ಡಿಜಿಟಲ್ ಕನ್ನಡ ಟೀಮ್:
ಗೆದ್ದಿರುವ 12 ನೂತನ ಶಾಸಕರಿಗೆ ಮಂತ್ರಿಸ್ಥಾನ ನೀಡಲು ಸಚಿವ ಸಂಪುಟ ವಿಸ್ತರಣೆ ಮಾಡಲಾಗದೇ ಒತ್ತಡದಲ್ಲಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಅದು, ಉಪ ಚುನಾವಣೆಯಲ್ಲಿ ಸೋತಿರುವ ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ತಮಗೂ ಮಂತ್ರಿ ಸ್ಥಾನ ನೀಡುವಂತೆ ಲಾಬಿ ಮಾಡುತ್ತಿರುವುದು.
ಮೈತ್ರಿ ಸರ್ಕಾರ ಬೀಳಿಸಿ ಬಿಎಸ್ ವೈ ಸಂಪುಟದಲ್ಲಿ ಮಂತ್ರಿಯಾಗುವ ಕನಸು ಕಂಡಿದ್ದ ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ಅವರು ಉಪ ಚುನಾವಣೆಯಲ್ಲಿ ಸೋತಿದ್ದಾರೆ.
ಕಳೆದೊಂದು ತಿಂಗಳಲ್ಲಿ ಹಲವು ಬಾರಿ ಮುಖ್ಯಮಂತ್ರಿಗಳ ಮನೆ ಬಾಗಿಲು ತಟ್ಟಿರುವ ಎಂಟಿಬಿ ನಾಗರಾಜ್ ಇಂದು ಮತ್ತೆ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ಮನೆಗೆ ಭೇಟಿ ನೀಡಿದ್ದಾರೆ. ಚುನಾವಣೆಯಲ್ಲಿ ಸೋತಿರುವ ತಮಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಇನ್ನೂ ಸಚಿವ ಸಂಪುಟ ವಿಸ್ತರಣೆಯಾಗದ ಹಿನ್ನೆಲೆ ಲಾಬಿ ಮುಂದುವರೆಸಿರುವ ಎಂಟಿಬಿ ನಾಗರಾಜ್ ಹೇಗಾದರೂ ಮಾಡಿ ತಮ್ಮನ್ನು ಸಚಿವರನ್ನಾಗಿ ಮಾಡುವಂತೆ ಮನವಿ ಮಾಡಿದ್ದಾರೆ.
ಎಂಟಿಬಿ ನಾಗರಾಜ್ ಭೇಟಿಗೂ ಮೊದಲೇ ಇಂದು ಮುಂಜಾನೆ ಸಿಎಂ ಮನೆಗೆ ತೆರಳಿದ್ದ ಎಚ್. ವಿಶ್ವನಾಥ್ ಕೂಡ ತಮಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.