ಉತ್ತರ ಕೊರಿಯಾಗೆ ಬೆಣ್ಣೆ, ಇರಾನಿಗೆ ಸುಣ್ಣ! ಯಶಸ್ವಿಯಾಗುತ್ತಾ ಟ್ರಂಪ್ ತಂತ್ರ?

ಡಿಜಿಟಲ್ ಕನ್ನಡ ವಿಶೇಷ:

ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ ಮಿಲಿಟರಿ ಕಮಾಂಡರ್ ಖಾಸಿಂ ಸೊಲೈಮನಿಯನ್ನು ಹತ್ಯೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು 52 ಪ್ರದೇಶಗಳ ಮೇಲೆ ದಾಳಿ ನಡೆಸಲು ಅಮೆರಿಕ ಸೇನೆ ಸನ್ನದ್ಧವಾಗಿದೆ ಎಂಬ ಎಚ್ಚರಿಕೆ ರವಾನಿಸಿದ್ದಾರೆ.

2020 ಡೊನಾಲ್ಡ್ ಟ್ರಂಪ್ ಪಾಲಿಗೆ ಮಹತ್ವದ ವರ್ಷ. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಕೂರುವ ಕನಸು ಕಂಡಿರುವ ಟ್ರಂಪ್ ಈ ವರ್ಷದ ಆರಂಭದಲ್ಲೇ ಇರಾನ್ ಮೇಲೆ ದಾಳಿ ನಡೆಸಿದ್ದಾರೆ.

ವಿಶ್ವದ ದೊಡ್ಡಣ್ಣ ಎಂದೇ ಕರೆಸಿಕೊಳ್ಳುವ ಅಮೆರಿಕಕ್ಕೆ ಚೀನಾ ಹಾಗೂ ರಷ್ಯಾ ಪ್ರಬಲ ಎದುರಾಳಿಗಳಾದರೂ ಈ ರಾಷ್ಟ್ರಗಳು ನೇರವಾಗಿ ಅಮೆರಿಕಕ್ಕೆ ಯುದ್ಧ ಸಾರುವಂತೆ ತೊಡೆತಟ್ಟಿ ನಿಂತಿಲ್ಲ. ಅಮೆರಿಕಕ್ಕೆ ಸವಾಲು ಎಸೆಯುತ್ತಿರುವ ರಾಷ್ಟ್ರಗಳೆಂದರೆ ಅದು ಇರಾನ್ ಹಾಗೂ ಉತ್ತರ ಕೊರಿಯಾ ಮಾತ್ರ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಅಮೆರಿಕದ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತೇನೆ ಎಂದು ನೇರವಾಗಿ ಬೆದರಿಕೆ ಹಾಕಿದ್ದರು. ಎರಡು ವರ್ಷಗಳ ಹಿಂದೆ ಉತ್ತರ ಕೊರಿಯಾ ಹಾಗೂ ಅಮೆರಿಕದ ನಡುವೆ ಯುದ್ಧ ನಡೆಯುತ್ತದೆ, ಅಣ್ವಸ್ತ್ರಗಳು ಬಳಕೆಯಾಗುತ್ತವೆ ಎಂಬ ಆತಂಕ ಮೂಡಿತ್ತು. ಆದರೆ ಅಷ್ಟರಲ್ಲಿ ಉಭಯ ದೇಶಗಳ ಅಧ್ಯಕ್ಷರು ಐತಿಹಾಸಿಕ ರಾಜಿ ಸಂದಾನದ ಮೂಲಕ ಸುಮ್ಮನಾದರು.

