ದೆಹಲಿಯಿಂದ ಎಚ್ಚರಿಕೆ ಬಂದ ಮೇಲೆ ಪರಿಹಾರ ಹಿಂಪಡೆಯಲಾಗಿದೆ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಮಂಗಳೂರು ಗೋಲಿಬಾರ್ ನಲ್ಲಿ ಸತ್ತವರಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತಾದರೂ ದೆಹಲಿಯಿಂದ ಎಚ್ಚರಿಕೆ ಬಂದ ನಂತರ ಹಿಂಪಡೆಯಲಾಗಿದೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದು ಈ ಪ್ರಕರಣವೇ ಸಾಕ್ಷಿ’ ಎಂದರು. ಈ ವೇಳೆ ಅವರು ಹೇಳಿದ್ದಿಷ್ಟು…

ನಮ್ಮಲ್ಲಿ ಯಾರಾದರೂ ಈ ರೀತಿ ಸತ್ತರೆ ಮಾನವೀಯತೆ ದೃಷ್ಟಿಯಿಂದ ಪರಿಹಾರ ನೀಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿ ನಂತರ ಅದನ್ನು ಹಿಂಪಡೆದಿದ್ದಾರೆ. ಇದು ಸರ್ಕಾರದ ಮನಸ್ಥಿತಿಯನ್ನು ಹೇಳುತ್ತದೆ.

ಬಿಜೆಪಿ ನಾಯಕರೇ ಹೇಳಿರುವ ಪ್ರಕಾರ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಇದಕ್ಕೆ ದೆಹಲಿ ನಾಯಕರು ಕರೆ ಮಾಡಿ, ನಿಮಗೆ ಪರಿಹಾರ ನೀಡಲು ಹೇಳಿದ್ದು ಯಾರು? ಎಂದು ಎಚ್ಚರಿಕೆ ನೀಡಿದ್ದು, ನಂತರ ಸರ್ಕಾರ ಪರಿಹಾರ ಹಿಂಪಡೆದಿದೆ.

ಅವರು ತಪ್ಪಿತಸ್ಥರೆ ಅಥವಾ ಇಲ್ಲವೇ ಎಂಬುದನ್ನು ತನಿಖೆ ಮಾಡಬೇಕೇ ಹೊರತು, ಇವರೇ ತೀರ್ಮಾನ ಮಾಡಿಬಿಟ್ಟಿದ್ದಾರೆ. ಅವರನ್ನು ಅಪರಾಧಿ ಎಂದು ನಿರ್ಧರಿಸಿ ಅವರಿಗೆ ಕೊಟ್ಟಿದ್ದ ಚೆಕ್ ಅನ್ನು ತಡೆ ಹಿಡಿದಿದ್ದಾರೆ. ಇದರ ಬಗ್ಗೆ ರಾಜ್ಯದ ಜನರಿಗೆ ತಿಳಿಸಬೇಕು.

ಇನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ‘ಇನ್ನೂ ಅದರ ಬಗ್ಗೆ ಏನೂ ಗೊತ್ತಿಲ್ಲ. ಕೆಪಿಸಿಸಿ ಎಲ್ಲೂ ಕುಸಿದು ಬಿದ್ದಿಲ್ಲ. ನಿನ್ನೆ ರಾತ್ರಿಯಷ್ಟೇ ಪತ್ರ ಬಂದಿದ್ದು, ಹಾಲಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಿಡಿದು ಫ್ರೀಡಂ ಪಾರ್ಕ ವರೆಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ ಪ್ರತಿಭಾ ಪುರಸ್ಕಾರ ಇತ್ತು. ಈ ಮೆರವಣಿಗೆ ಮುಗಿಸಿಕೊಂಡು ನಂತರ ಅಲ್ಲಿಗೆ ಹೋಗುತ್ತೇನೆ.

ದಿನೇಶ್ ಗುಂಡೂರಾವ್ ಕೆಪಿಸಿಸಿಗೆ ತಲೆಹಾಕಿಲ್ಲ ಎಂಬ ವಿಚಾರದ ಬಗ್ಗೆ ಅವರನ್ನೇ ನೀವು ಕೇಳಿ. ನಮ್ಮ ಪಕ್ಷದಲ್ಲಿ ನಾವು ಕಂಡೀಷನ್ ಹಾಕಲು ಸಾಧ್ಯವಿಲ್ಲ. ಬೆದರಿಕೆ ತಂತ್ರ ಈ ಪಕ್ಷದಲ್ಲಿ ನಡೆಯುವುದಿಲ್ಲ. ಕಾಂಗ್ರೆಸ್ ನಲ್ಲಿ ಟೋಪಿ ೫ ನಿಮಿಷಕ್ಕೆ ಚೇಂಜ್ ಆಗುತ್ತೆ. ಯಾರಾದ್ರೂ ಬ್ಲಾಕ್ ಮೇಲ್ ಮಾಡ್ತಾರೆ ಅಂದ್ರೆ ಆಗಲ್ಲ. ಅದರ ಬಗ್ಗೆ ಯೋಚನೆ ಮಾಡಿದರೆ ಅವರು ಮೂರ್ಖರು. ಪಕ್ಷದಲ್ಲಿ ನಾನು ಹೇಳಿದಂತೇ ನಡೆಯಬೇಕು ಅಂದ್ರೆ ಆಗಲ್ಲ. ನನ್ನದು ನಡೆಯಲಿಲ್ಲ, ಯಾರದ್ದೂ ನಡೆಯಲ್ಲ. ಪಕ್ಷದಲ್ಲಿ ಶಿಸ್ತಿನ ಸಿಪಾಯಿ ಆಗಿದ್ದರೆ ಮಾತ್ರ ಗೌರವಸಿಗುತ್ತೆ.

ಇನ್ನು ಎಸ್.ಎಂ ಕೃಷ್ಣ ಅವರ ಪುಸ್ತಕ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ಪುಸ್ತಕ ಬರೆದವರನ್ನು ಕೇಳಿ, ಇಲ್ಲ ಪುಸ್ತಕ ಓದಿರುವವರನ್ನು ಕೇಳಿ. ಅವರು ಮೊದಲು ಶಾಸಕನಾದಾಗ ನಾನು ಹುಟ್ಟಿದ್ದು, ಅವರು ಯಾವಾಗ ಪಕ್ಷಕ್ಕೆ ಸೇರಲು ಬಂದಿದ್ದರೋ ಗೊತ್ತಿಲ್ಲ. ನಾನು ಇರುವಾಗ ಸೇರಲು ಬಂದಿದ್ದಾರೆ ಅದರ ಬಗ್ಗೆ ನಾನು ಹೇಳಬಹುದಿತ್ತು.

ಹೊಸ ವರ್ಷದ ಶುಭಾಶಯಗಳು:

ರಾಜ್ಯದ ಜನತೆ ಹಾಗೂ ನಿಮಗೂ ಹೊಸ ವರ್ಷದ ಶುಭಾಶಯಗಳು. 2020ರ ವರ್ಷದಲ್ಲಿ ರಾಜ್ಯದ ಜನರು ಸಮೃದ್ಧಿಯಾಗಿ ಬದುಕಲಿ ಅಂತಾ ವೈಯಕ್ತಿಕವಾಗಿ ಹಾಗೂ ನನ್ನ ಪಕ್ಷದ ಪರವಾಗಿ ಶುಭ ಕೋರುತ್ತೇನೆ.

Leave a Reply