ಸಿಪಿಐ ಕಚೇರಿಗೆ ಬೆಂಕಿ ಹಿಂದೆ ಇದೆಯೇ ಯಡಿಯೂರಪ್ಪಗಾದ ಅವಮಾನದ ಸೇಡು?

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆ ಪರ ವಿರೋಧದ ಪ್ರತಿಭಟನೆ ಯಾಕೋ ಕರ್ನಾಟಕ ವರ್ಸಸ್ ಕೇರಳ ಎಂದು ತಿರುಗುವ ಸೂಚನೆ ಬರುತ್ತಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಇಡೀ ಕರ್ನಾಟಕದಲ್ಲಿ ಹೋರಾಟ ನಡೆದರೂ ಮಂಗಳೂರಲ್ಲಿ ಉಗ್ರ ಸ್ವರೂಪ ಪಡೆದುಕೊಂಡಿತ್ತು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ರು, ಮದ್ದು ಗುಂಡುಗಳನ್ನು ವಶಕ್ಕೆ ಪಡೆಯಲು ಯತ್ನಿಸಿದ್ರು ಅನ್ನೋ ಆರೋಪದ ಮೇಲೆ‌ ಗೋಲಿಬಾರ್ ನಡೆಸಲಾಗಿತ್ತು. ಈ ವೇಳೆ ಪೊಲೀಸರ ಕೃತ್ಯವನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಉದ್ದೇಶದಿಂದ ಕೇರಳದ ಪಟಭದ್ರ ಹಿತಾಸಕ್ತಿಗಳು ರಾಜ್ಯಕ್ಕೆ ಆಗಮಿಸಿವೆ. ಕೇರಳದಿಂದ ಬಂದಿರುವ ದುಷ್ಟರು ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಸಿದ್ದಾರೆ. ನಾವೂ ತನಿಖೆ ನಡೆಸಿ, ಬಂಧನ ಮಾಡುವ ಕೆಲಸ ಮಾಡ್ತೇವೆ ಎಂದಿದ್ರು.

ಇದರ ಬೆನ್ನಲ್ಲೇ ಕೇರಳಕ್ಕೆ ತೆರಳಿದ ಸಿಎಂ ಯಡಿಯೂರಪ್ಪ, ಬೃಹತ್ ಪ್ರತಿಭಟನೆ ಬಿಸಿ ಎದುರಿಸಬೇಕಾದ ಸ್ಥಿತಿಗೆ ತಲುಪಿದ್ರು. ಅನಂತ ಪದ್ಮನಾಭಸ್ವಾಮಿ ದೇವಸ್ಥಾನ ಹಾಗು ರಾಜರಾಜೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದ ಬಿ.ಎಸ್ ಯಡಿಯೂರಪ್ಪ ಅವರನ್ನು ಪ್ರತಿಭಟನಾಕಾರರು ತಡೆದು ಆಕ್ರೋಶ ವ್ಯಕ್ತಪಡಿಸಿದ್ರು.

ಕೇರಳದಿಂದ ಮಂಗಳೂರಿಗೆ ಸಿಎಂ ಯಡಿಯೂರಪ್ಪ ನಿನ್ನೆ ರಾತ್ರಿ ವಾಪಸ್ ಆಗಿದ್ರು. ಗಲಭೆ ಮಾಡಿದವರು ಕೇರಳದಿಂದ ಬಂದವರು ಎಂದು ನಾನು ಹೇಳಿಲ್ಲ ಎಂದರು. ಇದರ ಬೆನ್ನಲ್ಲೇ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿಪಿಐ ಕಚೇರಿಗೆ ಬೆಂಕಿ ಹಾಕಲು ಯತ್ನ ಮಾಡಲಾಗಿದೆ.

ಸಿಎಂ ಯಡಿಯೂರಪ್ಪ ಕೇರಳ ಪ್ರವಾಸದ ವೇಳೆ ಸಿಪಿಐ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಅದೇ ಪಕ್ಷದ ಕಚೇರಿಗೆ ದುಷ್ಕರ್ಮಿಗಳು ತಡರಾತ್ರಿ ಒಂದು ಗಂಟೆ ಸುಮಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಲು ಯತ್ನ ನಡೆಸಿದ್ದಾರೆ. ಘಟನೆಯಲ್ಲಿ 6 ಬೈಕ್ ಗಳು ಸುಟ್ಟು ಹೋಗಿವೆ‌. ಪೌರತ್ವ ತಿದ್ದುಪಡಿ ಕಾಯ್ದೆಗೆ ಸಿಪಿಐ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಯಡಿಯೂರಪ್ಪ ಕೇರಳ ಪ್ರವಾಸದ ವೇಳೆ ಪ್ರತಿಭಟನೆ ನಡೆಸಲಾಗಿತ್ತು. ಇದೇ ಕಾರಣಕ್ಕೆ ಕಚೇರಿಗೆ ಬೆಂಕಿ ಹಾಕಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ದುಷ್ಕರ್ಮಿಗಳ ಕೃತ್ಯ ವಿರೋಧಿಸಿ ಸಿಪಿಐನಿಂದ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದು, ಮಧ್ಯಾಹ್ನ 1 ಗಂಟೆಗೆ ಮಲ್ಲೇಶ್ವರಂ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗುತ್ತೆ.

ಪೆಟ್ರೋಲ್ ಸುರಿದು ಬಾಗಿಲಿಗೆ ಬೆಂಕಿ ಹಾಕಿರುವ ಪ್ರಕರಣದ ಬಗ್ಗೆ ಸದ್ಯ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಮಾತನಾಡಿರುವ ಡಿಸಿಪಿ ಚೇತನ್ ಸಿಂಗ್ ರಾಥೋಡ್, ‘ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸಿಪಿಐ ಪಕ್ಷದ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಆರು ಬೈಕ್‌ಗಳಿಗೆ ಬೆಂಕಿ ಇಡಲಾಗಿದೆ. ಪೆಟ್ರೋಲ್ ಹಾಕಿ ಬೆಂಕಿ ಬಾಗಿಲಿಗೂ ಬೆಂಕಿ ಇಟ್ಟಿದ್ದಾರೆ. ಯಾರೋ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ತಡರಾತ್ರಿ ಕೃತ್ಯ ಎಸಗಿದ್ದಾರೆ. ಸದ್ಯ ದೂರು ಪಡೆದು ನಂತರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದೆವೆ. ಯಾರು..? ಯಾವ ಕಾರಣಕ್ಕೆ ಮಾಡಿದ್ದಾರೆ ಅನ್ನೊದನ್ನ ಪರಿಶೀಲನೆ ನಡೆಸಬೇಕು. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದಿದ್ದಾರೆ.

Leave a Reply