ಜಮ್ಮು ಕಾಶ್ಮೀರಕ್ಕೆ 15 ರಾಷ್ಟ್ರಗಳ ಪ್ರತಿನಿಧಿಗಳ ಭೇಟಿ! ಇದರ ಉದ್ದೇಶ ಏನು?

ಡಿಜಿಟಲ್ ಕನ್ನಡ ಟೀಮ್:

ಅಮೆರಿಕ ಸೇರಿದಂತೆ ಒಟ್ಟು 15 ದೇಶಗಳ ಪ್ರತಿನಿಧಿಗಳ ತಂಡ ಇಂದಿನಿಂದ ಎರಡು ದಿನಗಳ ಕಾಲ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಸ್ಥಳೀಯ ಜನರ ಜತೆ ಮಾತುಕತೆ ನಡೆಸಲಿದ್ದಾರೆ. ಜತೆಗೆ ಇಲ್ಲಿನ ಭದ್ರತೆ ಕುರಿತು ಮಾಹಿತಿ ಪಡೆಯಲಿದ್ದಾರೆ.

ಜಮ್ಮು ಕಾಶ್ಮೀರದ ಭದ್ರತೆ ಬಗ್ಗೆ ಬೇರೆ ರಾಷ್ಟ್ರಗಳೇಕೆ ಬಂದು ಪರಿಶೀಲನೆ ನಡೆಸುತ್ತಿವೆ ಎಂದು ಪ್ರಶ್ನೆ ಮೂಡಬಹುದು ಅದಕ್ಕೆ ಉತ್ತರ ಹೀಗಿದೆ…

ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ರ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 05ರಂದು ರದ್ದುಗೊಳಿಸಿತು. ಇದಾದ ನಂತರ ಅನೇಕ ರಾಜಕೀಯ ಮುಖಂಡರನ್ನು ಬಂಧಿಸಲಾಗಿತ್ತು. ಅಲ್ಲದೆ ಈ ಪ್ರದೇಶಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ತಪ್ಪು ಮಾಹಿತಿ ನೀಡಿ ಭಾರತದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ನಿಯೋಗವನ್ನು ಭಾರತ ಆಹ್ವಾನಿಸಿತ್ತು.

ಈ ಭೇಟಿ ವೇಳೆ ನಿಯೋಗವು ಸ್ಥಳೀಯ ಮಟ್ಟದ ನಾಯಕರ ಜತೆ ಮಾತನಾಡಲಿದೆ. ಜತೆಗೆ ಗುಪ್ತಚರ ಇಲಾಖೆ ಹಾಗೂ ಸೇನೆ ಅಧಿಕಾರಿಗಳು ಈ ಪ್ರದೇಶದ ಭದ್ರತೆ ಕುರಿತು ಮಾಹಿತಿ ನೀಡಲಿವೆ.

ವಿದೇಶದ ನಿಯೋಗ ಕಣಿವೆ ರಾಜ್ಯಕ್ಕೆ ಭೇಟಿ ನೀಡುತ್ತಿರೋದು ಇದೇ ಮೊದಲಲ್ಲ. ಕಳೆದ ವರ್ಷ ಆಕ್ಟೊಬರ್ ನಲ್ಲಿ ಐರೋಪ್ಯ ರಾಷ್ಟ್ರಗಳ ಒಕ್ಕೂಟದ 23 ಸಂಸದರ ತಂಡ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿತ್ತು.

ಅಮೆರಿಕ, ಆಫ್ರಿಕಾ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಉಜ್ಬೇಕಿಸ್ತಾನ್, ನೈಜೀರಿಯಾ, ಮೊರಾಕ್ಕೋ, ಗುಯಾನ, ಅರ್ಜೆಂಟೀನಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಫಿಲಿಪ್ಪೀನ್ಸ್ ಹಾಗೂ ಪೇರು ರಾಷ್ಟ್ರಗಳ ಪ್ರತಿನಿಧಿಗಳ ನಿಯೋಗ ಈಗ ಪ್ರವಾಸ ಮಾಡುತ್ತಿದೆ.

ಈ ಪ್ರವಾಸದಿಂದ ಐರೋಪ್ಯ ಒಕ್ಕೂಟ ಪ್ರತಿನಿಧಿಗಳು ಹಿಂದೆ ಸರಿದಿದ್ದಾರೆ. ಐರೋಪ್ಯ ರಾಷ್ಟ್ರಗಳ ಒಕ್ಕೂಟದ ಪ್ರತಿನಿಧಿಗಳ ತಂಡ ಬೇರೆ ದಿನಾಂಕ ಪ್ರತ್ಯೇಕವಾಗಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ನಿರ್ಧರಿಸಿದೆ.

Leave a Reply