ಮೋದಿಯ ಎರಡನೇ ಅವಧಿಯಲ್ಲಿ ದೇಶ ಸ್ಥಿತಿ ಹದಗೆಟ್ಟಿದೆ: ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಜಾಗರೂಕತೆ ಸೃಷ್ಟಿಯಾಗಿ, ಪರಿಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಸಿಎಎ, ಎನ್​ಆರ್​ಸಿ ಕುರಿತು ವ್ಯಾಪಕ ವಿರೋಧದ ಬೆನ್ನಲ್ಲೇ ಜೆಎನ್​ಯು ವಿದ್ಯಾರ್ಥಿ ಮತ್ತು ಪ್ರೊಫೆಸರ್​ಗಳ ಮೇಲೆ ಮಾರಣಾಂತಿಕ ಹಲ್ಲೆ, ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿತ. ಷೇರು ಮಾರುಕಟ್ಟೆ ನೆಲಕಚ್ಚಿರುವುದು, ತೈಲ – ಬಂಗಾರದ ಬೆಲೆ ನಿರಂತರ ಏರಿಕೆ. ದಿನಬಳಕೆಗೆ ಈರುಳ್ಳಿ ಬೆಲೆ ಏರಿಕೆ ಸೇರಿದಂತೆ ಹಣದುಬ್ಬರ ಹೀಗೆ ಅನೇಕ ಸಮಸ್ಯೆಗಳು ದೇಶದಲ್ಲಿ ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು.

ಆರ್ಥಿಕತೆ ವಿಚಾರದಲ್ಲಿ ಕೇವಲ ಭಾರತವೊಂದೇ ಅಲ್ಲದೇ, ವಿಶ್ವಾದ್ಯಂತ ಆತಂಕದ ಸನ್ನಿವೇಶ ಕಾಣುತ್ತಿದ್ದೇವೆ ಎಂದ ಅವರು, ಸಿಎಎಯಿಂದ ದೇಶದಲ್ಲಿ ಅಜಾಗರೂಕತೆ ಸೃಷ್ಟಿಯಾಗಿದೆ. ಜನರ ಗಮನ ಬೇರೆಡೆಗೆ ಸೆಳೆಯಲು ಬೇರೆ ವಿಷಯ ಪ್ರಸ್ತಾಪ ಮಾಡಲಾಗುತ್ತಿದೆ. ಅಮೆರಿಕ ಮತ್ತು ಭಾರತದ ನಾಯಕರು ಒಂದೇ ದೋಣಿಯಲ್ಲಿದ್ದಾರೆ. ನಮ್ಮ ದೇಶದಲ್ಲಿ ಬಂಡವಾಳ ಹೂಡಲು ಹೊರಗಿನವರು ಬರುತ್ತಿಲ್ಲ. ದೇಶದಲ್ಲಿ ಆತಂಕ ಸೃಷ್ಟಿಯಾಗಿದ್ದು, ನಮ್ಮ ದೇಶದವರೂ ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಬಿಎಸ್​ ಯಡಿಯೂರಪ್ಪ ಅವರ ವಿರುದ್ಧವೂ ಕಿಡಿಕಾರಿದ ಕುಮಾರಸ್ವಾಮಿ, ‘ಸಿಎಎ ಬಗ್ಗೆ ಜನಾಭಿಪ್ರಾಯ ಮೂಡಿಸಿ ನರೇಂದ್ರ ಮೋದಿಯವರನ್ನು ಮೆಚ್ಚಿಸಲು ಬಿಎಸ್​ವೈ ಪ್ರಯತ್ನಿಸುತ್ತಿದ್ದಾರೆ. ವಿವಾದಾತ್ಮಕ ಸಿಎಎ ಕಾಯ್ದೆಯನ್ನು ರಾಜ್ಯದಲ್ಲಿ ಈಗಲೇ ಜಾರಿಗೆ ತರಬೇಡಿ. ಕನಿಷ್ಟ ಆರು ತಿಂಗಳವರೆಗೂ ಮುಂದೂಡಿ. ನೆರೆಪೀಡಿತ ಪ್ರದೇಶಕ್ಕೆ ಮೊದಲು ಪರಿಹಾರ ನೀಡಿ. ಜಿಲ್ಲಾ ಮಂತ್ರಿಗಳು ನೆರೆಯ ಬಗ್ಗೆ ಏನು ಕೆಲಸ ಮಾಡಿದ್ದಾರೆ. ಅವರಿವರ ಮೇಲೆ ಬರೀ ಆರೋಪ ಮಾಡುವುದೇ ಇವರ ಕೆಲಸವಾಗಿದೆ. ನಮ್ಮ ಸರ್ಕಾರವನ್ನ ರಾಕ್ಷಸ ಮತ್ತು ಅಸಹ್ಯ ಸರ್ಕಾರ ಎಂದರು. ಈಗಿನ ಸರ್ಕಾರ ಯಾವ ಸರ್ಕಾರ?’ ಎಂದು ಪ್ರಶ್ನೆ ಹಾಕಿದರು.

Leave a Reply