ಡಿ.ಕೆ ಶಿವಕುಮಾರ್ ವಿರುದ್ಧ ಮುಂದುವರೆದ ಬಿಜೆಪಿ ನಾಯಕರ ದ್ವೇಷದ ರಾಜಕಾರಣ

ಡಿಜಿಟಲ್ ಕನ್ನಡ ಟೀಮ್:

ಯೇಸು ಪ್ರತಿಮೆ ಜಾಗದ ವಿಚಾರವಾಗಿ ವರದಿ ಕೇಳಿದ್ದ ರಾಮನಗರ ಜಿಲ್ಲಾಡಳಿತ ಈಗ ವರದಿ ನೀಡುವ ಮುನ್ನವೇ ತಹಶೀಲ್ದಾರ ಆನಂದಯ್ಯ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಯೇಸು ಪ್ರತಿಮೆ ವಿಚಾರವನ್ನು ದೊಡ್ಡ ವಿವಾದ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ನಾಯಕರಿಗೆ ಸೂಚನೆ ಕೊಡುತ್ತಲೇ ಮತ್ತೊಂದು ಕಡೆಯಿಂದ ತಹಶೀಲ್ದಾರ್ ಅವರನ್ನು ವರ್ಗಾವಣೆ ಮಾಡಿದೆ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ತಹಶೀಲ್ದಾರ್ ಆಗಿದ್ದ ವರ್ಷಾ ಎಂಬುವವರಿಗೆ ಕನಕಪುರ ಜವಾಬ್ದಾರಿ ನೀಡಿ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್.ಉಮಾದೇವಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಆನಂದಯ್ಯ ಅವರನ್ನು ಯಾವ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಕೂಡ ಸರ್ಕಾರ ಆದೇಶದಲ್ಲಿ ತಿಳಿಸಿಲ್ಲ. ಇದು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆಯೇ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.

ಕನಕಪುರ ಹಾಗೂ ರಾಮನಗರದಲ್ಲಿ ಡಿಕೆ ಶಿವಕುಮಾರ್ ಅವರ ಹಿಡಿತ ತಗ್ಗಿಸಲು ಬಿಜೆಪಿ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ವಾಪಸ್ ಪಡೆಯುವ ಮೂಲಕ ಆರಂಭವಾದ ಬಿಜೆಪಿ ದ್ವೇಷದ ರಾಜಕಾರಣ ನಿರಂತರವಾಗಿ ಮುಂದುವರಿಯುತ್ತಿದೆ.

ವೈದ್ಯಕೀಯ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ನೀಡಿದ ಸರ್ಕಾರ, ನಂತರ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿತು. ಅದಾದ ನಂತರ ಯೇಸು ಪ್ರತಿಮೆ ಕಾಮಗಾರಿ ಉದ್ಘಾಟಿಸುತ್ತಿದ್ದಂತೆ ಡಿಕೆ ಶಿವಕುಮಾರ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಬಿಜೆಪಿ ನಾಯಕರು ಯೇಸು ಪ್ರತಿಮೆಗೆ ಅವಕಾಶ ನೀಡುವುದಿಲ್ಲ ಅಂತಾ ಸವಾಲು ಹಾಕಿದರು. ಬಿಜೆಪಿ ನಾಯಕರ ಸವಾಲಿಗೆ ಸಮಾಧಾನವಾಗಿಯೇ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನನ್ನ ಕ್ಷೇತ್ರದಲ್ಲಿ ಎಲ್ಲ ವರ್ಗ, ಜಾತಿ, ಧರ್ಮದ ಜನರಿದ್ದಾರೆ. ಎರಡು ವರ್ಷಗಳ ಹಿಂದೆ ನೀಡಿದ್ದ ಮಾತನ್ನು ಈಗ ಪೂರ್ಣಗೊಳಿಸಿದ್ದೇನೆ. ಈ ವಿಚಾರದಲ್ಲಿ ರಾಜಕೀಯ ಬೇಡ ಎಂದರು. ಇದು ಸಹಜವಾಗಿ ಬಿಜೆಪಿ ನಾಯಕರಿಗೆ ಹಿನ್ನಡೆಯಾಗಿತ್ತು. ಹೀಗಾಗಿ ಬಿಜೆಪಿ ನಾಯಕರು ತಮ್ಮ ರಾಗ ಬದಲಿಸಿದ್ದು, ಯೇಸು ಪ್ರತಿಮೆ ನಿರ್ಮಾಣಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಜಾಗದ ಕುರಿತು ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ವರ್ಗಾವಣೆ ಅಸ್ತ್ರ ಪ್ರಯೋಗಿಸಿದೆ. ಇದು ಬಿಜೆಪಿ ಸರ್ಕಾರ ಡಿಕೆ ಶಿವಕುಮಾರ್ ವಿರುದ್ಧ ರಾಜಕೀಯ ದ್ವೇಷ ಮಾಡುತ್ತಿದೆಯೇ ಎಂಬ ಅನುಮಾನ ಮೂಡಿದೆ.

Leave a Reply