ಪೌರತ್ವ ತಿದ್ದುಪಡಿ ಕಾಯ್ದೆಗೆ ಬಿಜೆಪಿಯಿಂದ ಒತ್ತಾಯದ ಬೆಂಬಲ ಯಾಕೆ..!?

ಡಿಜಿಟಲ್ ಕನ್ನಡ ಟೀಮ್:

ಭಾರತ ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಅದರ ವಿರುದ್ಧ ಜನಜಾಗೃತಿ ಆರಂಭಿಸಿರುವ ಬಿಜೆಪಿ ನಾಯಕರು ಮನೆ ಮನೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜೊತೆಗೆ CAA ಬಗ್ಗೆ ಸಹಿ ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾಗಿದೆ. ಇದೇ ರೀತಿ ಬೆಂಗಳೂರಿನ ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕಾಲೇಜು ಬಳಿ ಸಹಿ ಸಂಗ್ರಹಕ್ಕೆ ಮುಂದಾಗಿದ್ರು. ಈ ವೇಳೆ CAA ಪರವಾಗಿ ಸಹಿ ಹಾಕಲು ಒಪ್ಪದ ವಿದ್ಯಾರ್ಥಿಗಳಿಗೆ ಬಿಜೆಪಿ ಮುಖಂಡ ಸುದರ್ಶನ್ ಸೇರಿದಂತೆ ಕೆಲವರು ಧಮ್ಕಿ ಹಾಕುವ ಕೆಲಸ ಮಾಡಿದ್ದಾರೆ.

ಇದ್ರಿಂದ ಕುಪಿತಗೊಂಡ ವಿದ್ಯಾರ್ಥಿಗಳು, ಪ್ರತಿಭಟನೆ ಮಾಡಿದ್ರು. ಈ ವೇಳೆ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದ್ರು‌. ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು ದೆಹಲಿಯ ಜೆಎನ್‌ಯು ಆಗಲು ಬಿಡೋದಿಲ್ಲ. ನಾನು ನಿಮ್ಮೊಂದಿಗೆ ಇದ್ದೇನೆ. ಯಾರು ಭಯಪಡುವ ಅವಶ್ಯಕತೆ ಇಲ್ಲ ಎಂದು ಬೆಂಬಲ ವ್ಯಕ್ತಪಡಿಸಿದ್ರು. ಆ ಬಳಿಕ ರಾಜಕೀಯ ತಿರುವು ಪಡೆದು ವಿದ್ಯಾರ್ಥಿಗಳ ಆಕ್ರೋಶ ತಣಿಸಬೇಕಾದ ಸರ್ಕಾರ, ಪರೋಕ್ಷವಾಗಿ ಬಿಜೆಪಿ ನಾಯಕರ ರಕ್ಷಣೆಗೆ ಧಾವಿಸುವ ಕೆಲಸ ಮಾಡ್ತು.

