ಗಗನಕ್ಕೇರಿದ ಚಿನ್ನದ ಬೆಲೆ, ಕುಸಿದ ಕಂಡ ರೂಪಾಯಿ ಮೌಲ್ಯ!

ಡಿಜಿಟಲ್ ಕನ್ನಡ ಟೀಮ್:

ಎರಡು ದಿನಗಳಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1700ಕ್ಕೂ ಹೆಚ್ಚು ದುಬಾರಿ, ತೈಲ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ, ರೂಪಾಯಿ ಮೌಲ್ಯ ಕುಸಿತ, ಷೇರು ಮಾರುಕಟ್ಟೆ ತತ್ತರ… ಇವಿಷ್ಟು ಅಮೆರಿಕ ಮತ್ತು ಇರಾನ್ ನಡುವಣ ಮಿಲಿಟರಿ ಸಂಘರ್ಷದ ಹೊಡೆತಗಳು.

ಅಮೆರಿಕ ಹಾಗೂ ಚೀನಾ ನಡುವಣ ಆರ್ಥಿಕ ಸಮರ ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಆರ್ಥಿಕತೆ ಮೇಲೆ ಪರಿಣಾಮ ಬೀರಿರುವ ಬೆನ್ನಲ್ಲೇ ಈಗ ಅಮೆರಿಕ ಮತ್ತು ಇರಾನ್ ನಡುವಣ ಮಿಲಿಟರಿ ಸಂಘರ್ಷ ಮತ್ತೊಂದು ಹೊಡೆತ ಕೊಟ್ಟಿದೆ.

ವಿಶ್ವಕ್ಕೆ ತೈಲ ಪೂರೈಸುವ ಅದರಲ್ಲೂ ಭಾರತ ತನ್ನ ಬಹುಪಾಲು ತೈಲ ಖರೀದಿಸುತ್ತಿರುವ ಇರಾನ್ ಮೇಲೆ ಅಮೆರಿಕದ ದಾಳಿ ದುಷ್ಪರಿಣಾಮ ಬೀರಲು ಆರಂಭಿಸಿದೆ. ಅವುಗಳಲ್ಲಿ ಪ್ರಮುಖವಾಗಿ…

ಕಳೆದ ಶುಕ್ರವಾರ ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ 850 ರೂ ಏರಿಕೆ ಕಂಡಿತ್ತು. ಇಂದು 918 ರೂಪಾಯಿ ಹೆಚ್ಚಳವಾಗಿದೆ. ಅಲ್ಲಿಗೆ 10 ಗ್ರಾಂ ಚಿನ್ನದ ಬೆಲೆ 41,030 ರೂ ಮುಟ್ಟಿದೆ.

ಇನ್ನು ಬೆಳ್ಳಿಯ ಒಂದು ಕಿಲೋಗೆ ಈಗ 48,474 ರೂಪಾಯಿ ಆಗಿದೆ.

ಭಾರತದ ಷೇರು ಮಾರುಕಟ್ಟೆ ಕೂಡ ತತ್ತರಿಸಿದೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರದ ಆರಂಭಿಕ ವಹಿವಾಟಿನಲ್ಲಿ 500 ಅಂಕಗಳಷ್ಟು ಕುಸಿತ ಕಂಡು 41,087.95 ಮಟ್ಟ ಮುಟ್ಟಿದೆ.

ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಕೂಡ ಇವತ್ತು 109.60 ಅಂಕ ಕಳೆದುಕೊಂಡಿದೆ. ನಿಫ್ಟಿ ಈಗ 12,117 ಅಂಕಗಳನ್ನು ಹೊಂದಿದೆ.

ಎಸ್​ಬಿಐ, ಐಸಿಐಸಿಐ, ಹೆಚ್​ಡಿಎಫ್​ಸಿ, ಮೊದಲಾದ ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಸಂಸ್ಥೆಗಳ ಷೇರುಗಳು ಬೆಲೆ ಕುಸಿತ ಕಂಡಿದೆ.

ಆಟೊಮೊಬೈಲ್ ಕ್ಷೇತ್ರದ ಮಾರುತಿ, ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಗಳ ಷೇರುಗಳು, ಟಾಟಾ ಸ್ಟೀಲ್, ಎನ್​ಟಿಪಿಸಿ ಸಂಸ್ಥೆಯ ಷೇರುಗಳೂ ಕಡಿಮೆ ಮೊತ್ತಕ್ಕೆ ಬಿಕರಿಯಾಗಿವೆ.

ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 72 ರೂ ಗಡಿ ದಾಟಿ ಹೋಗಿದೆ. ಒಂದು ಡಾಲರ್​ಗೆ 72.03 ರೂಪಾಯಿ ದರ ಇದೆ.

ಈಗ ಜಾಗತಿಕ ತೈಲ ಬೆಲೆಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಇನ್ನಷ್ಟು ತುಟ್ಟಿಯಾಗಲಿವೆ.

ಬೆಂಗಳೂರಿನಲ್ಲಿ ಸದ್ಯಕ್ಕೆ ಒಂದು ಲೀಟರ್ ಪೆಟ್ರೋಲ್ ಬೆಲೆ 78.28 ರೂ ಇದೆ. ಸದ್ಯದಲ್ಲೇ ಇದು 80 ರೂಪಾಯಿ ಮಟ್ಟ ಮುಟ್ಟುವ ಸಾಧ್ಯತೆ ಇದೆ.

Leave a Reply