ಪೇಜಾವರ ಶ್ರೀಗಳ ಆರೋಗ್ಯ ಗಂಭೀರ, ಉಡುಪಿಯಲ್ಲೇ ಸಿಎಂ ಮೊಕ್ಕಾಂ

ಡಿಜಿಟಲ್ ಕನ್ನಡ ಟೀಮ್:

ಉಡುಪಿಯ ಅಷ್ಟಮಠಗಳ ಪೈಕಿ ಹಿರಿಯ ಶ್ರೀಗಳಾಗಿರುವ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಆರೋಗ್ಯ ಸ್ಥಿತಿ‌ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಶ್ರೀಗಳಿಗೆ ಉತ್ಕೃಷ್ಟವಾದ ಚಿಕಿತ್ಸೆ ನೀಡಲಾಗ್ತಿದ್ದು, ಸಿಎಂ ಯಡಿಯೂರಪ್ಪ ಕೂಡ ತಮ್ಮೆಲ್ಲಾ ಕಾರ್ಯಕಲಾಪವನ್ನು ಬದಿಗೊತ್ತಿ ಕೆಎಂಸಿ ಆಸ್ಪತ್ರೆಗೆ ಆಗಮಿಸಿದ್ದಾರೆ.

ಪೇಜಾವರ ಶ್ರೀಗಳನ್ನು ನೋಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ. ಸಿಎಂ ಯಡಿಯೂರಪ್ಪ ಅವರಿಗೆ ಚಿಕ್ಕಮಗಳೂರು, ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕೂಡ ಸಾಥ್ ಕೊಟ್ಟಿದ್ದಾರೆ.

ಪೇಜಾವರ ಶ್ರೀ ಆರೋಗ್ಯ ಕ್ಷೀಣವಾಗ್ತಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಸೇರಿದಂತೆ ಪ್ರಮುಖರ ಜೊತೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸುತ್ತಿದ್ದಾರೆ. ಪೇಜಾವರ ಶ್ರೀ ಆರೋಗ್ಯ ಕ್ಷೀಣವಾಗುತ್ತಿದೆ ಎಂದು
ಕೆಎಂಸಿ ವೈದ್ಯರು ತಿಳಿಸಿದ್ದಾರೆ. ಸಿಎಂ ನಡೆಸುತ್ತಿರುವ ಪ್ರಮುಖ ಚರ್ಚೆಯಲ್ಲಿ ಕೆಎಂಸಿಯ 10 ಮಂದಿ ವೈದ್ಯರ ತಂಡ, ಮಣಿಪಾಲ ವಿವಿ ಸಹ ಕುಲಾಧಿಪತಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದು, ಸಭೆಯಲ್ಲಿ ಸಿಎಂ ಎಲ್ಲರ ಅಭಿಪ್ರಾಯ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸಭೆ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಪೇಜಾವರ ಶ್ರೀಗಳ ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣವಾಗ್ತಿದ್ದು, ಕೆಎಂಸಿ ವೈದ್ಯರು ಪ್ರಯತ್ನ ಮುಂದುವರಿಸಿದ್ದಾರೆ. ಎಲ್ಲಾ ಭಗವಂತನ ಮೇಲೆ ಬಿಟ್ಟಿದ್ದೇವೆ. ಆರೋಗ್ಯದಲ್ಲಿ ಸುಧಾರಣೆ ಕಾಣಿಸುತ್ತಿಲ್ಲ. ನಾನು ಇವತ್ತು ಇಲ್ಲೇ ಇರುತ್ತೇನೆ. ನಾಳೆಯೂ ಇಲ್ಲಿಯೇ ಇರುತ್ತೇನೆ ಎಂದಿದ್ದಾರೆ.

ಯಾದಗಿರಿಯಲ್ಲಿ ಪೇಜಾವರ ಶ್ರೀಗಳು ಶೀಘ್ರವೇ ಗುಣಮುಖರಾಗಲೆಂದು ವಿಶೇಷ ಪೂಜೆ ನಡೆಸಲಾಗ್ತಿದೆ. ಕಣ್ವ ಮಠದ ವಿದ್ಯಾಕಣ್ವ ವಿರಾಜ ತೀರ್ಥರು ಪೂಜೆ ನೆರವೇರಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಹುಣಸಿಹೊಳೆ ಮಠದಲ್ಲಿ ಪೂಜೆ ನಡೆಯುತ್ತಿದ್ದು, ಪೇಜಾವರ ಶ್ರೀಗಳ ಶಿಷ್ಯ ಕಣ್ವ ಶ್ರೀಗಳು ಧನ್ವಂತರಿ ಪೂಜೆ ಕೈಗೊಂಡಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲೆಂದು ಕೃಷ್ಣ ಪೂಜೆ ಹಾಗೂ ಧನ್ವಂತರಿ ಪಾರಾಯಣ ಜೊತೆಗೆ ವಿಶೇಷ ಪೂಜೆ ಮಾಡ್ತಿದ್ದಾರೆ. ಕಣ್ವಮಠದ ಭಕ್ತರಿಗೂ ಪೂಜೆ, ಪ್ರಾರ್ಥನೆ ಮಾಡುವಂತೆ ಸಂದೇಶ ಕೊಟ್ಟಿದ್ದಾರೆ.

Leave a Reply