ಕಂಕಣ ಸೂರ್ಯಗ್ರಹಣದಿಂದ ದೇವಸ್ಥಾನಗಳಲ್ಲಿ ಒಡಕು..!?

ಡಿಜಿಟಲ್ ಕನ್ನಡ ಟೀಮ್:

ಇವತ್ತು ಎಲ್ಲೆಲ್ಲೂ ಕಂಕಣ ಸೂರ್ಯಗ್ರಹಣದ್ದೇ ಮಾತು. ಬೆಳಗ್ಗೆ 8 ಗಂಟೆ 5 ನಿಮಿಷದಿಂದ ಆರಂಭವಾಗಿರುವ ಖಗೋಳದ ಬೆಳಕು ನೆರಳಿನಾಟ 11 ಗಂಟೆ 5 ನಿಮಿಷದ ತನಕವೂ ನಡೆಯಲಿದೆ. ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ರೆ, ಅಧ್ಯಯನ ವಿದ್ಯಾರ್ಥಿಗಳು ಕೌತುಕದಿಂದ ವೀಕ್ಷಣೆ ಮಾಡ್ತಿದ್ದಾರೆ.

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಸಂಪೂರ್ಣ ಕಂಕಣ ಸೂರ್ಯಗ್ರಹಣ ಗೋಚರಿಸಲಿದೆ. ಅದರಲ್ಲೂ ಕರ್ನಾಟಕದ ಮಂಗಳೂರು, ಮಡಿಕೇರಿ, ಮೈಸೂರಲ್ಲಿ ಸೂರ್ಯ ಸಂಪೂರ್ಣವಾಗಿ ಆವರಿಸಲಿದ್ದಾನೆ ಎಂದು ಖಗೋಳ ತಜ್ಞರು ಹೇಳಿದ್ದಾರೆ. 3 ಗಂಟೆ 12 ನಿಮಿಷಗಳ ಕಾಲ ಸೂರ್ಯ, ಚಂದ್ರ, ಭೂಮಿ ಒಂದೇ ಕಕ್ಷೆಯಲ್ಲಿ ಹಾದು ಹೋಗುವ ಸಮಯವಾಗಿದೆ. ಅತೀ ದೀರ್ಘ ಗ್ರಹಣ ಇದಾಗಿದ್ದು, 2020ರ ಜೂನ್​ನಲ್ಲಿ ಮತ್ತೆ ಸೂರ್ಯಗ್ರಹಣ ಸಂಭವಿಸಲಿದೆ. ಭಾರತದ ಬೇರೆ ಬೇರೆ ಭೂಪ್ರದೇಶದಲ್ಲಿ ಭಾಗಶಃ ಗ್ರಹಣ ಸಂಭವ ಸಂಭವಿಸಲಿದ್ದು, ಸೂರ್ಯನ ಬೆಳಕು ಕತ್ತಲಿನ ಚಮತ್ಕಾರ ನೋಡಲು ಸಾಧ್ಯವಿಲ್ಲ.

ಬರಿಗಣ್ಣಿನಿಂದ ಸೂರ್ಯಗ್ರಹಣ ನೋಡುವಂತಿಲ್ಲ ಎಂದು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಎಕ್ಲಿಪ್ಸ್​ ಗಾಗಲ್​, ವೆಲ್ಡಿಂಗ್​ ಗ್ಲಾಸ್​ ಮೂಲಕ ಮಾತ್ರ ವೀಕ್ಷಿಸಿ, ಜೊತೆಗೆ ಪದೇ ಪದೇ ಸೂರ್ಯನನ್ನು ನೋಡಿದ್ರೆ ದೃಷ್ಠಿ ಹೋಗುತ್ತೆ ಹುಷಾರ್ ಎಂದೂ ಎಚ್ಚರಿಕೆ ಕೊಟ್ಟಿದ್ದಾರೆ. ಆದ್ರೆ ಗ್ರಹಣ ಕಾಲದಲ್ಲಿ ಬಾಗಿಲು ಬಂದ್​ ಮಾಡುವ ವಿಚಾರದಲ್ಲಿ ದೇವಸ್ಥಾನಗಳಲ್ಲಿ ಒಡಕು ಮೂಡಿದೆ ಅನ್ನೋದು ಸ್ಪಷ್ಟವಾಗಿದೆ.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನವನ್ನು ಗ್ರಹಣ ಕಾಲದಲ್ಲಿ ಬಂದ್​ ಮಾಡಿದ್ದಾರೆ. ಸಾರ್ವಜನಿಕರು, ಭಕ್ತರಿಗೆ ದೇಗುಲ ಪ್ರವೇಶ ನಿರ್ಬಂಧ ಮಾಡಿರುವ ಆಡಳಿತ ಮಂಡಳಿ, ಪ್ರಸಾದ ವ್ಯವಸ್ಥೆಯನ್ನೂ ಕಡಿತಗೊಳಿಸಿ ಆದೇಶ ಮಾಡಿದೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲ ಕೂಡ ಬಂದ್​ ಆಗಿದ್ದು, ಕೋಲಾರ ಕುರುಡುಮಲೆ ಗಣಪತಿ ದೇಗುಲ ಕೂಡ ಮುಚ್ಚಿದೆ. ಯಡಿಯೂರು ಸಿದ್ದಲಿಂಗೇಶ್ವರ ದೇಗುಲ, ತುಮಕೂರಿನ ದಸರೀಘಟ್ಟ ಚೌಡೇಶ್ವರಿ ದೇವಸ್ಥಾನ, ಗೊರವನಹಳ್ಳಿ ಲಕ್ಷ್ಮಿದೇವಸ್ಥಾನ, ದೇವರಾಯನದುರ್ಗದ ನರಸಿಂಹಸ್ವಾಮಿ ದೇಗುಲವನ್ನು ಮುಚ್ಚಲಾಗಿದೆ. ಮಂತ್ರಾಲಯದ ರಾಯರ ಮಠ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳದ ಶ್ರೀ ಮಂಜುನಾಥ ದೇವಸ್ಥಾನ, ಶಬರಿಮಲೆ ಅಯ್ಯಪ್ಪನ ದೇಗುಲದಲ್ಲೂ ಭಕ್ತರಿಗೆ ದೇವರ ದರ್ಶನವಿಲ್ಲ. ರಾಮನಗರದ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ, ಮಾಗಡಿ ರಂಗನಾಥಸ್ವಾಮಿ, ಕನಕಪುರದ ಕಬ್ಬಾಳಮ್ಮ ದೇವಸ್ಥಾನದಲ್ಲೂ ಗ್ರಹಣ ಮೋಕ್ಷದ ಬಳಿಕ ಪೂಜೆ ನೆರವೇರಿಸಲು ನಿರ್ಧಾರ ಮಾಡಲಾಗಿದೆ. ಆದ್ರೆ ರಾಜ್ಯದ ಇನ್ನುಳಿದ ಅನೇಕ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯ ಯಥಾಸ್ಥಿತಿಯಲ್ಲಿ ಇರಲಿದೆ. ಇದಕ್ಕೆ ಕಾರಣವೇ ಕುತೂಹಲ.

ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಗ್ರಹಣ ಕಾಲದಲ್ಲೂ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ದರ್ಶನ ಇದೆ ಆದರೆ ಮಧ್ಯಾಹ್ನ ಊಟ ಇಲ್ಲ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲೂ ದರ್ಶನ ಇರುತ್ತೆ, ಪ್ರಸಾದ ಇರಲ್ಲ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ದರ್ಶನ, ಜಲಾಭಿಷೇಕ ಇರುತ್ತೆ. ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲೂ ಎಂದಿನಂತೆ ದರ್ಶನ, ಪೂಜಾ ಕೈಂಕರ್ಯ ಇರಲಿದೆ. ಗ್ರಹಣದ ವೇಳೆಯಲ್ಲೂ ದರ್ಶನ ನೀಡಲಿದ್ದಾನೆ ಮಲೆಮಹದೇಶ್ವರ ಸ್ವಾಮಿ. ಆದ್ರೆ ಈ ಬದಲಾವಣೆ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ. ರಾಜ್ಯದ ಹಲವು ದೇವಸ್ಥಾನಗಳು ಮುಚ್ಚಿದ್ರೆ, ಇನ್ನುಳಿದ ದೇವಸ್ಥಾನಗಳು ತೆರೆದಿರಲು ಕಾರಣ ಏನು ಅನ್ನೋ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕೇವಲ ಅರ್ಧ ದೇವಸ್ಥಾನಗಳಲ್ಲಿ ಮಾತ್ರ ಗ್ರಹಣ ದೋಷ ಉಂಟಾಗುತ್ತಾ..? ಇನ್ನುಳಿದ ದೇವಸ್ಥಾನಗಳಲ್ಲಿ ಗ್ರಹಣ ದೋಷ ಇರಲ್ವಾ..? ಅನ್ನೋ ಬಗ್ಗೆಯೂ ಸಾರ್ವಜನಿಕರಲ್ಲಿ ಪ್ರಶ್ನೆ ಉಂಟು ಮಾಡಿದೆ.

ಆದ್ರೆ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲೂ ಅರ್ಧ ಮುಚ್ಚಿದ್ರೆ ಇನ್ನರ್ಧ ದೇಗುಲಗಳು ಮುಚ್ಚದೆ ಇರಲು ನಿರ್ಧಾರ ಮಾಡಿದ್ದು, ದೇವಸ್ಥಾನಗಳಲ್ಲಿ 2 ಬಣ ಆಗಿರುವುದು ಖಚಿತಪಡಿಸಿದೆ. ಒಟ್ಟಾರೆ, ಕೆವು ದೇಗುಲಗಳು ಮೂಢ ನಂಬಿಕೆಯನ್ನು ಬಿತ್ತಬಾರದು ಅನ್ನೋ ಕಾರಣಕ್ಕೆ ದೇವಸ್ಥಾನ ತೆರೆದಿದ್ದಾರೆ. ಇನ್ನುಳಿದ ದೇವಸ್ಥಾನಗಳು ಹಿಂದಿನಿಂದ ಪಾಲಿಸಿಕೊಂಡು ಬಂದ ಸಂಪ್ರದಾಯವನ್ನೇ ಪಾಲಿಸಿದ್ದಾರೆ.

ಆದ್ರೆ ಸೂರ್ಯಗ್ರಹಣವನ್ನ ಬರಿಗಣ್ಣಿನಿಂದ ನೋಡದೆ ಸೂಕ್ತ ವಸ್ತುಗಳನ್ನು ಬಳಸಿ ನೋಡಬಹುದು. ಆಹಾರ ತಿನ್ನುವುದರಿಂದ ಯಾವುದೇ ಸಮಸ್ಯೆ ಆಗಲ್ಲ ಅಂತಿದ್ದಾರೆ ವಿಜ್ಞಾನಿಗಳು.

Leave a Reply