ಬಿಜೆಪಿಯ ಎಲ್ಲಾ ಟೀಕೆಗಳಿಗೆ ಖಾದರ್ ತಿರುಗೇಟು ಹೇಗಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಮಂಗಳೂರು ಗೋಲಿಬಾರ್ ಬಳಿಕ ರಾಜ್ಯದಲ್ಲಿ ರಾಜಕೀಯ ಮೇಲಾಟ ಶುರುವಾಗಿದೆ. ಮಾಜಿ ಸಚಿವ ಯು ಟಿ ಖಾದರ್ ನೀಡಿದ ಹೇಳಿಕೆಯಿಂದಲೇ ಗಲಭೆ ನಡೀತು ಎನ್ನುವ ಆರೋಪ BJP ನಾಯಕರಿಂದ ಕೇಳಿಬಂದಿತ್ತು. ಎನ್‌ಆರ್‌ಸಿ ಹಾಗು ಪೌರತ್ವ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿ ಮಾಡಿದ್ರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಖಾದರ್ ಹೇಳಿಕೆ ನೀಡಿದ ಮಾರನೇ ದಿನವೇ ಗಲಾಟೆ ನಡೆದಿತ್ತು. ತಮ್ಮ ವಿರುದ್ಧದ ಆರೋಪಕ್ಕೆ ಖಾದರ್ ಇವತ್ತು ತಿರುಗೇಟು ನೀಡಿದ್ದು, ಬಿಜೆಪಿ ಪಕ್ಷವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಯು.ಟಿ ಖಾದರ್, ‘ಜನರ ಭಾವನೆ ಬೇರೆ ಕಡೆ ಸೆಳೆಯಲು ಬಿಜೆಪಿ ಪ್ರಯತ್ನ ನಡೆಸುತ್ತಿದ್ದು, ಈಗ ಉದ್ಭವ ಆಗಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಕಾರಣ ಎಂದು ಬಿಂಬಿಸುತ್ತಿದೆ. ಜಾರ್ಖಂಡ್ ಸೋಲಿನ ಬಳಿಕ ಇಂತಹ ಪ್ರಯತ್ನ ನಡೆಸಿದೆ. ಪೌರತ್ವ ಕಾಯ್ದೆ ವಿರೋಧಿಸಿ ಎಲ್ಲೆಡೆ ಧರಣಿ ನಡೆಯುತ್ತಿದೆ. ಧರಣಿಯನ್ನ ಹತ್ತಿಕ್ಕಲು ಇನ್ನಿಲ್ಲದ ಕಸರತ್ತು ನಡೆಸಿದೆ.

ದೇಶ ಆರ್ಥಿಕತೆಗೆ ಹಿನ್ನಡೆಯಾಗುತ್ತಿದೆ. ಪೆಟ್ರೋಲಿಯಂ ಖಾಸಗಿ ಕಾರಣ ಮಾಡಲಾಗುತ್ತಿದೆ. ನೋಟ್‌ಬ್ಯಾನ್‌ನಿಂದ ಹಿನ್ನಡೆಯಾಗಿದೆ. ಉದ್ಯೋಗ ಇಲ್ಲದೆ ಜನ ರೋಸಿ ಹೋಗಿದ್ದಾರೆ. ಇದೆಲ್ಲದರ ಹಿನ್ನೆಲೆ ಪ್ರತಿಭಟನೆ ನಡೆಯುತ್ತಿದೆ. ಈ ಸಮಸ್ಯೆಗಳನ್ನ ಬಗೆಹರಿಸೋಕೆ ಕೇಂದ್ರ ಸರ್ಕಾರಕ್ಕೆ ಆಗ್ತಿಲ್ಲ. ಇದನ್ನೆಲ್ಲಾ ಮರೆಮಾಚಲು ವ್ಯವಸ್ಥಿತವಾಗಿ ಸಂಚು ರೂಪಿಸ್ತಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಯು ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸರ್ಕಾರ ಕೆಲಸದಲ್ಲಿ ನಂಬರ್ ಒನ್ ಆಗ್ತಿಲ್ಲ. ಮ್ಯಾನ್ಯುಪಲೇಟ್ ಮಾಡೋದ್ರಲ್ಲಿ ನಂಬರ್ ಒನ್ ಆಗ್ತಿದೆ. ಪೌರತ್ವದ ವಿರುದ್ಧ ಕೇವಲ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿಲ್ಲ. ತ್ರಿಪುರಾದಲ್ಲಿ ನಿಮ್ಮ ಕೋ ಪಾರ್ಟಿ ಆಫೋಸ್ ಮಾಡಿದೆ. ಆಂಧ್ರದಲ್ಲಿ ಕಾಂಗ್ರೆಸ್ ಆಡಳಿತವಿಲ್ಲ. ಅಲ್ಲಿನ ಸರ್ಕಾರ ಕೂಡ ಆಫೋಸ್ ಮಾಡಿದೆ. ಕೇರಳ,ತಮಿಳುನಾಡಿನಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಅಲ್ಲಿನ ಸರ್ಕಾರಗಳು ವಿರೋಧಿಸುತ್ತಿವೆ. ಬಿಹಾರದಲ್ಲಿ ನಿಮ್ಮದೇ ಮೈತ್ರಿ ಸರ್ಕಾರವಿದೆ. ಅಲ್ಲಿಯೂ ಜೆಡಿಯು ಆಫೋಸ್ ಮಾಡ್ತಿದೆ. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಅಧಿಕಾರ ನಡೆಸಿದ್ರಿ, ಆಗ ನಿಮಗೆ ನಾಚಿಕೆ ಆಗಲಿಲ್ವಾ..? ಆದರೂ ಕಾಂಗ್ರೆಸ್ ಪಾರ್ಟಿ ಮೇಲೆ ಮಾತ್ರ ದೂಷಣೆ ಮಾಡ್ತೀರಿ..? ಎಂದು ಪ್ರಶ್ನಿಸಿದ್ರು.

