ಸಿಎಂ ಗುಡುಗಿಗೆ ಪಿಎಂ ಮುನಿಸು; ಮೋದಿ ಭೇಟಿ ಅವಕಾಶ ಸಿಗದೆ ಯಡಿಯೂರಪ್ಪ ವಾಪಸ್ಸು!

ಡಿಜಿಟಲ್ ಕನ್ನಡ ಟೀಮ್:

ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇದ್ದರೂ ಬಿಜೆಪಿ ಪಕ್ಷದೊಳಗೆ ಹೊಂದಾಣಿಕೆ ಇಲ್ವಾ..? ಅನ್ನೋ ಪ್ರಶ್ನೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಇಂದು ಪ್ರಧಾನಿ ನರೇಂದ್ರ ಮೋದಿಗೆ ಮನವಿ ರೂಪದಲ್ಲಿ ಸಿಎಂ ಯಡಿಯೂರಪ್ಪ ಸವಾಲು ಹಾಕಿರೋದು ಈಗ ಈ ಪ್ರಶ್ನೆ ಇನ್ನಷ್ಟು ಗಟ್ಟಿಯಾಗುವಂತೆ ಮಾಡಿದೆ.

ಹೌದು, ತುಮಕೂರಿನಲ್ಲಿ ನಡೆದ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್ ವೈ ಮನವಿ ರೂಪದಲ್ಲಿ ಪ್ರಧಾನಿಗಳ ಮುಂದೆ ಸವಾಲಿನ ರಾಶಿ ಸುರಿದರು. ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಪಿಎಂಗೆ ಹಾಕಿದ ಸವಾಲುಗಳು ಹೀಗಿವೆ…

  • ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು. ನೀರಾವರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಆಗ ಮಾತ್ರ ಆಹಾರ ಉತ್ಪಾದನೆ ಹೆಚ್ಚಳ ಸಾಧ್ಯವಾಗಲಿದೆ.
  • ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ರಾಜ್ಯಕ್ಕೆ 50 ಸಾವಿರ ಕೋಟಿ ವಿಶೇಷ ಅನುದಾನ ಕೊಡಬೇಕು.
  • ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದೆ. ಸರಿಸುಮಾರು 30 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೂ ತಂದಿದ್ದೇನೆ. ಆದರೆ ಈವರೆಗೆ ಹೆಚ್ಚು ಅನುದಾನ ಬಂದಿಲ್ಲ.

ಉತ್ತರ ಕರ್ನಾಟಕದಲ್ಲಿ ಜಲಪ್ರಳಯ ಉಂಟಾದರೂ ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚಿರಲಿಲ್ಲ. ಆ ವೇಳೆ ಕೇಂದ್ರ ಸರ್ಕಾರ ಪರಿಹಾರವನ್ನೂ ಕೊಟ್ಟಿರಲಿಲ್ಲ. ಜನಾಕ್ರೋಶ ಹೆಚ್ಚಾದಂತೆ, ಬಿಹಾರದ ಪರಿಹಾರ ಬಿಡುಗಡೆ ವೇಳೆ ರಾಜ್ಯಕ್ಕೂ 1200 ಕೋಟಿ ರೂಪಾಯಿ ಬಿಡುಗಡೆ ಆಗಿತ್ತು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನ ಸಮರ್ಥನೆ ಮಾಡಿಕೊಂಡಿದ್ದರು. ಆದ್ರೆ ಇವತ್ತು ನರೇಂದ್ರ ಮೋದಿ ಮೌನದ ವಿರುದ್ಧ ಸಿಎಂ ಯಡಿಯೂರಪ್ಪ ಸಿಡಿದೆದ್ದರು.

ಮನವಿ ರೂಪದ ವಾಗ್ದಾಳಿ ಅರ್ಥ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ ಬಿಎಸ್​ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿದ್ದಾರೆ.

ತುಮಕೂರು ಹಾಗು ಬೆಂಗಳೂರು ಸಭೆ ಬಳಿಕ ರಾಜಭವನಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ರಾಜ್ಯದ ಸಿಎಂ ಹಾಗು ಸಚಿವರ ನಿಯೋಗವೊಂದು ತೆರಳಿತ್ತು. ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಸಚಿವ ಜೆ.ಸಿ.ಮಾಧುಸ್ವಾಮಿ ತೆರಳಿದ್ರು. ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ನಿರ್ಧರಿಸಿದ್ದರು.

ಆದ್ರೆ ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದ ನಿಯೋಗ ಭೇಟಿಗೆ ಪ್ರಧಾನಿ ನರೇಂದ್ರ ಮೋದಿ ನಿರಾಕರಿಸಿದ್ರು. 20 ನಿಮಿಷಗಳ ಕಾಲ ಪ್ರಧಾನಿಗಾಗಿ ಕಾಯುತ್ತಿದ್ದ ಸಿಎಂ ನಿಯೋಗ, ಎಸ್​ಪಿಜಿ ಅಧಿಕಾರಿಗಳು ಭೇಟಿಯಾಗಲು ಸಾಧ್ಯವಿಲ್ಲ ಎಂದ ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾದ್ರು. ಮಹದಾಯಿ ವಿಚಾರ, ಮೇಕೆದಾಟು ಗೊಂದಲ, ಕಾವೇರಿ ನದಿ ನೀರು ಹಂಚಿಕೆ ವಿಚಾರ, ಪ್ರವಾಹದಿಂದ ಹಾನಿಗೆ ಅನುದಾನ ಕೋರಿಕೆ, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಸೇರಿದಂತೆ ಹಲವು ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಿಕೊಂಡಿದ್ದ ಯಡಿಯೂರಪ್ಪ ಮೇಲೆ ಮೋದಿ ಮುನಿಸು ಕಾಣಿಸಿತು. ಇಂದು ಭೇಟಿಗೆ ಅವಕಾಶ ಸಿಕ್ಕಿಲ್ಲ, ನಾಳೆ ಬೆಳಗ್ಗೆ ಮತ್ತೆ ಪ್ರಯತ್ನ ಮಾಡುವ ನಿರ್ಧಾರ ಮಾಡಲಾಗಿದೆ. ನಾಳೆಯಾದ್ರು ಸಿಕ್ತಾರೆ ಇಲ್ಲ ದೆಹಲಿಗೆ ದೌಡಾಯಿಸ್ತಾರಾ ಅನ್ನೋದನ್ನು ಕಾದು ನೋಡ್ಬೇಕು.

ಈ ಎಲ್ಲಾ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸ್ತಿದ್ದಾರಾ ಅನ್ನೋ ಆಕ್ರೋಶ ಬಿಜೆಪಿಯಲ್ಲೇ ಭುಗಿಲೇಳುವ ಮುನ್ಸೂಚನೆ ಕಾಣಿಸಿದೆ.

Leave a Reply