ಆದರೆ, ಈಗ ಮತ್ತೆ ಕಿಮ್ ತಾನು ಹೊಸ ಅಣ್ವಸ್ತ್ರ ಪ್ರಯೋಗಕ್ಕೆ ಸಿದ್ದವಾಗಿದ್ದೇನೆ. ಈಗ ಪ್ರಯೋಗಿಸಲಿರುವ ಅಣ್ವಸ್ತ್ರ ಕ್ಷಿಪಣಿ ದೂರದ ಗುರಿಯನ್ನು ಹೊಂದಿದ್ದು ಅಮೆರಿಕವನ್ನು ಕ್ಷಣಾರ್ಧದಲ್ಲೇ ಉಡೀಸ್ ಮಾಡಲಿದೆ ಎಂಬ ಬೆದರಿಕೆ ಸಂದೇಶ ಕೊಟ್ಟಿದ್ದಾರೆ. ಹೀಗೆ ತನ್ನ ವಿರುದ್ಧ ತೊಡೆ ತಟ್ಟಿ ನಿಂತಿರುವ ಎರಡು ರಾಷ್ಟ್ರಗಲ ಪೈಕಿ ಅಮೆರಿಕ ಇರಾನ್ ವಿರುದ್ಧ ಒಂದು ರೀತಿಯ ಧೋರಣೆ ತೋರಿದರೆ ಉತ್ತರ ಕೊರಿಯಾ ವಿರುದ್ಧ ಮತ್ತೊಂದು ರೀತಿಯ ಧೋರಣೆ ತಾಳುತ್ತಿದೆ.

ಟ್ರಂಪ್ ಅವರ ವಿದೇಶಾಂಗ ನೀತಿಯನ್ನು ‘ಗರಿಷ್ಠ ಒತ್ತಡ’ದ ನೀತಿ ಎಂದು ಬಿಂಬಿಸಲಾಗಿದೆ. ಮೊದಲು ಆರ್ಥಿಕ ನಿರ್ಬಂಧ ಹೇರುವುದು, ನಂತರ ಬೆದರಿಕೆ ಹಾಕುವುದು, ನಂತರ ಎದುರಾಳಿ ರಾಷ್ಟ್ರದ ನಾಯಕರನ್ನು ಲೇವಡಿ ಮಾಡುವುದು. ಇವೆಲ್ಲದರ ನಂತರ ರಾಜಿ ಸಂಧಾನಕ್ಕೆ ಕರೆದು ಆರ್ಥಿಕ ನಿರ್ಬಂಧವನ್ನು ತೆರವುಗೊಳಿಸುತ್ತೇವೆ ಎಂದು ಹೇಳಿ ತಮ್ಮ ಎದುರಾಳಿ ರಾಷ್ಟ್ರದಿಂದ ಉದ್ಭವಿಸಿರುವ ಸವಾಲನ್ನು ಹಿಂಪಡೆಯುವಂತೆ ಮಾಡುವುದು.

ಹೆಚ್ಚು ಕಡಿಮೆ ಇದೇ ಸೂತ್ರವನ್ನು ಟ್ರಂಪ್, ಇರಾನ್ ಹಾಗೂ ಉತ್ತರ ಕೊರಿಯಾ ಜತೆ ಪ್ರಯೋಗಿಸಿದ್ದಾರೆ. ಆದರೆ, ಎರಡು ದೇಶಗಳ ನಡುವಣ ಅಂತಿಮ ಅಧ್ಯಾಯ ಭಿನ್ನವಾಗಿದೆ. ಉತ್ತರ ಕೊರಿಯಾ ವಿರುದ್ಧವೂ ನಿರ್ಬಂಧ ಹೇರಿದ ಅಮೆರಿಕ ನಂತರ ಯುದ್ಧ ಮಾಡುವ ಬೆದರಿಕೆ ಹಾಕಿತು. ಅಷ್ಟೇ ಅಲ್ಲದೆ ನನ್ನ ಟೇಬಲ್ ನಲ್ಲಿ ಉತ್ತರ ಕೊರಿಯಾಗೆ ಕ್ಷಿಪಣಿ ದಾಳಿ ಮಾಡುವ ಬಟನ್ ಇಟ್ಟುಕೊಂಡಿರುವುದಾಗಿಯೂ ಟ್ರಂಪ್ ಹೇಳಿದ್ದರು. ಇದಕ್ಕೆ ಸೊಪ್ಪು ಹಾಕದ ಉತ್ತರ ಕೊರಿಯಾ ತಾನೂ ಕೂಡ ಪ್ರತಿ ದಾಳಿಗೆ ಸಿದ್ಧ ಎಂದಾಗ ದಕ್ಷಿಣ ಕೊರಿಯಾದ ಮಧ್ಯಸ್ಥಿಕೆಯಲ್ಲಿ ರಾಜಿ ಸಂಧಾನಕ್ಕೆ ಮುಂದಾದರು. ರಾಜಿ ಸಂಧಾನದಲ್ಲಿ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ನೀತಿಯನ್ನು ನಿಷ್ಕ್ರಿಯಗೊಳಿಸಬೇಕು ಎಂದು ಹೇಳಿದರು.

