ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ದೆಹಲಿ ಚುನಾವಣೆ ಅಖಾಡಕ್ಕಿಳಿದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್:

ಮುಂಬರುವ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಆಗಮಿಸುತ್ತಿದ್ದು, ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬಿಜೆಪಿ ಚುನಾವಣಾ ಅಖಾಡಕ್ಕೆ ಜಿಗಿದಿದೆ.

ದೆಹಲಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್, ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿ ಚುನಾವಣಾ ವಾಕ್ಸಮರಕ್ಕೆ ನಾಂದಿ ಹಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಜಾವಡೆಕರ್ ಹೇಳಿದ್ದಿಷ್ಟು…

‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಯಾವುದೇ ಜನರಿಗೆ ತೊಂದರೆ ಆಗುವುದಿಲ್ಲ. ಆದರೆ ಈ ವಿಚಾರದಲ್ಲಿ ಸುಳ್ಳು ಮಾಹಿತಿ ಹರಡಿ ಶಾಂತಿ ಕದಡುವ ಪ್ರಯತ್ನ ಕಾಂಗ್ರೆಸ್ ಹಾಗೂ ಎಎಪಿ ಕಡೆಯಿಂದ ನಡೆಯುತ್ತಿದೆ.

ದೆಹಲಿ ಶಾಂತಿಯುತ ಪ್ರದೇಶ. ಆದರೆ ಕೆಲವು ವಾರಗಳಿಂದ ದೆಹಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. ಈ ಎಲ್ಲ ಗೊಂದಲ ಹಾಗೂ ಹಾನಿಗಳಿಗೆ ಮೂಲ ಕಾರಣ ಕಾಂಗ್ರೆಸ್ ಹಾಗೂ ಎಎಪಿ.

ದೇಶದ ಜನರಿಗೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿರುವ ಈ ಪಕ್ಷಗಳು ಕ್ಷಮೆ ಕೊರಬೇಕು. ಬಿಜೆಪಿ ಸದಾ ಸಕಾರಾತ್ಮಕ ಹಾಗೂ ಅಭಿವೃದ್ಧಿ ಕಾರ್ಯಗಳ ಪ್ರಚಾರಕ್ಕೆ ಒತ್ತು ನೀಡುತ್ತದೆ. ಆದರೆ ವಿರೋಧ ಪಕ್ಷಗಳು ತಮ್ಮ ವೈಫಲ್ಯಗಳನ್ನು ಮುಚ್ಚಲು ಸಮಜಾಯಿಷಿ ನೀಡುತ್ತವೆ.’

ಕಳೆದ ಒಂದು ವರ್ಷದಲ್ಲಿ ಬಿಜೆಪಿ ಐದು ರಾಜ್ಯಗಳಲ್ಲಿ ತನ್ನ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ದೆಹಲಿ ಚುನಾವಣೆ ಮಹತ್ವ ಪಡೆದಿದೆ. ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಕ್ಲೀನ್ ಸ್ವೀಪ್ ಜಯ ಸಾಧಿಸಿ ಮೋದಿ ಅಲೆಗೆ ಸೆಡ್ಡು ಹೊಡೆದಿತ್ತು. ಹೀಗಾಗಿ ಈ ಬಾರಿ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆ ಕಣವಾಗಿದ್ದು, ಎಲ್ಲರಿಗಿಂತ ಮುಂಚಿತವಾಗಿ ದೆಹಲಿ ಚುನಾವಣಾ ಅಖಾಡಕ್ಕೆ ಇಳಿದಿದೆ.

Leave a Reply