ಮೋದಿ ರಾಜ್ಯ ಪ್ರವಾಸ! ಯಾವಾಗ ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ?

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದು ಈ ಎರಡು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅವರ ಕಾರ್ಯಕ್ರಮಗಳ ವಿವರ ಹೀಗಿವೆ…

ಪ್ರಧಾನಿ ನರೇಂದ್ರ ಮೋದಿ ಕಲ್ಪತರು ನಾಡು ತುಮಕೂರಿಗೆ ಬರುತ್ತಿದ್ದಾರೆ. ಇಂದು ಮಧ್ಯಾಹ್ನ 2.15 ಕ್ಕೆ ತುಮಕೂರಿಗೆ ಬಂದಿಳಿಯಲಿರುವ ನರೇಂದ್ರ ಮೋದಿ, ವಿವಿ ಹೆಲಿಪ್ಯಾಡ್‌ನಿಂದ ನೇರವಾಗಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಲಿಂಗೈಕ್ಯರಾಗಿರುವ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆಯಲಿದ್ದಾರೆ.

ಬಳಿಕ ಮೋದಿ‌ ಭೇಟಿಯ ನೆನಪಿಗಾಗಿ ಮಠದ ಆವರಣದಲ್ಲಿ ಬಿಲ್ವಪತ್ರೆ ಗಿಡ ನೆಡಲಿದ್ದಾರೆ. ನಂತರ ಶ್ರೀಗಳ ವಸ್ತು ಸಂಗ್ರಹಾಲಯಕ್ಕೆ ಅಡಿಗಲ್ಲು ಹಾಕಿದ ನಂತ್ರ ಮಠದ ಮಕ್ಕಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ನಗರದ ಜೂನಿಯರ್ ಕಾಲೇಜು ಮೈದಾನಕ್ಕೆ ಆಗಮಿಸಲಿರುವ ಮೋದಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಸಿದ್ಧಗಂಗಾ ಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಉಪಹಾರ ಸೇವಿಸಲ್ಲ. ಆದರೂ ಉಪಹಾರಕ್ಕೆ ಸಿದ್ದತೆಗೆ ಸೂಚನೆ ಕೊಡಲಾಗಿದೆ. ನಲವತ್ತು ನಿಮಿಷಗಳ ಕಾಲ ಮಠದಲ್ಲಿರುವ ಮೋದಿಯವರಿಗೆ ಮಠದ ಕಡೆಯಿಂದ ಸಿದ್ದಗಂಗಾ ಶ್ರೀಗಳ ಬೆಳ್ಳಿ ಪ್ರತಿಮೆ ಕೊಡುಗೆ‌ಯಾಗಿ ನೀಡಲಾಗುವುದು.

ಮೋದಿ ಆಗಮನ ಹಿನ್ನೆಲೆಯಲ್ಲಿ ತುಮಕೂರು ನಗರ ಸೇರಿದಂತೆ ಸಿದ್ದಗಂಗಾ ಮಠದ ಸುತ್ತ ಮುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದ್ದು, ಸುಮಾರು 2,500 ಪೊಲೀಸರ ನಿಯೋಜನೆಯಾಗಿದೆ.

ತುಮಕೂರು ವಿವಿ ಆವರಣದಲ್ಲಿರುವ ಹೆಲಿಪ್ಯಾಡ್‌ನಿಂದ ಬಿ.ಎಚ್ ರಸ್ತೆ ಮೂಲಕ ಸಿದ್ಧಗಂಗಾ ಮಠಕ್ಕೆ ತೆರಳಲಿರುವ ಮೋದಿ ಸುಮಾರು 5 ಕಿಲೋಮೀಟರ್ ದೂರವನ್ನು ರಸ್ತೆ ಮೂಲಕ ಕಾರಿನಲ್ಲಿ ಹೋಗಲಿದ್ದಾರೆ.

ಬಿ.ಎಚ್ ರಸ್ತೆ ಮೂಲಕ ಬಟವಾಡಿ, ಕ್ಯಾತಸಂದ್ರದ ಮೂಲಕ ಮಠಕ್ಕೆ ಆಗಮಿಸಲಿದ್ದು, ಬಿ.ಎಚ್ ರಸ್ತೆಯಲ್ಲಿ ಸಾರ್ವಜನಿಕರ ವಾಹನ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಧಾನಿ ಮೋದಿ ಸಂಚರಿಸುವ ಬಿ.ಎಚ್ ರಸ್ತೆ ಹಾಗೂ ಎಎಚ್ 48 ರಸ್ತೆಯ ಅಕ್ಕಪಕ್ಕದ ಅಂಗಡಿಗಳನ್ನೇ ತೆರವು ಮಾಡಲಾಗಿದೆ. ರಸ್ತೆ ಉದ್ದಕ್ಕೂ ಮರಗಳಿಂದ ಬ್ಯಾರಿಕೇಡ್ ರೀತಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇನ್ನು ಬಿ.ಎಚ್ ರಸ್ತೆ ಹಾಗೂ ಎಎಚ್ 48 ರಸ್ತೆಯ ಸಂಚಾರದಲ್ಲೂ ಮಾರ್ಗಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ವಾಹನಗಳು ತುಮಕೂರು ಹೊರವಲಯದ ಬೈಪಾಸ್ ಮೂಲಕ ಸಂಚಾರಿಸಬೇಕು.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುವ ವಾಹನಗಳ ಸಂಚಾರ ಮಾರ್ಗ ಕೂಡ ಬದಲು ಮಾಡಲಾಗಿದ್ದು, ದೇವರಾಯದುರ್ಗದ ಮೂಲಕ ದಾಬಸ್ ಪೇಟೆ ತಲುಪಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲು ಸೂಚನೆ ಕೊಡಲಾಗಿದೆ. ಮೋದಿ ಸಾಗುವ ಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸ್ ಭದ್ರತೆ, ಎಸ್.ಜಿ.ಪಿ ಕಣ್ಗಾವಲು ಮಾಡಲಾಗಿದೆ.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕಾಗಿ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸುಮಾರು 80 ಸಾವಿರದಿಂದ 1 ಲಕ್ಷ ರೈತರು ಪಾಲ್ಗೊಳ್ಳಲಿರುವ ಸಮಾವೇಶ ಇದಾಗಿದ್ದು, ಬಟನ್ ಒತ್ತುವುದರ ಮೂಲಕ ಏಕಕಾಲಕ್ಕೆ 6 ಕೋಟಿ ರೈತ ಕುಟುಂಬಗಳಿಗೆ ನೇರ ನಗದು ವರ್ಗಾವಣೆಯಾಗುತ್ತದೆ. ಅಲ್ಲದೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿವಿಧ ರಾಜ್ಯಗಳ 32 ರೈತರಿಗೆ ಪಿಎಂ ಕಿಸಾನ್” ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಇದರಲ್ಲಿ 16 ಜನ ರೈತ ಮಹಿಳೆಯರು ಹಾಗೂ 16 ಮಂದಿ ಪುರುಷ ರೈತರು ಇರುವುದು ವಿಶೇಷ.