ಇದೇ ಸೂತ್ರವನ್ನೇ ಇರಾನ್ ವಿಚಾರದಲ್ಲೂ ಅಳವಡಿಸಿಕೊಳ್ಳಲಾಯಿತು. ಆದರೆ ಅಂತ್ಯದಲ್ಲಿ ರಾಜಿ ಸೂತ್ರ ಬಿಟ್ಟು ದಾಳಿ ಸೂತ್ರ ಹಿಡಿದಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಟ್ರಂಪ್ ನೀಡಿದ ಭರವಸೆಗಳಲ್ಲಿ ಒಂದಾಗಿದ್ದದ್ದು, ಬರಾಕ್ ಒಬಾಮಾ ಅವರು ಇರಾನ್ ಜತೆ ಮಾಡಿಕೊಂಡಿದ್ದ ಅಣ್ವಸ್ತ್ರ ಒಪ್ಪಂದವನ್ನು ರದ್ದು ಮಾಡುತ್ತೇನೆ ಎಂಬುದು. 2018ರಲ್ಲಿ ತಮ್ಮ ಮಾತಿಗೆ ಬದ್ಧವಾಗಿ ಈ ಒಪ್ಪಂದ ಇರಾನ್ ನ ಆಕ್ರಮಣಕಾರಿ ಮನೋಭಾವವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಹೀಗಾಗಿ ಈ ಒಪ್ಪಂದ ರದ್ದು ಮಾಡಲಾಗುತ್ತಿದೆ ಎಂದರು. ಅಲ್ಲದೆ ಇರಾನಿನ ಅಣ್ಣಸ್ತ್ರ ಗುರಿಯನ್ನು ಅಂತ್ಯಗೊಳಿಸಲು ಹೊಸ ಒಪ್ಪಂದ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ಇದರ ಭಾಗವಾಗಿ ಕಳೆದ ವರ್ಷ ಸರಣಿ ನಿರ್ಬಂಧವನ್ನು ಇರಾನ್ ಮೇಲೆ ಹೇರಲಾಯಿತು. ಇರಾನ್ ನಿಂದ ಯಾವುದೇ ರಾಷ್ಟ್ರಗಳು ತೈಲ ಖರೀದಿಸಬಾರದು ಎಂದು ಇತರೆ ರಾಷ್ಟ್ರಗಳ ಮೇಲೆ ಒತ್ತಡ ಹೇರಲಾಯಿತು. ಆದರೆ ಭಾರತ ಇದನ್ನು ಧಿಕ್ಕರಿಸಿ, ಇರಾನ್ ನಿಂದಲೇ ಬಹುಪಾಲು ತೈಲ ಖರೀದಿ ಮುಂದುವರಿಸಿತು. ಇದು ಅಮೆರಿಕ ಕಣ್ಣು ಕೆಂಪಾಗಿಸಿ ಕೆಲ ದಿನಗಳ ಕಾಲ ಟ್ರಂಪ್ ಭಾರತದ ವಿರುದ್ಧ ಬುಸುಗುಟ್ಟರು. ಇರಾನ್ ಮೇಲಿನ ಆರ್ಥಿಕತೆ ಕುಸಿಯುತ್ತಿದ್ದಂತೆ, ಆರ್ಥಿಕ ಹಿನ್ನಡೆಯನ್ನು ಸುಧಾರಿಸಲು ಸಹಾಯ ಮಾಡುವುದಾಗಿ ಆಸೆ ತೋರಿಸಿ ಇರಾನ್ ನಾಯಕರ ಜತೆ ಮಾತುಕತೆಗೆ ಆಹ್ವಾನ ನೀಡಿದರು. ಆದರೆ ಇರಾನ್ ಈ ಆಹ್ವಾನವನ್ನು ಎಡಗೈನಲ್ಲಿ ಬಿಸಾಕಿ ಅಮೆರಿಕ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಮನೋಭಾವ ತೋರಿತು. ಅಲ್ಲದೆ ಒಬಾಮಾ ವರ ಒಪ್ಪಂದದ ನಂತರ ನಿಲ್ಲಿಸಿದ್ದ ತನ್ನ ಅಣ್ವಸ್ತ್ರ ಸುಧಾರಣೆಯನ್ನು ಪುನಾರಾರಂಭಿಸಿತು. ಅಷ್ಟೇ ಅಲ್ಲದೆ ತನ್ನ ಬೆಂಬಲಿತ ರಾಷ್ಟ್ರಗಳೊಂದಿಗೆ ತಮ್ಮ ಸುತ್ತ ಮುತ್ತಲಿರುವ ಅಮೆರಿಕದ ಜತೆಗಿನ ಸ್ನೇಹಿ ರಾಷ್ಟ್ರಗಳ ಮೇಲೆ ದಾಳಿ ನಡೆಸಿತು.

