ಡಿಸಿಎಂ ಸ್ಥಾನ ಸಿಗದಿದ್ರೆ ರಾಜೀನಾಮೆ ಅಸ್ತ್ರ ಪ್ರಯೋಗಕ್ಕೆ ಶ್ರೀರಾಮುಲು ತೀರ್ಮಾನ?

ಡಿಜಿಟಲ್ ಕನ್ನಡ ಟೀಮ್:

ಒಂದು ಕಡೆ ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ಸಿಎಂ ಯಡಿಯೂರಪ್ಪ ಕಸರತ್ತು ನಡೆಸುತ್ತಿದ್ದರೆ, ಇನ್ನೊಂದು ಕಡೆ ಸಚಿವರಾಗಿರುವ ಶ್ರೀರಾಮುಲು ಉಪಮುಖ್ಯಮಂತ್ರಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ.

ಆದ್ರೆ ಉಪಮುಖ್ಯಮಂತ್ರಿ ಸ್ಥಾನ ಸಿಗುವುದು ಅನುಮಾನವಾಗಿದ್ದು, ಉಪಮುಖ್ಯಮಂತ್ರಿ ಪಟ್ಟ ವಾಲ್ಮೀಕಿ ಸಮುದಾಯಕ್ಕೇ ಸೇರಿದ ರಮೇಶ್​ ಜಾರಕಿಹೊಳಿ ಅವರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಶ್ರೀರಾಮುಲು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಇದೆ. ಈ ಕುರಿತ ಅನುಮಾನಕ್ಕೆ ಪುಷ್ಠಿ ನೀಡುವಂತೆ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್​ ಹೋರಾಟದ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ‘ನಾನು ಎಷ್ಟು ದಿನ ಸಚಿವನಾಗಿ ಇರ್ತಿನೋ ಗೊತ್ತಿಲ್ಲ. ಆದ್ರೆ ಅಷ್ಟರೊಳಗೆ ನಾನು ಆಶಾ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ ಕೆಲಸ ಮಾಡ್ತೀನಿ’ ಎಂದಿದ್ದಾರೆ.

ಇದಕ್ಕೂ ಮೊದಲೇ ನಿನ್ನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಸಭೆ ನಡೆಸಿದ್ದ ಸಚಿವ ಶ್ರೀರಾಮುಲು, ‘ಜನರ ಅಭಿಪ್ರಾಯ ಶ್ರೀರಾಮುಲು ಡಿಸಿಎಂ ಆಗಬೇಕೆಂದು ಇದೆ. ಕೆಲವು ಸಿದ್ದಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇನೆ. ಡಿಸಿಎಂ ವಿಚಾರ ಬಂದಾಗ ನಾನು ನಿಸ್ಸಹಾಯಕ. ಸಮುದಾಯದ ಮುಖಂಡರು, ಮಠಾಧೀಶರು ಮೀಸಲಾತಿ ಹೆಚ್ಚಿಸದಿದ್ದರೆ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ’ ಎಂದು ಘೋಷಣೆ ಮಾಡಿದ್ದರು.

ಯಾವಾಗ ಡಿಸಿಎಂ ಸ್ಥಾನ ಸಿಗುವುದಿಲ್ಲ ಎನ್ನುವುದು ಖಚಿತವಾಗ್ತಿದ್ದ ಹಾಗೆ ರಾಜೀನಾಮೆ ನೀಡಿ, ಕೇವಲ ಶಾಸಕನಾಗಿರುವ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.

ರಮೇಶ್​ ಜಾರಕಿಹೊಳಿ ಕೂಡ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದು, ರಮೇಶ್​ಗೆ ಉಪಮುಖ್ಯಮಂತ್ರಿ ಪಟ್ಟ ಸಿಗುವುದು ಬಹುತೇಕ ಖಚಿತವಾಗಿದೆ. ಅದೇ ಕಾರಣಕ್ಕೆ ಶ್ರೀರಾಮುಲು ರಾಜೀನಾಮೆ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ರಾಜಕಾರಣದಲ್ಲಿ ಕೆಲವೊಮ್ಮೆ ತ್ಯಾಗ ಮಾಡಬೇಕಾಗುತ್ತೆ ಎಂದಿರುವ ಬಿ.ಶ್ರೀರಾಮುಲು, ರಮೇಶ್​ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡಿದ್ರೆ ನನಗೆ ಬೇಜಾರಿಲ್ಲ, ರಾಜಕೀಯದಲ್ಲಿ ತ್ಯಾಗ ಅನಿವಾರ್ಯ ಎಂದಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಅಪಾಯಿಂಟ್ಮೆಂಟ್​ ಪಡೆದಿದ್ದು, ಚರ್ಚೆ ಬಳಿಕ ಶ್ರೀರಾಮುಲು ತಮ್ಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆ ಇದೆ.

ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೊಡ್ತೇನೆ ಎಂದು ಬಾದಾಮಿಯಲ್ಲಿ ಬಿಎಸ್​ ಯಡಿಯೂರಪ್ಪ ಪ್ರಚಾರೆ ನಡೆಸಿದ್ರು. ಇದೀಗ ಮೈತ್ರಿ ಸರ್ಕಾರ ಅಸ್ತಿತ್ವ ಕಳೆದುಕೊಂಡು ಬಿ.ಎಸ್​ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿದೆ. ಮೂರು ಮೂರು ಜನ ಡಿಸಿಎಂ ಆಗಿದ್ದಾರೆ. ಆದ್ರೆ ಚುನಾವಣೆ ವೇಳೆಯೇ ಭರವಸೆ ಪಡೆದಿದ್ದ ಶ್ರೀರಾಮುಲು ಕೇವಲ ಸಚಿವರಾಗಿದ್ದಾರೆ. ಅದೂ ಅಲ್ಲದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನವನ್ನೂ ಕೊಡದೆ ಇರೋದು ಶ್ರೀರಾಮುಲು ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಒಂದು ವೇಳೆ ಡಿಸಿಎಂ ಸ್ಥಾನವನ್ನು ರಮೇಶ್​ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡಿ, ಶ್ರೀರಾಮುಲು ಅವರನ್ನು ಕಡೆಗಣಿಸಿದ್ರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿ ಮುಂದುವರಿಯುವ ನ ನಿರ್ಧಾರ ಮಾಡ್ತಾರೆ ಎನ್ನಲಾಗಿದೆ.

Leave a Reply