ಇದೇ ಕಾರ್ಯಕ್ರನದಮದಲ್ಲಿ ಮೀನು ಸಾಕಾಣಿಕೆದಾರರಿಗೂ ಸೌಲಭ್ಯ ವಿತರಣೆ ಮಾಡಲಿದ್ದಾರೆ. ಕೇಂದ್ರ ಕೃಷಿ ರಾಜ್ಯ ಸಚಿವ ನರೇಂದ್ರ ಸಿಂಗ್ ತೋಮರ್, ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಯಡಿಯೂರಪ್ಪ, ಡಿಸಿಎಂ ಲಕ್ಷಣ ಸವದಿ, ಜೆ.ಸಿ.ಮಾಧುಸ್ವಾಮಿ, ರಾಜ್ಯ ಕೃಷಿ ಪುರುಷೋತ್ತಮ ರುಪಾಲ, ಕೈಲಾಶ್ ಚೌದ್ರಿ ಉಪಸ್ಥಿತರಿರಲಿದ್ದಾರೆ.

ತುಮಕೂರು ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ಹಂಚಿಕೆ ಮಾಡಲಾಗುತ್ತದೆ. ಪ್ರಗತಿಪರ ರೈತರಿಗೆ ಮೋದಿ ಕೈಯಿಂದ ಪ್ರಶಸ್ತಿ ಕೊಡಲಾಗುತ್ತದೆ.

ಕೃಷಿ ಸಮ್ಮಾನ್ ಯೋಜನೆಯ 4ನೇ ಕಂತಿನ ಹಣ ಪಾವತಿಗೆ ಚಾಲನೆ ನೀಡುವ ಈ ಕಾರ್ಯಕ್ರಮಕ್ಕೆ 4 ಕೋಟಿ ರೂಪಾಯಿ ವೆಚ್ಚ ಮಾಡಲಾಗ್ತಿದೆ. ಕಾರ್ಯಕ್ರಮದ ವೆಚ್ಚವನ್ನು ಕೇಂದ್ರ ಕೃಷಿ ಇಲಾಖೆಯೇ ಬರಿಸಲಿದೆ. ಸಮಾವೇಶದಲ್ಲಿ ರೈತರನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ ಭಾಷಣ ಕೇಳಲು, ರಾಜ್ಯದ ವಿವಿಧೆಡೆಯಿಂದ ಹಾಗೂ ಇತರೆ ರಾಜ್ಯಗಳಿಂದ ಸುಮಾರು 1.5 ಲಕ್ಷ ರೈತರು ಆಗಮಿಸುವ ನಿರೀಕ್ಷೆಯಿದೆ.

45 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದ್ದು, 10 ಅಡಿ ಎತ್ತರದ ವೇದಿಕೆ ಸಿದ್ದಮಾಡಲಾಗಿದೆ. ವೇದಿಕೆಯಲ್ಲಿ 12 ರಿಂದ 15 ಜನ ಗಣ್ಯರಿಗೆ ಮಾತ್ರ ಅವಕಾಶವಿದ್ದು, ವೇದಿಕೆ ಮುಂಭಾಗ ಮೂರು ಹಂತಗಳಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ. ಮೊದಲನೇ ಹಂತದಲ್ಲಿ ವಿವಿಐಪಿಗಳಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಸಂಸದರು, ಶಾಸಕರು ಸೇರಿದ್ದಂತೆ ಚುನಾಯಿತ ಪ್ರತಿನಿಧಿಗಳಿಗೆ ಆದ್ಯತೆ ನೀಡಲಾಗಿದೆ. ಎರಡನೇ ಹಂತದಲ್ಲಿ ವಿಐಪಿ ಆಸನ ವ್ಯವಸ್ಥೆ ಮಾಡಲಾಗಿದ್ದು, ಮಾಜಿ ಸಂಸದರು, ಹಾಲಿ ಸಂಸದರು, ಜಿ.ಪಂ. ಸದಸ್ಯರು ಸೇರಿದಂತೆ ರಾಜಕೀಯ ಮುಖಂಡರು ಹಾಗು ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು
ಕೊನೆಯ ಹಂತದಲ್ಲಿ ರೈತರಿಗೆ, ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ.

Leave a Reply