ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಕೊಡುಗೆ ಗುಣಗಾನ ಮಾಡಿದ ಮೋದಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ಹೊಸ ಭಾರತದ ನಿರ್ಮಾಣಕ್ಕೆ ತಂತ್ರಜ್ಞಾನದ ಉನ್ನತೀಕರಣ, ಬಳಕೆ ಮತ್ತು ಸಂಶೋಧನೆ ಅಗತ್ಯ. ಈ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಬೆಂಗಳೂರು ಸೂಕ್ತ ಜಾಗ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರನ್ನು ಹಾದಿ ಹೊಗಳಿದ್ದಾರೆ.

ಇಂದು ಜಿಕೆವಿಕೆಯಲ್ಲಿ 107ನೇ ಭಾರತೀಯ ಸೈನ್ಸ್​ ಕಾಂಗ್ರೆಸ್​ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನದ ಮಹತ್ವವನ್ನು ಸಾರಿದರು. ಈ ವೇಳೆ ಅವರು ಹೇಳಿದ್ದಿಷ್ಟು…

‘2020ರ ವರ್ಷದಲ್ಲಿ ಭಾಗಿಯಾಗುತ್ತಿರುವ ಮೊದಲ ಸಮ್ಮೇಳನ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತು ಎಂಬುದಕ್ಕೆ ಹೆಮ್ಮೆಯಾಗುತ್ತಿದೆ. ಗಾರ್ಡನ್​ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು, ಸ್ಟಾರ್ಟಪ್​ ಸಿಟಿ ಕೂಡ ಹೌದು. ಪ್ರಪಂಚದ ವಿವಿಧ ದೇಶಗಳಿಂದ ಸಂಸ್ಥೆಗಳು, ವ್ಯಕ್ತಿಗಳು ಬಂದು ಇಲ್ಲಿ ಬಂಡವಾಳ ಹೂಡಿಕೆ ಮಾಡುತ್ತಾರೆ. ಒಂದರ್ಥದಲ್ಲಿ ಬಂಡವಾಳ ಹೂಡಿಕೆಗೆ ಬೆಂಗಳೂರು ಸ್ವರ್ಗವಿದ್ದಂತೆ.

ಹೊಸ ಭಾರತ ನಿರ್ಮಾಣಕ್ಕೆ ತಂತ್ರಜ್ಞಾನದ ಪಾತ್ರ ಅಪಾರ. ಸಾಮಾಜಿಕ, ಆರ್ಥಿಕ ಸ್ಥಿತಿಯ ಸುಧಾರಣೆ ಹಾಗೂ ಭಾರತವನ್ನು ಒಗ್ಗೂಡಿಸಲು ವಿಜ್ಞಾನದ ಹಾದಿ ಮುಖ್ಯವಾಗಿದೆ.

ಕಳೆದ 50 ವರ್ಷಗಳಲ್ಲಿ ವಿಜ್ಞಾನಿಗಳು ಅಪಾರ ಕೊಡುಗೆ ನೀಡಿದ್ದಾರೆ. ಯಾರು ಹೊಸ ಅನ್ವೇಷಣೆ ಮಾಡುತ್ತಾರೋ ಅವರಿಗೆ ಪೇಟೆಂಟ್​ ಸಿಗುತ್ತೆ. ಸರ್ಕಾರ ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಿ ತಂತ್ರಜ್ಞಾನ ನಿಲ್ಲುತ್ತದೆ. ತಂತ್ರಜ್ಞಾನದಿಂದಲೇ ಸರ್ಕಾರದ ಎಲ್ಲಾ ಯೋಜನೆಗಳೂ ಯಶಸ್ವಿಯಾಗಿ ಜನರನ್ನು ತಲುಪುತ್ತಿವೆ.

