ಭಯೋತ್ಪಾದನೆ ಕೇಂದ್ರವಾಗುತ್ತಿವೆ ವಿವಿಗಳು! ಇದಕ್ಕೆ ಸಾಕ್ಷಿ ಜೆಎನ್ ಯು ದಾಳಿ

ಡಿಜಿಟಲ್ ಕನ್ನಡ ಟೀಮ್:

ಇಷ್ಟು ದಿನ ಭಯೋತ್ಪಾದನೆ ವಿಚಾರವಾಗಿ ಬೇರೆ ಬೇರೆ ರಾಷ್ಟ್ರಗಳ ಬಗ್ಗೆ ಮಾತನಾಡುತ್ತಿದ್ದ ನಾವು, ಈಗ ನಮ್ಮ ದೇಶದಲ್ಲೇ ವಿದ್ಯಾ ದೇಗುಲಗಳಲ್ಲಿ ಹುಟ್ಟುಕೊಳ್ಳುತ್ತಿರೋ ಭಯೋತ್ಪಾದನೆ ಬಗ್ಗೆ ಮಾತನಾಡುವ ಸ್ಥಿತಿ ಬಂದಿರೋದು ನಿಜಕ್ಕೂ ದುರ್ದೈವದ ಸಂಗತಿ.

ನಿನ್ನೆ ರಾತ್ರಿ ಜೆಎನ್ ಯು ವಿಶ್ವ ವಿದ್ಯಾಲಯದ ಮೇಲೆ ಮುಸುಕು ಹಾಕಿಕೊಂಡು ಬಂದ ದುಷ್ಕರ್ಮಿಗಳ ದಾಳಿ ನಿಜಕ್ಕೂ ಭಾರತ ಎತ್ತ ಸಾಗುತ್ತಿದೆ ಎಂಬ ಅಂತಕ ಮೂಡಿದೆ. ದೆಹಲಿ ಸರ್ಕಾರ, ಕೇಂದ್ರ ಸರ್ಕಾರ, ದೆಹಲಿ ಪೊಲೀಸ್ ಏನು ಕಿತ್ತು ಗುಡ್ಡೆ ಹಾಕುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ.

ಉಗ್ರರಾದರೂ ದಾಳಿ ಮಾಡಿದ ನಂತರ ಪರಾರಿಯಾಗಲು ಪ್ರಯತ್ನಿಸುತ್ತಾರೆ. ಆದರೆ ನಿನ್ನೆ ನಡೆದ ದಾಳಿ ವಿಡಿಯೋದಲ್ಲಿ ದುಷ್ಕರ್ಮಿಗಳ ರಾಜಾರೋಷ, ಗತ್ತಿನ ವರ್ತನೆ ನೋಡಿದರೆ ಇದರ ಹಿಂದೆ ಪ್ರಬಲರ, ಅಧಿಕಾರ ಹೊಂದಿರುವವರ ಬೆಂಬಲ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ನಿಜಕ್ಕೂ ದೇಶಕ್ಕೆ ಭಯೋತ್ಪಾದನೆಗಿಂತಲೂ ಮಾರಕ ಎಂಬುದರಲ್ಲಿ ಅನುಮಾನವಿಲ್ಲ.

ದಾಳಿಯಲ್ಲಿ ಜೆಎನ್ ಯು ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಐಶ್ ಘೋಷ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಲ್ಲೆಗೊಳಗಾದರು ಎಬಿವಿಪಿ ಸದಸ್ಯರು ಈ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿವಿ ಆವರಣಕ್ಕೆ ರಾಡ್, ಸುತ್ತಿಗೆ, ದೊಣ್ಣೆ ಹಿಡಿದು ರಾಜಾರೋಷವಾಗಿ ನುಗ್ಗಿ ದಾಂದಲೇ ಮಾಡುತ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಬಂದಿದೆ ಎಂದು ಆಘಾತವಾಗುತ್ತದೆ.

ಕೇವಲ ಜೆಎನ್ ಯು ಮಾತ್ರವಲ್ಲ ಭಾರತದ ಬಹುತೇಕ ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಯುವಕರ ಮನಸಲ್ಲಿ ದ್ವೇಷ ತುಂಬುವಂತೆ ಮಾಡಿದೆ. ಇದು ನಿಲ್ಲುವವರೆಗೂ ನಮ್ಮ ಜೆಎನ್ ಯು ಸೇರಿದಂತೆ ಇತರೆ ವಿವಿಗಳು ಇಂತಹ ಬೆಳವಣಿಗೆಗಳಿಂದ ಸುದ್ದಿಯಾಗುವುದು ನಿಲ್ಲುವುದಿಲ್ಲ.

ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಸರ್ಕಾರ ಯಾಕಿಷ್ಟು ಹೀನ ಸ್ಥಿತಿಗೆ ತಲುಪಿದೆ ಎಂಬ ಪ್ರಶ್ನೆ ಇನ್ನಿಲ್ಲದಂತೆ ಕಾಡುತ್ತಿದೆ. ಇನ್ನು ಕೇಂದ್ರ ಸರ್ಕಾರ ಕೂಡ ಈ ಘಟನೆಯ ಜವಾಬ್ದಾರಿ ಹೊರಬೇಕಿದೆ. ದೆಹಲಿ ಕೇಂದ್ರಾಡಳಿತವಾಗಿದ್ದು ಅಲ್ಲಿನ ಪ್ರತಿ ಬೆಳವಣಿಗೆ ಹಿಂದೆ ಅದರ ಪಾತ್ರವೂ ಮಹತ್ವದ್ದಾಗಿದೆ. ಹೀಗಾಗಿ ಅರವಿಂದ್ ಕೇಜ್ರಿವಾಲ್ ಜತೆಗೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರೂ ಕೂಡ ಈ ವಿಚಾರದಲ್ಲಿ ಜವಾಬ್ದಾರಿ ಹೊರಬೇಕಿದೆ.

ಮುಂದಿನ ತಿಂಗಳು ದೆಹಲಿ ಚುನಾವಣೆ ನಡೆಯಲಿದ್ದು ಇದರ ಬೆನ್ನಲ್ಲಿ ಈ ದಾಳಿ ರಾಜಕೀಯ ವೈಷಮ್ಯದ ಅನುಮಾನ ಮೂಡುವಂತೆ ಮಾಡಿದೆ. ಇದು ಕೂಡ ಭಯೋತ್ಪಾದನೆಯೇ ಆಗಿದ್ದು, ದೇಶದೊಳಗೆ ಇಂತಹ ಪರಿಸ್ಥಿತಿ ಅಚ್ಛೇ ದಿನಗಳ ಸೂಚನೆಯನ್ನು ನೀಡುತ್ತಿಲ್ಲ ಎಂಬುದು ಅರ್ಥ ಮಾಡಿಕೊಳ್ಳಬೇಕು.

ನವ ಭಾರತ, ಅಭಿವೃದ್ಧಿ ಭಾರತ, ಅಚ್ಛೇ ದಿನಗಳ ಜಪದಲ್ಲಿರುವ ಕೇಂದ್ರ ಸರ್ಕಾರ ನಿಜಕ್ಕೂ ಈ ಕನಸನ್ನು ಸಾಕಾರಗೊಳಿಸಬೇಕಾದರೆ ಈ ದಾಳಿ ಮಾಡಿದವರ ಎಡೆಮುರಿ ಕಟ್ಟಲೇ ಬೇಕು.

Leave a Reply