ಬಿಜೆಪಿ ನಾಯಕರು ನಮ್ಮ ಮೇಲೆ ದೌರ್ಜನ್ಯ ಮಾಡಿದ್ರು ಅನ್ನೋ ಕಾರಣ ಕೊಟ್ಟು ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಅನುಮತಿ ನಿರಾಕರಿಸಲಾಯಿತು. ಆ ಬಳಿಕ ವಿದ್ಯಾರ್ಥಿಗಳು ಡಿಸಿಪಿ ಇಶಾಪಂಥ್ ಅವರನ್ನು ಭೇಟಿ ಮಾಡಿ ಪ್ರತಿಭಟನೆಗೆ ಅವಕಾಶ ಕೊಡಲು ಮನವಿ ಮಾಡಿದ್ರು. ಈ ವೇಳೆ ಕಾಲೇಜು ಆವರಣದೊಳಗೆ ಮಾತ್ರ ಪ್ರತಿಭಟನೆಗೆ ಅನುಮತಿ ಕೊಡಲಾಯಿತು. ಅನಿವಾರ್ಯವಾಗಿ ವಿದ್ಯಾರ್ಥಿಗಳು ಕಾಲೇಜಿನ ಆವರಣದೊಳಗೆ ಮೌನ ಪ್ರತಿಭಟನೆ ನಡೆಸಲು ಮುಂದಾದರು. ನಂತರ ವಿದ್ಯಾರ್ಥಿಗಳ ಪ್ರತಿಭಟನೆ ಸುದ್ದಿ ಮಾಡುತ್ತಿದ್ದ ಮಾಧ್ಯಮಗಳನ್ನು ಜ್ಯೋತಿ ನಿವಾಸ್ ಕಾಲೇಜಿನ ಆಡಳಿತ ಮಂಡಳಿ ಆವರಣ ಪ್ರವೇಶ ಮಾಡಲು ಅವಕಾಶ ಕೊಡದೆ ವಿದ್ಯಾರ್ಥಿನಿಯರ ಮನವೊಲಿಸುವ ಕೆಲಸ ಮಾಡಿ ಯಶಸ್ವಿಯಾಯ್ತು. ನಂತರ ಮಾಧ್ಯಮಗಳ ಜೊತೆ ಮಾತನಾಡದಂತೆ ಕಟ್ಟೆಚ್ಚರ ಕೊಟ್ಟ ಪ್ರಿನ್ಸಿಪಾಲ್ ಹಾಗು ಉಳಿದ ಉಪನ್ಯಾಸಕರು, ನೇರವಾಗಿ ಮನೆಗಳಿಗೆ ತೆರಳುವಂತೆ ಸೂಚನೆ ಕೊಟ್ಟು ಹೊರಗೆ ಕಳುಹಿಸಿದ್ರು. ಈ ಮೂಲಕ ವಿದ್ಯಾರ್ಥಿನಿಯರ ಹೋರಾಟವನ್ನು ಸರ್ಕಾರ ಹೊಸಕಿ ಹಾಕುವ ಕೆಲಸ ಮಾಡಿತು. ಕಾಲೇಜಿನ ಹೊರಗೆ ಬಂದು ಗುಂಪುಗೂಡ್ತಿದ್ದ ವಿದ್ಯಾರ್ಥಿನಿಯರನ್ನು ಪೋಲೀಸರು ಮತ್ತು ಕಾಲೇಜು ಸಿಬ್ಬಂದಿ ಚದುರಿಸುವ ಕೆಲಸ ಮಾಡಿದ್ರು.

ಇನ್ನು ಜ್ಯೋತಿ ನಿವಾಸ ಕಾಲೇಜು ವಿದ್ಯಾರ್ಥಿಗಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಪರ ಸಹಿ ಹಾಕಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿರುವ ವಿಚಾರದ ಬಗ್ಗೆ ಡಿಸಿಎಂ ಅಶ್ವತ್ಥ ನಾರಾಯಣ ಸಭೆ ನಡೆಸಿದ್ರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಡಿಸಿಎಂ ಅಶ್ವತ್ಥ ನಾರಾಯಣ ಅವರ ಕಚೇರಿಗೆ ಆಗಮಿಸಿದ ಬಿಜೆಪಿ ನಿಯೋಗ, ನಾವು ಒತ್ತಾಯ ಪೂರ್ವಕವಾಗಿ ಸಹಿ ಹಾಕುವಂತೆ ಒತ್ತಾಯ ಮಾಡಿಲ್ಲ ಎಂದು ಡಿಸಿಎಂ ಭೇಟಿವೇಳೆ ತಿಳಿಸಿದ್ರು. ಈ ನಿಯೋಗದ ನೇತೃತ್ವವನ್ನು ಸ್ಥಳೀಯ ಬಿಜೆಪಿ ನಾಯಕ ಗೋಪಾಲ ರೆಡ್ಡಿ ವಹಿಸಿದ್ರು. ಪ್ರಕರಣದಲ್ಲಿ ಮಧ್ಯ ಪ್ರವೇಶ ಮಾಡುವಂತೆ ಮನವಿ ಸಲ್ಲಿಸಿದ್ರು. ಬಳಿಕ ಜ್ಯೋತಿ ನಿವಾಸ ಕಾಲೇಜಿನಲ್ಲಿ ನಡೆದ ಘಟನೆ ವಿಚಾರದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿದ್ರು. ಪೌರತ್ವ ತಿದ್ದುಪಡಿ ಮಾಡುವ ವಿಚಾರದ ಬಗ್ಗೆ ಜನಾಂದೋಲನ ಮಾಡುವುದನ್ನು ನಮ್ಮ ಕಾರ್ಯಕರ್ತರ ಉದ್ದೇಶ. ಈ ವಿಚಾರವನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ಕಾಲೇಜಿನ ಹೊರಗಡೆ ಮಾಡ್ತಿದ್ದ ಜನಾಂದೋಲನ. ಇದನ್ನು ವಿರೋಧಿಸುವುದರಲ್ಲಿ ಏನಿದೆ. ಇದನ್ನು ಬೇರೆ ರೀತಿಯೇ ತಿರುಚುತ್ತಾ ಇದ್ದಾರೆ. ಇದನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ ಎಂದರು.

