ಸಿಎಎ ಕುರಿತು ವಿವರಿಸಲು ಬಂದ ಬಿಜೆಪಿ ಮುಸ್ಲಿಂ ನಾಯಕನ ಮೇಲೆ ಹಲ್ಲೆ! ಇದೆಂತಾ ಸಹಿಷ್ಣುತೆ ಸ್ವಾಮಿ?

ಡಿಜಿಟಲ್ ಕನ್ನಡ ಟೀಮ್:

ಇತ್ತೀಚೆಗೆ ತಿದ್ದುಪಡಿಯಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಮಾಹಿತಿ ನೀಡಲು ಬಂದ ಬಿಜೆಪಿ ನಾಯನ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಆಮೊರ್ಹದ ಲಕಡಾ ಮೊಹಲ್ಲಾದಲ್ಲಿ ನಡೆದಿದೆ.

ಶುಕ್ರವಾರ ಈ ಘಟನೆ ನಡೆದಿದ್ದು, ಬಿಜೆಪಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮುರ್ತಾಜಾ ಖಾಜ್ಮಿ ಅವರು ಸಿಎಎ ಕುರಿತು ಮಾಹಿತಿ ನೀಡಲು ಬಂದಾಗ ಅವರ ಮೇಲೆ ದಾಳಿ ಮಾಡಲಾಗಿದೆ.

ಸಿಎಎಯಿಂದಾಗಿ ದೇಶದ ಮುಸಲ್ಮಾನರಿಗೆ ಅಪಾಯ ಎಂಬ ಸಂದೇಶ ಹರಡಿರುವುದರಿಂದ ಬಿಜೆಪಿ ಜನ ಸಾಮಾನ್ಯರನ್ನು ತಲುಪಿ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಿತ್ತು. ಅದರ ಭಾಗವಾಗಿ ಮೂರ್ತಜಾ ಅವರು ಜನರಲ್ಲಿ ಕಾಯ್ದೆ ಕುರಿತ ಗೊಂದಲ ಬಗೆಹರಿಸಲು ಮಾಹಿತಿ ನೀಡಲು ತೆರಳಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಿಎಎ ಹಾಗೂ ಎನ್ ಸಿಆರ್ ಭಾರತದ ಮುಸಲ್ಮಾನರ ಹಕ್ಕು ಹಾಗೂ ಪೌರತ್ವ ಕಸಿದುಕೊಳ್ಳುವುದಿಲ್ಲ. ಹೀಗಾಗಿ ನೀವು ಪ್ರತಿಭಟನೆಗಳಿಂದ ಹಿಂದೆ ಸರಿಯಬೇಕು’ ಎಂದು ವಿವರಿಸುತ್ತಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ಕುರಿತು ಮುರ್ತಾಜಾ ಹೇಳಿದ್ದಿಷ್ಟು…

ಲಕಡಾ ಮೊಹಲ್ಲಾದಲ್ಲಿನ ಅಂಗಡಿಗಳಿಗೆ ತೆರಳಿ ಅಲ್ಲಿನ ಜನರ ಬಳಿ ಸಿಎಎ ಹಾಗೂ ಎನ್ಸಿಆರ್ ಬಗ್ಗೆ ಮಾಹಿತಿ ನೀಡುತ್ತಿದ್ದೆ. ಆದ್ರೆ ಅಲ್ಲಿನ ಜನರು ನನ್ನ ಮೇಲೆ ದಾಳಿ ನಡೆಸಿದರು. ತಕ್ಷಣವೇ ನಾನು ಅಲ್ಲಿಂದ ಪಾರಾಗಿ ಬಂದು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ ಎಂದರು.

ವರದಿಗಳ ಪ್ರಕಾರ ಪೊಲೀಸರು ಆರೋಪಿಯನ್ನು ಶುಕ್ರವಾರ ಸಂಜೆಯೇ ಬಂಧಿಸಿದ್ದಾರೆ.

ದೇಶದಲ್ಲಿ ಬಿಜೆಪಿ ವಿರುದ್ಧ ಗುಂಪು ಥಳಿತ ಹಾಗೂ ಅಸಹಿಷ್ಣುತೆ ವಿಚಾರವಾಗಿ ಟೀಕೆಗಳು ಮಾಡುತ್ತಿರುವಾಗ ಬಿಜೆಪಿಯ ಮುಸ್ಲಿಂ ನಾಯಕರ ಮೇಲಿನ ಈ ದಾಳಿ ಸಹಿಷ್ಣುತೆಯ ಬಗ್ಗೆ ಭಾಷಣ ಮಾಡುವವರು ಏನು ಹೇಳುತ್ತಾರೆ ಎಂಬ ಪ್ರಶ್ನೆ ಮೂಡಿಸಿದೆ.

Leave a Reply