ಮಂಗಳೂರು ಗಲಭೆಯಲ್ಲಿ ಮೃತಪಟ್ಟವರಿಗೆ ಜನ ಕೊಟ್ಟ ಪರಿಹಾರ ಮೊತ್ತ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದ ಇಬ್ಬರು ಯುವಕರಿಗೆ ರಾಜ್ಯ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿ ನಂತರ ಅದನ್ನು ವಾಪಸ್ ಪಡೆದಿತ್ತು. ಮೃತರ ಕುಟುಂಬಕ್ಕೆ ಸರ್ಕಾರ ನೆರವಿಗೆ ಬಾರದಿದ್ದರೂ ಜನರು ಆ ಕುಟುಂಬದ ಬೆನ್ನಿಗೆ ನಿಂತು ಸ್ವಯಂ ಪ್ರೇರಿತರಾಗಿ ಪರಿಹಾರ ನೀಡಲು ಮುಂದಾಗಿ ಒಟ್ಟು 2 ಕೋಟಿ ರೂ. ಪರಿಹಾರ ಈ ಮೃತರ ಕುಟುಂಬಕ್ಕೆ ನೀಡಲಾಗಿದೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ 23 ವರ್ಷದ ನೌಶಿನ್ ಬೆಂಗ್ರೆ ಮತ್ತು 42 ವರ್ಷದ ಜಲೀಲ್ ಕುದ್ರೋಲಿ ಅವರು ಪೊಲೀಸರ ಗುಂಡೇಟಿಗೆ ಬಲಿಯಾದರು. ಆರಂಭದಲ್ಲಿ ಇವರಿಗೆ ಮುಖ್ಯಮಂತ್ರಿಗಳು 10 ಲಕ್ಷ ಪರಿಹಾರ ಪ್ರಕಟಿಸಿತ್ತಾದರೂ ನಂತರ ಅವರಿಗೆ ಕ್ರಿಮಿನಲ್ ಎಂಬ ಹಣೆಪಟ್ಟಿ ಕಟ್ಟಿ ಪರಿಹಾರ ಹಿಂಪಡೆದಿತ್ತು. ಸರ್ಕಾರದ ಈ ನಡೆ ಟೀಕಿಸಿದ್ದ ವಿರೋಧ ಪಕ್ಷಗಳು, ಕೇಂದ್ರ ಸರ್ಕಾರದ ನಾಯಕರು ಕರೆ ಮಾಡಿ ಪರಿಹಾರ ಹಿಂಪಡೆಯುವಂತೆ ಸೂಚಿಸಿದ್ದರಿಂದ ಮುಖ್ಯಮಂತ್ರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ವರದಿಗಳ ಪ್ರಕಾರ ಈವರೆಗೂ ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳ ಮೂಲಕ 2 ಕೋಟಿ ಪರಿಹಾರ ಬಂದಿದೆ. ಇದಕ್ಕೂ ಮುನ್ನ ಮಾಜಿ ಮುಖ್ಯಮತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ತಮ್ಮ ಕಡೆಯಿಂದ ಪರಿಹಾರ ಘೋಷಿಸಿದ್ದರು. ಇನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ 5 ಲಕ್ಷ ಪರಿಹಾರ ಘೋಷಿಸಿದ್ದರು.

ಇನ್ನು ಈ ಮೃತರಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತಿರುವ ಮಾಜಿ ಶಾಸಕ ಮೊಹಿದ್ದೀನ್ ಬಾವಾ ಅವರು ಈವರೆಗೂ ಎಷ್ಟು ಹಣ ಬಂದಿದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಪರಿಹಾರ ಹಣದ ಮೊತ್ತ ಪ್ರಕಟಿಸಲು ಇದು ಸೂಕ್ತ ಸಮಯ ಅಲ್ಲ. ಹಣ ಪ್ರಕಟಿಸಿದರೆ ಪರಿಹಾರ ಬರುವುದು ನಿಂತು ಹೋಗುವ ಸಾಧ್ಯತೆ ಇದೆ. ಎಷ್ಟು ದೊಡ್ಡ ಪ್ರಮಾಣದಲ್ಲಿ ಸಾಧ್ಯವೋ ಅಷ್ಟು ಪರಿಹಾರವನ್ನು ಈ ಕುಟುಂಬಕ್ಕೆ ದೊರಕಿಸಿ ಕೊಡಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿರುವುದಾಗಿ ದಿ ಕಾಗ್ನೆಟ್ ವರದಿ ಮಾಡಿದೆ.

Leave a Reply