ಮುಸ್ಲಿಮರನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು ಎಂದ ಬಿಜೆಪಿ ಶಾಸಕ; ಇದೇನಾ ಮೋದಿಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್?

ಡಿಜಿಟಲ್ ಕನ್ನಡ ವಿಶೇಷ:

‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಿದ ಮುಸಲ್ಮಾನರನ್ನು ಶೂಟ್ ಮಾಡಿದ್ರೆ ಜನಸಂಖ್ಯೆಯಾದ್ರೂ ಕಡಿಮೆ ಆಗ್ತಿತ್ತು…’ ಇದು ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ತಮ್ಮ ನಾಲಿಗೆ ಹರಿಬಿಟ್ಟಿರುವ ರೀತಿ.

ಬಳ್ಳಾರಿಯಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಮಾತನಾಡಿರುವ ಶಾಸಕ ಸೋಮಶೇಖರ ರೆಡ್ಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

‘ಪೌರತ್ವ ಕಾಯ್ದೆಯನ್ನು ವಿರೋಧಿಸುವವರು ಜಾಸ್ತಿ ನಕ್ರಾ ಮಾಡಿದ್ರೆ ಸರಿ ಇರಲ್ಲ. ಕಾಂಗ್ರೆಸ್ ಪಕ್ಷದ ಬೇಕೂಫ್​ಗಳು ಹೇಳುವುದನ್ನು ಕೇಳಿ ನೀವು ಬೀದಿಗೆ ಇಳಿಯಬೇಡಿ. ನಾವು ಶೇ. 80ರಷ್ಟಿದ್ದೇವೆ. ನೀವು ಕೇವಲ ಶೇ. 17ರಷ್ಟಿದ್ದೀರಿ. ಹಿಂದುಗಳು ಖಡ್ಗ ಹಿಡಿದುಕೊಂಡು ಬಂದರೆ ನಿಮಗೇ ಕಷ್ಟವಾಗುತ್ತದೆ. ನಾವು ತಿರುಗಿ ಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗುತ್ತದೆ ಎಂಬ ಎಚ್ಚರವಿರಲಿ. ಇದು ನಮ್ಮ ದೇಶ ಎಂಬುದನ್ನು ಮರೆಯಬೇಡಿ. ನೀವು ನಮ್ಮ ದೇಶದಲ್ಲಿ ಇರಬೇಕಾದರೆ ನಮ್ಮ ಪದ್ಧತಿ ಪ್ರಕಾರ ಇರಬೇಕು. ನಮ್ಮ ಸಮಾಧಾನವನ್ನು ಪರೀಕ್ಷೆ ಮಾಡಿದರೆ ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ. ನಾವು ಉಫ್​ ಎಂದು ಊದಿದರೆ ನೀವೆಲ್ಲ ಹಾರಿ ಹೋಗುತ್ತೀರ. ಕಾಂಗ್ರೆಸ್ ಪುಡಾರಿಗಳಿಗೆ ಆಸೆ ಇದ್ದರೆ ನೀವು ಬೇರೆ ದೇಶಕ್ಕೆ ಹೋಗಿ. ನಾವಾಗೇ ನಿಮ್ಮನ್ನು ಬೇರೆ ದೇಶಕ್ಕೆ ಕಳುಹಿಸುವುದಿಲ್ಲ. ನಾವು ಅಣ್ಣ ತಮ್ಮಂದಿರ ಥರ ಇದ್ದೇವೆ. ನಮ್ಮ ವಿರುದ್ಧ ನೀವು ತಿರುಗಿ ಬಿದ್ದರೆ ನಿಮ್ಮನ್ನು ಶತ್ರುಗಳ ರೀತಿ ನೋಡಬೇಕಾಗುತ್ತದೆ. ನಮ್ಮ ಹೃದಯ ಕಿತ್ತರೂ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಕಾಣ್ತಾರೆ. ಮೋದಿ ಎರಡು ಬಾರಿ ಪ್ರಧಾನಿ ಆದರು ಅಂತ ಹೊಟ್ಟೆಕಿಚ್ಚಾ ನಿಮಗೆ? ನೀವು ನಮ್ಮ ದೇಶದಲ್ಲಿ ಇರಬೇಕು ಅಂದ್ರೆ ನಾವು ಹೇಳಿದ ಹಾಗೆ ಕೇಳಬೇಕು ಎಂದಿದ್ದಾರೆ.

