ಇನ್ನುಮುಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ರಾಣಿಗಳಿಗೂ ಸಿಗುತ್ತೆ ನಿವೃತ್ತಿ ಸವಲತ್ತು!

ಡಿಜಿಟಲ್ ಕನ್ನಡ ಟೀಮ್:

ಗಡಿಯಲ್ಲಿ ನಮ್ಮ ಯೋಧರ ಜತೆ ದೇಶವನ್ನು ಕಾಯುವ ಪ್ರಾಣಿಗಳಿಗೂ ಇನ್ನುಮುಂದೆ ನಿವೃತ್ತಿ ಸವಲತ್ತು ನೀಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಮರಳುಗಾಡಿನ ಗಡಿಯಲ್ಲಿ ಒಂಟೆಗಳು ಸೇರಿದಂತೆ ವಿವಿಧ ಗಡಿ ಭಾಗಗಳಲ್ಲಿ, ಕತ್ತೆ, ಶ್ವಾನ, ಹಿಮಕೋಣ ಪ್ರಾಣಿಗಳು ನಮ್ಮ ಸೇನೆಯ ಭಾಗವಾಗಿ ಸೇವೆ ಸಲ್ಲಿಸುತ್ತಿವೆ. ಯೋಧರಿಗೆ ನಿವೃತ್ತಿ ಸವಲತ್ತುಗಳನ್ನು ನೀಡುವಂತೆ ಪ್ರಾಣಿಗಳಿಗೂ ನೀಡಬೇಕು ಎಂದು ಆರು ಸದಸ್ಯರ ಸಮಿತಿಯು ತನ್ನ ಗುಣಮಟ್ಟದ ಕಾರ್ಯಾಚರಣಾ ಪ್ರಕ್ರಿಯಾ (ಎಸ್ಓಪಿ) ವರದಿಯಲ್ಲಿ  ಕೇಂದ್ರಕ್ಕೆ ತಿಳಿಸಿದೆ.

ಇಂಡೋ ತಾಲಿಬಾನ್ ಗಡಿ ಪೊಲೀಸ್ (ಐಟಿಬಿಪಿ), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ಗಾರ್ಡ್ (ಎನ್ಎಸ್ ಜಿ) ಪಡೆಯ ಪ್ರತಿನಿಧಿಗಳು ಈ ಕುರಿತ ವರದಿಯನ್ನು ಸರ್ಕಾರಕ್ಕೆ ನೀಡಿವೆ.

ಸೇನೆಯಲ್ಲಿ ಒಂದು ವರ್ಷ ವಯಸ್ಸಿನ ಪ್ರಾಣಿಗಳನ್ನು ಸೇವೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನಂತರ ಈ ಪ್ರಾಣಿಗಳು 8ರಿಂದ 16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತವೆ. ನಾಯಿಗಳು ಬಾಂಬ್ ಪತ್ತೆ, ಪ್ರದೇಶಗಳ ಕಾವಲು ಜವಾಬ್ದಾರಿ ಹೊತ್ತರೆ, ಕುದುರೆ, ಒಂಟೆ, ಕತ್ತೆ, ಹಿಮಕೋಣ ಗಳನ್ನು ಗಸ್ತು ತಿರುಗಲು ಹಾಗೂ ಸಂಚಾರಕ್ಕೆ ಬಳಸಲಾಗುತ್ತದೆ.

ಈ ಪ್ರಾಣಿಗಳನ್ನು ಸೇವೆ, ಆರೋಗ್ಯ ಮತ್ತು ದೈಹಿಕ ಕ್ಷಮತೆ ಎಂಬ ಮೂರು ವಿಭಾಗಗಳಲ್ಲಿ ಗುರುತಿಸಿ, ಅವುಗಳನ್ನು ನಾಗರೀಕರಿಗೆ ಹರಾಜು ಹಾಕಲಾಗುವುದು. ಒಂದು ವೇಳೆ ಹರಾಜಿನಲ್ಲಿ ಪ್ರಾಣಿಗಳು ಮಾರಾಟವಾಗದಿದ್ದರೆ, ಅವುಗಳಿಗಾಗಿ ಆಯಾ ಯೂನಿಟ್ ಗಳಲ್ಲಿ ಪ್ರತ್ಯೇಕ ಸೂರು ಕಲ್ಪಿಸಲಾಗುವುದು. ಶ್ವಾನಗಳು ಹರಾಜಿನಲ್ಲಿ ಮಾರಾಟವಾಗದಿದ್ದರೆ ಅವುಗಳನ್ನು ಸಂತಾನೋತ್ಪತ್ತಿ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ಈ ಪ್ರಾಣಿಗಳು ಹಾಗೂ ಅವುಗಳ ತರಬೇತುದಾರರಿಗೆ ಪ್ರಥಮ ದರ್ಜೆ ರೈಲು ಪ್ರಯಾಣ ಸೌಕರ್ಯ ಕಲ್ಪಿಸಲಾಗುವುದು. ಇತ್ತೀಚೆಗೆ ದೆಹಲಿ ಮೆಟ್ರೋನ ಭದ್ರತೆಗಾಗಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಐಎಸ್ಎಫ್ ನ ಏಳು ಶ್ವಾನಗಳಿಗೆ ಗೌರವ ಸಲ್ಲಿಸಿ, ಪದಕ ನೀಡಿ ಸೇವೆಯಿಂದ ನೀವೃತ್ತಿ ನೀಡಲಾಯಿತು.

ದೇಶದ ಭದ್ರತೆಗೆ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುವ ಜೀವಿಗಳಿಗೆ ಗೌರವ ಸೂಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಎಂದು ಸಿಐಎಸ್ಎಫ್ ನ ಅಧಿಕಾರಿ ಹೇಮೆಂದ್ರ ಸಿಂಗ್ ತಿಳಿಸಿದ್ದಾರೆ.

Leave a Reply