ಆದ್ರೆ ಇಲ್ಲಿ ಅಂತಿಮವಾಗಿ ಕಾಡುವ ಏಕೈಕ ಪ್ರಶ್ನೆ ಅಂದ್ರೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ದೇಶಾದ್ಯಂತ ಹೋರಾಟ ನಡೀತು. ಇದೀಗ ಹೋರಾಟದ ಸಮಯವೂ ಮುಕ್ತಾಯವಾಗಿ ಎಲ್ಲರು ತೆಪ್ಪಗಾದರು. ಸರ್ಕಾರ ಒಂದು ಕಾನೂನು ಮಾಡಿದೆ ಎಂದ ಮೇಲೆ ಎಲ್ಲಾ ನಾಗರಿಕರು ಪಾಲಿಸಲೇ ಬೇಕು. ವಿರೋಧಿಸುವ ಜನರನ್ನು ಕಾನೂನು ಮೂಲಕ ಸರ್ಕಾರವೇ ನಿಯಂತ್ರಣ ಮಾಡುತ್ತದೆ. ಆದ್ರೆ ಬಿಜೆಪಿ ಕಾರ್ಯಕರ್ತರು ಸರ್ಕಾರ ಹಾಗು ಸಾರ್ವಜನಿಕರ ನಡುವೆ ಮಧ್ಯಪ್ರವೇಶ ಮಾಡುತ್ತಿರುವ ಉದ್ದೇಶವೇನು..? ಒಂದು ವೇಳೆ ಜನಜಾಗೃತಿ ಮಾಡುತ್ತಿದ್ದಾರೆ ಎಂದುಕೊಳ್ಳೋಣ, ಆದ್ರೆ ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿ ಸಹಿ ಮಾಡಿಸಿಕೊಂಡರೆ ಕಾಯ್ದೆಗೆ ಹೊಸದಾಗಿ ಏನಾದರೂ ಬಲ ಬಂದೀತೇ..? ಯಾವುದೇ ಪ್ರಯೋಜನ ಇಲ್ಲವೆಂದ ಮೇಲೆ ಬಿಜೆಪಿ ಕಾರ್ಯಕರ್ತರು ಮಾಡುತ್ತಿರುವುದಾದರೂ ಯಾಕೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಆ ಪ್ರಶ್ನೆಗೆ ಉತ್ತರ, ರಾಜ್ಯ ಹಾಗು ದೇಶದಲ್ಲಿ ಆರ್ಥಿಕ ಸಂಕಷ್ಟದ ವಿಚಾರಗಳು ಮುನ್ನಲೆಗೆ ಬರಬಾರದು.

ಎಲ್ಲರ ದೃಷ್ಟಿಕೋನವೂ ಬೇರೆ ಬೇರೆ ವಿಚಾರಗಳ ಮೇಲಿರುವ ಹಾಗೆ ನೋಡಿಕೊಳ್ಳಬೇಕು ಎನ್ನುವ ಉದ್ದೇಶ ಎನ್ನಲಾಗ್ತಿದೆ. ಆದ್ರೆ ಬಿಜೆಪಿ ಮಾಡ್ತಿರೋದು ಸರಿನೋ ತಪ್ಪೋ ಎಂದು ನಿರ್ಧರಿಸೋದು ಮಾತ್ರ ಜನರು. ಸಮಯ ಬಂದಾಗ ಮತದಾರನೇ ಬಿಜೆಪಿ ಬಗ್ಗೆ ನಿರ್ಧಾರ ಮಾಡಲಿದ್ದಾರೆ ಎನ್ನುವ ಮಾತುಗಳೂ ವಿರೋಧ ಪಕ್ಷದ ನಾಯಕರ ಮಾತಿನಲ್ಲೇ ಅಡಕವಾಗಿದೆ.

Leave a Reply