ಕಳೆದ ವರ್ಷ ಜೂನ್ ನಲ್ಲಿ ಅಮೆರಿಕದ ಅತ್ಯುನ್ನತ ಗಸ್ತು ತಿರುಗುವ ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿತು. ಸೆಪ್ಟೆಂಬರ್ ನಲ್ಲಿ ಸೌದಿ ಅರೆಬಿಯಾದ ತೈರ ಪರಿಷ್ಕೃತ ಘಟಕದ ಮೇಲೆ ನಡೆದ ದಾಳಿ ತೈಲ ಮಾರುಕಟ್ಟೆಯನ್ನೇ ಅಲ್ಲೋಲ್ಲ ಕಲ್ಲೋಲವಾಗುವಂತೆ ಮಾಡಿತು.

ಈ ಎಲ್ಲವೂ ಟ್ರಂಪ್ ಅವರಿಗೆ ನೇರವಾಗಿ ಸವಾಲು ಎಸೆದಿತ್ತು. 2020ರ ನವೆಂಬರ್ ನಲ್ಲಿ ಅಧ್ಯಕ್ಷಿಯ ಚುನಾವಣೆ ಆರಂಭವಾಗುತ್ತಿದ್ದು, ಈ ಹಂತದಲ್ಲಿ ಇರಾನ್ ನಿಂದ ಎದುರಾದ ಸವಾಲು ಟ್ರಂಪ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗ ಸಂಧಾನ ಸೂತ್ರ ಅನುಸರಿಸಿದರೆ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತರು. ಹೀಗಾಗಿ ಉತ್ತರ ಕೊರಿಯಾ ರೀತಿ ಇರಾನ್ ರಾಜಿಗೆ ಮುಂದಾಗದಿದ್ದಾಗ ಚುನಾವಣೆ ಸಂದರ್ಭದಲ್ಲಿ ತಮ್ಮ ಘನತೆಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಇರಾನ್ ಮೇಲೆ ದಾಳಿ ಮಾಡಿದ್ದಾರೆ.

ಕಳೆದ ಮೂರು ವರ್ಷಗಳ ಕಾಲ ಟ್ರಂಪ್ ಆಡಳಿತದಲ್ಲಿ ಈ ಸೂತ್ರ ಪರಿಣಾಮಕಾರಿಯಾಗಿಯೇ ಇತ್ತು. ಆದರೆ ಉತ್ತರ ಕೊರಿಯಾ ಜತೆ ರಾಜಿ ಸೂತ್ರ ನಡೆದಿದೆಯಾದರೂ ಉತ್ತರ ಕೊರಿಯಾದ ಹೊಸ ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ಅಮೆರಿಕಕ್ಕೆ ಹೊಸ ಬೆದರಿಕೆಯಾಗಿದೆ. ಇನ್ನು ಇರಾನ್ ವಿಚಾರದಲ್ಲೂ ಟ್ರಂಪ್ ನೀತಿ ಯಶಸ್ವಿಯಾಗಿಲ್ಲ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಈ ಎರಡೂ ರಾಷ್ಟ್ರಗಳ ಜತೆ ಅನುಸರಿಸಿರುವ ತಂತ್ರ ಕೈಕೊಡುತ್ತಾ ಅನ್ನೋ ಅನುಮಾನವೂ ಹುಟ್ಟುಕೊಂಡಿದೆ.

Leave a Reply