ಮಾಹಿತಿ ಮತ್ತು ತಂತ್ರಜ್ಞಾನ, ಕಡಿಮೆ ವೆಚ್ಚದಲ್ಲಿ ಡೇಟಾ ನೀಡಲಾಗುತ್ತಿದೆ. ಪರಿವರ್ತನೆ ಜೊತೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ತಂತ್ರಜ್ಞಾನ ಸಾಮಾನ್ಯ ಜನರು ಮತ್ತು ಸರ್ಕಾರದ ನಡುವಿನ ಸೇತುವೆಯಾಗಿದೆ. ಇದೇ ಕಾರಣದಿಂದ ಕಳೆದ 5 ವರ್ಷಗಳಲ್ಲಿ ಗ್ರಾಮೀಣ ಅಭಿವೃದ್ಧಿಯನ್ನ ಕಾಣುತ್ತಿದ್ದೀರಿ. ಸ್ವಚ್ಛ ಭಾರತ್​ನಿಂದ ಆಯುಷ್ಮಾನ್ ಭಾರತ್​​ ಯೋಜನೆವರೆಗೆ ಹಳ್ಳಿಹಳ್ಳಿಯನ್ನು ತಲುಪಲು ಸಾಧ್ಯವಾಗಿದ್ದು ಇದೇ ತಂತ್ರಜ್ಞಾನ. ಏಕಕಾಲದಲ್ಲಿ ದೇಶದ 6 ಕೋಟಿ ರೈತರಿಗೆ ಕೃಷಿ ಸಮ್ಮಾನ್​ ಹಣ ತಲುಪಿಸಿದ್ದೆವು. ಇದು ಕಾರಣವಾಗಿದ್ದು ತಂತ್ರಜ್ಞಾನದಿಂದ. 2 ಕೋಟಿ ಬಡವರಿಗೆ ಮನೆಗಳನ್ನ ನೀಡಿದ್ದೇವೆ ಇದಕ್ಕೆ ಕಾರಣ ತಂತ್ರಜ್ಞಾನ. ತಂತ್ರಜ್ಞಾನದಿಂದಾಗಿ ಮಧ್ಯವರ್ತಿ ಇಲ್ಲದೇ ರೈತರು ನೇರವಾಗಿ ಮಾರುಕಟ್ಟೆ ಜೊತೆ ವ್ಯವಹರಿಸಬಹುದು. ವ್ಯವಹಾರಸ್ಥರು-ಗ್ರಾಹಕರ ಮಧ್ಯೆ ನೇರ ವ್ಯವಹಾರಕ್ಕೆ ತಂತ್ರಜ್ಞಾನ ಕಾರಣ.

ಭವಿಷ್ಯದಲ್ಲಿ ಜಲಜೀವನ್​ ಮಿಷನ್​ ಯೋಜನೆ ಮಾಡುತ್ತಿದ್ದು ಇದಕ್ಕೂ ತಂತ್ರಜ್ಞಾನ ಬಳಕೆ ಮಾಡುತ್ತೇವೆ. ಪ್ಲಾಸ್ಟಿಕ್​ ಮುಕ್ತ ಭಾರತಕ್ಕೆ ಪಣ ತೊಟ್ಟಿದ್ದು ಅದಕ್ಕೂ ತಂತ್ರಜ್ಞಾನ ಬಳಕೆ ಆಗುತ್ತಿದೆ. ಹೊಸ ಮಾದರಿಯ ಬ್ಯಾಟರಿಗಳು ಅಭಿವೃದ್ಧಿಯಾಗುತ್ತಿದ್ದು, ಪರಿಸರಕ್ಕೆ ಪೂರಕವಾಗಿರಲಿದೆ. ಜಾಗತಿಕ ಮಟ್ಟದಲ್ಲಿ ನೀರು, ವಿದ್ಯುತ್​, ಆಹಾರದ ಉತ್ಪಾದನೆಯಲ್ಲಿ ನಾವು ಮುಂದೆ ನಿಲ್ಲುತ್ತೇವೆ.

ಎಲ್ಲಿ ಆರೋಗ್ಯವೋ ಅಲ್ಲಿ ಸಮೃದ್ಧಿ ಎಂದು ಗಾಂಧೀಜಿ ಹೇಳಿದರು. ಇದಕ್ಕಾಗಿ ಆರೋಗ್ಯ, ಔಷಧಿ, ಡಯೋಗ್ನಾಸ್ಟಿಕ್​ಗೆ ನಾವು ಹೆಚ್ಚು ಖರ್ಚು ಮಾಡುತ್ತೇವೆ. 2025ರೊಳಗೆ ಭಾರತ ಚುಚ್ಚುಮದ್ದು​ ಸರಬರಾಜಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರಲಿದೆ.

ದೇಶಕ್ಕಾಗಿ ಏನಾದರೂ ಸಾಧಿಸಬೇಕು ಎಂಬ ಛಲದಿಂದ ಮುನ್ನುಗ್ಗಿ. ಈಗಿರುವ ಕನಸನ್ನ ಇನ್ನೊಂದು ಹೆಜ್ಜೆ ಮುಂದಿಟ್ಟು ನನಸು ಮಾಡಿ. ಇದರಿಂದ ನಿಮಗೆ ಮಾತ್ರವಲ್ಲ ಭಾರತದ ಅಭಿವೃದ್ಧಿ ಕೂಡ ಆಗಲಿದೆ. ಇನ್​ಕ್ಯೂಬಿಲೇಟರ್​ ಸಂಶೋಧನೆಯಲ್ಲಿ ಭಾರತ ಖ್ಯಾತಿ ಪಡೆದಿದೆ. ಅದಕ್ಕಾಗಿ ನಾನು ಭಾರತದ ಯುವ ವಿಜ್ಞಾನಿಗಳಿಗೆ ಅಭಿನಂದಿಸುತ್ತೇನೆ. ಅಲ್ಲದೇ ಇಂಜಿನಿಯರಿಂಗ್​ನಲ್ಲಿ ಭಾರತಕ್ಕೆ ವಿಶ್ವಮಟ್ಟದಲ್ಲಿ ಹೆಸರಿದೆ.

Leave a Reply