ಎರಡು ವರ್ಷಗಳ ಹಿಂದೆ ಕೊಟ್ಟ ಮಾತು ಈಗ ನಡೆಸಿದ್ದೇನೆ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಯೇಸುವಿನ ಪ್ರತಿಮೆ ವಿಚಾರವಾಗಿ ಎರಡು ವರ್ಷಗಳ ಹಿಂದೆ ನನ್ನ ಕ್ಷೇತ್ರದ ಕ್ರೈಸ್ತ ಸಮುದಾಯದವರಿಗೆ ಮಾತು ಕೊಟ್ಟಿದ್ದೆ. ಈಗ ಅದು ನಡೆದಿದೆ. ಈ ಪ್ರತಿಮೆ ಭೂಮಿ ವಿಚಾರವಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲಿಬೆಟ್ಟದಲ್ಲಿ ಯೇಸುವಿನ ಕಲ್ಲಿನ ಪ್ರತಿಮೆ ನಿರ್ಮಿಸಲು ಇತ್ತೀಚೆಗೆ ಭೂಮಿ ಪೂಜೆ ನಡೆದಿರುವುದನ್ನು ಬಿಜೆಪಿ ನಾಯಕರು ಟೀಕಿಸಿದ್ದರು. ಈ ವಿಚಾರವಾಗಿ ಶುಕ್ರವಾರ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು…

‘ನನ್ನ ಕ್ಷೇತ್ರದಲ್ಲಿ ಎಲ್ಲ ಧರ್ಮ ಹಾಗೂ ಸಮಾಜಗಳ ಜನರಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದಿಂದ ವಿಧಾನಸಭೆವರೆಗೂ ನನ್ನನ್ನು ಬೆಳೆಸಿದ್ದಾರೆ. ನಾನು ಕಷ್ಟ ಕಾಲದಲ್ಲಿದ್ದಾಗ ಹಗಲು ರಾತ್ರಿ ಪ್ರಾರ್ಥನೆ ಮಾಡಿ, ಮೌನ ಪ್ರತಿಭಟನೆ ಮಾಡಿ ನನ್ನ ಬೆನ್ನಿಗೆ ನಿಂತಿದ್ದಾರೆ.

ಎರಡು ವರ್ಷಗಳ ಹಿಂದೆ ಪ್ರತಿಮೆ ಮಾಡಲು ಮುಂದಾಗಿದ್ದರು. ಆಗ ನಾನೇ ತಡೆದು ಸರ್ಕಾರಿ ಜಾಗದಲ್ಲಿ ಪ್ರತಿಮೆ ಮಾಡಿದರೆ ಭವಿಷ್ಯದಲ್ಲಿ ತೊಂದರೆ ಆಗಬಹುದು ಅಂತಾ ನಾನೇ ತಡೆದು, ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಅವರಿಗೆ ಮನವಿ ಮಾಡಿ 10 ಎಕರೆ ಜಮೀನು ಮಂಜೂರು ಮಾಡಿಸಿದೆ.

ಈ ಜಾಗಕ್ಕೆ ನಾನೇ ಸರ್ಕಾರಕ್ಕೆ ದುಡ್ಡು ಕಟ್ಟಿ ಮಂಜೂರು ಮಾಡಿಸಿದೆ. ಮೊನ್ನೆ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಅವರಿಗೆ ಹಕ್ಕು ಪತ್ರ ನೀಡಿದ್ದೇನೆ. ಅದು ನೂರಾರು ಎಕರೆ ಬೆಟ್ಟ ಪ್ರದೇಶದ ಸರ್ಕಾರದಿಂದಲೇ ಮಂಜೂರು ಮಾಡಿದ ಮೇಲೆ ಯಾವ ಸಮಸ್ಯೆಯೂ ಇಲ್ಲ.

ಕೇವಲ ಇದೊಂದೇ ಅಲ್ಲ ನನ್ನ ಕನಕಪುರ ಕ್ಷೇತ್ರದಲ್ಲಿ ಸರ್ಕಾರಿ ವಿದ್ಯಾಸಂಸ್ಥೆಗೆ ನನ್ನ ಸ್ವಂತ ಜಾಗವನ್ನು ನೀಡಿದ್ದೇವೆ. ನೂರಾರು ದೇವಸ್ಥಾನ ಕಟ್ಟಿಸಿಕೊಟ್ಟಿದ್ದೇವೆ. ಯಶವಂತಪುರದಲ್ಲೂ ರಾಮನ ದೇವಾಲಯ, ಮಂಗಳಕರಿ ಮಾರಮ್ಮ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಿವೆ. ಎಸ್.ಎಂ ಕೃಷ್ಣ ಅವರು ಮುಖ್ಯಮಂತ್ರಿ ಆದ್ರೆ ಈ ದೇವಸ್ಥಾನಕ್ಕೆ ಜಾಗ ಕೊಡಿಸುವುದಾಗಿ ಮಾತು ಕೊಟ್ಟಿದ್ದೆ. ಮೈಸೂರಿನಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದ ದಾಖಲೆ ತೆಗೆಸಿ ನೋಡಿ, ಮಹಾರಾಣಿ ಅವರ ಬಳಿ ಖರೀದಿ ಮಾಡಿ ಗಿಫ್ಟ್ ಆಗಿ ಕೊಟ್ಟಿದ್ದೇನೆ. ದಾನ ಪತ್ರದ ದಾಖಲೆ ತೆಗೆಸಿ ನೋಡಿ.

