಗೆ ಋಣಾತ್ಮಕವಾಗಿ ಬಿಂಬಿತವಾಗುತ್ತಿದೆ. ಇದು ಸಹಜವಾಗಿ ಬಿಜೆಪಿಗೆ ಪ್ಲಸ್ ಆಗಿದೆ. ಈ ವಿಚಾರಗಳಲ್ಲಿ ಕಾಂಗ್ರೆಸ್ ಆದಷ್ಟು ಬೇಗ ಜಾಗೃತವಾಗಬೇಕು.

ಈಗ ಕಾಂಗ್ರೆಸ್ ಮುಕ್ತ ಭಾರತ ಅಂದುಕೊಂಡಷ್ಟು ಸುಲಭ ಅಲ್ಲ ಅಂತಾ ಬಿಜೆಪಿ ನಾಯಕರಿಗೆ ಅರಿವಾಗುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಪುಟಿದೇಳಬೇಕು. ಇಲ್ಲವಾದರೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಬಿಜೆಪಿಯನ್ನು ಕಟ್ಟಿಹಾಕಲು ಬೇರೆ ಪಕ್ಷಗಳನ್ನು ಸಹಾಯ ಬೇಡಬೇಕಾಗುತ್ತದೆ.

Leave a Reply