ಮಂಗಳೂರಿನ ಗಲಭೆಗೆ ಯುಟಿ ಖಾದರ್ ಅವರ ಹೇಳಿಕೆಯೇ ಕಾರಣ ಎಂದು ಬೊಬ್ಬೆ ಹೊಡೆದ ಬಿಜೆಪಿ ನಾಯಕರು, ಈಗ ಸೋಮಶೇಖರ್ ರೆಡ್ಡಿ ಹೇಳಿಕೆಗೆ ಏನು ಹೇಳ್ತಾರೆ? ಮುಸಲ್ಮಾನರು ಅಲ್ಪಸಂಖ್ಯಾತರು, ಅವರು ನಾವು ಹೇಳಿದಂತೆ ಕೇಳಬೇಕು ಇಲ್ಲವಾದರೆ ಪಾಠ ಕಲಿಸಬೇಕು. ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳುವ ನಿಮ್ಮ ಮನೋಭಾವವೇ ನೀವು ಕೋಮುವಾದಿ ಎಂದು ಸಾಬೀತು ಪಡಿಸುತ್ತದೆ.

ಅಲ್ಲಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾ ಭಾಷಣ ಮಾಡುತ್ತಿದ್ದಾರೆ. ಆದರೆ ಮೋದಿ ಅವರ ಪಕ್ಷದ ನಾಯಕರೇ ಬೀದಿ ಬೀದಿಗಳಲ್ಲಿ ಮತೀಯ ದ್ವೇಷದ ಮಾತುಗಳನ್ನು ಆಡುತ್ತಾ ತಾವು ಕೋಮುವಾದಿಗಳು ಎಂದು ಖಚಿತಪಡಿಸುತ್ತಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟನೆ ವ್ಯಕ್ತವಾದ ಬಳಿಕ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಸಭೆ ನಡೆಸಿ ಈ ಕಾಯ್ದೆಯಿಂದ ಭಾರತೀಯ ಮುಸಲ್ಮಾನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಗೊಂದಲದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಮಾವೇಶ ಸಭೆಗಳನ್ನು ನಡೆಸಲು ನಿರ್ಧರಿಸಿದರು. ಆದರೆ ಜಾಗೃತಿ ಮೂಡಿಸಬೇಕಾದ ಸಭೆಯಲ್ಲಿ ಕಿಚ್ಚು ಹಚ್ಚುವ ಮಾತುಗಳನ್ನಾಡಿದರೆ ಸಮಸ್ಯೆ ಬಗೆಹರಿಯುವ ಬದಲು ಹೆಚ್ಚಾಗುತ್ತದೆ ಎಂಬ ಪರಿಜ್ಞಾನವೂ ಇಲ್ಲದಂತೆ ವರ್ತಿಸುತ್ತಿರುವುದು ದುರ್ದೈವದ ಸಂಗತಿ.

ಒಂದು ಧರ್ಮದ ವಿರುದ್ಧ ದ್ವೇಷ ಕಾರಲು ಬಿಜೆಪಿ ನಾಯಕರು ತೋರುವ ಧೈರ್ಯವನ್ನು ನಮ್ಮ ರಾಜ್ಯದ ಜನರು ಎದುರಿಸುತ್ತಿರುವ ಮಹದಾಯಿ, ಕೃಷ್ಣಾ ಸಮಸ್ಯೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವ ವಿಚಾರರದಲ್ಲಿ ತೋರಿದ್ದಾರೆ ಜನ ಅವರಿಗೆ ಮತ ಹಾಕಿದ್ದಕ್ಕೂ ಸಾರ್ಥಕ ಆಗುತ್ತಿತ್ತು.

Leave a Reply