ನನಗೆ ಯಾವುದೇ ಪ್ರಚಾರ ಮಾಡುವ ಉದ್ದೇಶ ಇಲ್ಲ. ಯಾವುದೋ ಸಂದರ್ಭದಲ್ಲಿ ಜನರಿಗೆ ಮಾತು ಕೊಟ್ಟಿರುತ್ತೇವೆ. ಸೇವೆ ಮಾಡುವುದು ನಮ್ಮ ಕರ್ತವ್ಯ ಅದನ್ನು ಮಾಡಿದ್ದೇನೆ.

ಹಾರೋಬೆಲೆಯಲ್ಲಿ ಕನ್ನಡಕ್ಕಾಗಿ ರಾಜ್ಯಕ್ಕಾಗಿ ಶ್ರಮಿಸಿದ 36 ಪಾದ್ರಿಗಳಿದ್ದಾರೆ. ಅದೊಂದೇ ಗ್ರಾಮದಿಂದ ನೂರಾರು ಜನ ಸಿಸ್ಟರ್ ಗಳನ್ನು ಸಮಾಜಕ್ಕೆ ನೀಡಿಲಾಗಿದೆ. ಅನೇಕ ಸಂದರ್ಭಗಳಲ್ಲಿ ಅವರೊಂದಿಗೆ ಕೂಡಿ ಹೋರಾಟ ಮಾಡಿದ್ದೇನೆ.

ಈ ಪವಿತ್ರ ಸ್ಥಳದಲ್ಲೇ ನಾನು ಸೂರ್ಯ ರೈತ ಕಾರ್ಯಕ್ರಮ ಆರಂಭಿಸಿದೆ. ನಂತರ ಆ ಕಾರ್ಯಕ್ರಮ ಯಶಸ್ವಿಯಾಗಿ ರಾಷ್ಟ್ರಮಟ್ಟದಲ್ಲಿ ಈ ಕಾರ್ಯಕ್ರಮ ಜಾರಿ ಮಾಡಲು ಮುಂದಾದರು.

ನಾನು ಎರಡು ವರ್ಷಗಳ ಹಿಂದೆ ಮಾತು ನೀಡಿದ್ದೆ, ಜೈಲಲ್ಲಿ ಇದ್ದ ಕಾರಣ ಈ ಹಿಂದೆ ನಾನು ಸರ್ಕಾರಕ್ಕೆ ಹಣ ಕಟ್ಟಿರಲಿಲ್ಲ. ಬೇರೆಯವರ ಕೈಯಲ್ಲಿ ಹಣ ಕಟ್ಟಿಸಲು ಇಷ್ಟ ಇರಲಿಲ್ಲ. ಈಗ ನಾನು ಹಣ ಕಟ್ಟಿ ಹಕ್ಕುಪತ್ರ ನೀಡಿದ್ದೇನೆ.

ಅನೇಕ ಭಕ್ತಾದಿಗಳು ಒಂದೊಂದು ಕಲ್ಲಿಗೆ ಇಷ್ಟು ಅಂತಾ ದಾನ ಮಾಡುತ್ತಿದ್ದಾರೆ. ಈಗ ಅನೇಕ ಮೂರ್ತಿಗಳಿವೆ. ಆದರೆ ಕಲ್ಲಿನ ಪ್ರತಿಮೆ ಇಲ್ಲ. ಈ ಜಾಗದ ವಿಚಾರದಲ್ಲಿ ಯಾವ ಗೊಂದಲ ಇಲ್ಲ. ಗೊಂದಲ ಆಗಬಾರದು ಅಂತಾನೆ ಎರಡು ವರ್ಷಗಳ ಹಿಂದೆ ಮುಂದಾಗಿದನ್ನು ತಡೆದು, ಎಲ್ಲ ದಾಖಲೆ ಸರಿ ಆದಮೇಲೆ ಶಂಕುಸ್ಥಾಪನೆ ಮಾಡಲಾಗಿದೆ. ಬೆಂಗಳೂರಲ್ಲಿ ಅವರು ಶಿಕ್ಷಣ ಸಂಸ್ಥೆ, ವಾಣಿಜ್ಯ ಕಟ್ಟಡಗಳಿಗೆ ಜಮೀನು ನೀಡಿರುವುದು ಪಟ್ಟಿ ಕೊಡಲೇ?

ಅನಂತಕುಮಾರ್ ಹೆಗಡೆಗೆ ಕೆಲಸ ಇಲ್ಲ

ಅನಂತಕುಮಾರ ಹೆಗಡೆ ಈಗ ಕೆಲಸ ಇಲ್ಲದೇ ಕೂತಿದ್ದಾರೆ. ಅವರು ನನಗೆ ಆತ್ಮೀಯರು. ಅವರಿಗೆ ಈಗ ಕೆಲಸ ಬೇಕಾಗಿದೆ. ದೇಶದಲ್ಲಿ ಬದಲಾವಣೆ ಮಾಡಬೇಕು ಅಂದ್ರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಸ್ತಕ ಸುಡಬೇಕು ಅಂತಾ ಕಾಯುತ್ತಿದ್ದಾರೆ. ಅದಕ್ಕೆ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನನ್ನನ್ನು ನೆನೆಸಿಕೊಳ್ಳುತ್ತಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ, ಒಳ್ಳೆಯದಾಗಲಿ.

Leave a Reply