ಎನ್‌ಆರ್‌ಸಿ ವಿರುದ್ಧ ಇಡೀ ದೇಶದಲ್ಲಿ ವಿರೋಧವಿದೆ. ಬಿಜೆಪಿ ಆಡಳಿತ ರಾಜ್ಯಗಳಲ್ಲೇ ಘರ್ಷಣೆ ನಡೆದಿರೋದು. ಬೇರೆ ಪಕ್ಷಗಳು ಅಧಿಕಾರದಲ್ಲಿರುವ ಕಡೆ ಏನೂ ಆಗಿಲ್ಲ. ಅಂದರೆ ಪ್ರತಿಭಟನೆಗೆ ನಿಮ್ಮದೇ ಪ್ರಚೋದನೆಯಿದೆ. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನ ತಿರಸ್ಕರಿಸೋಕೆ ಹೊರಟಿದ್ದೀರಿ, ಸಂವಿಧಾನವನ್ನೇ ಗಾಳಿಗೆ ತೂರುತ್ತಿದ್ದೀರಿ, ಜನಸಾಮಾನ್ಯರನ್ನ ವಿಶ್ವಾಸಕ್ಕೆ ತೆಗೆದುಕೊಳ್ತಿಲ್ಲ ಎಂದು ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಯು ಟಿ ಖಾದರ್ ಆಕ್ರೋಶ ಹೊರಹಾಕಿದ್ದಾರೆ.

ನಾನು ಮಂಗಳೂರಿನಲ್ಲಿ ಮಾತನಾಡಿದ್ದು ಏನಂದ್ರೆ..? ದೇಶ ಶಾಂತಿಯುತವಾಗಿದೆ , ಸೌಹಾರ್ಧಯುತವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶ ಸಮಸ್ಯೆಗೆ ಸಿಲುಕಿದೆ. ಇದಕ್ಕೆಲ್ಲ ಬಿಜೆಪಿಯವರೇ ಕಾರಣ, ಇದನ್ನೇ ನಾನು ವಿವರಿಸಿದ್ದು. ಜನರ ಭಾವನೆಗಳನ್ನ ಪ್ರತಿನಿಧಿಯಾಗಿ ಸರ್ಕಾರದ ಗಮನಕ್ಕೆ ತಂದೆ. ನನ್ನ ಹೇಳಿಕೆಯನ್ನ ಬಗೆಹರಿಸುವ ಕೆಲಸ ಮಾಡಲಿಲ್ಲ. ನನ್ನ ಮೇಲೆ ಎಫ್‌ಐಆರ್ ಹಾಕಲಾಗಿದೆ. ಎಫ್‌ಐಆರ್ ಕಾಪಿಯನ್ನು ಪಾರ್ಟಿ ಆಫಿಸ್‌ಗೆ ಕಳುಹಿಸಿದ್ದಾರೆ. ಎಫ್‌ಐಆರ್‌ ಅನ್ನು ನೇರವಾಗಿ ನಮಗೆ ತಲುಪಿಸಬೇಕು. ಅದೇ ಪ್ರತಿಯನ್ನು ಪ್ರೆಸ್‌ನವರಿಗೂ ಕೊಟ್ಟಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಕಂಡಲ್ಲಿ ಗುಂಡಿಕ್ಕಿ ಅಂತಾರೆ. ಅವರ ಮೇಲೆ ಯಾಕೆ ಎಫ್‌ಐಆರ್ ಹಾಕಿಲ್ಲ..? ಒಬ್ಬ ಕೇಂದ್ರ ಸಚಿವರೇ ಜನರನ್ನ ಸಾಯಿಸೋಕೆ ಹೇಳ್ತಾರೆ. ಇಂತ ಹೇಳಿಕೆ ಕೊಡುವುದು ಸರಿಯೇ..?
ಕೂಡಲೇ ಸುರೇಶ್ ಅಂಗಡಿ ವಿರುದ್ಧ ಎಫ್ಐಆರ್ ಹಾಕಲಿ ಎಂದು ಆಗ್ರಹಿಸಿದ್ದಾರೆ.

Leave a Reply