ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಕೆಪಿಸಿಸಿ ಅಧ್ಯಕ್ಷ ಸ್ಥಾನವಾಗಲಿ, ವಿರೋಧ ಪಕ್ಷದ ನಾಯಕ ಸ್ಥಾನ ಆಗಲಿ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ತಮ್ಮ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು ಹೇಳಿದ್ದಿಷ್ಟು…

‘ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಂಗಡಿಯಲ್ಲಿ ಸಿಗುವ ವಸ್ತು ಅಲ್ಲ. ವಿರೋಧ ಪಕ್ಷದ ನಾಯಕ ಸ್ಥಾನ ಸೇರಿದಂತೆ ಇತರೆ ಹುದ್ದೆಗಳಿಗೆ ಅದರದೇ ಆದ ಕಿಮ್ಮತ್ತು ಇರುತ್ತವೆ. ಆ ಸ್ಥಾನದಲ್ಲಿ ಯಾರು ಕೂರಬೇಕು? ಎಂದು ಲೆಕ್ಕಾಚಾರ ಮಾಡಿ ಆಯ್ಕೆ ಮಾಡಲಾಗುತ್ತದೆ.

ನೀವು ನನ್ನ ಹೆಸರು ಹೇಳುತ್ತಿದ್ದೀರ. ಇನ್ನು ಮುಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಬಳಿ ಪ್ರಶ್ನೆ ಕೇಳಬೇಡಿ. ಪರಮೇಶ್ವರ್ ಅವರ ಮನೆಯಲ್ಲಿ ನಡೆದ ಸಭೆ ಕುರಿತು ಅವರನ್ನೇ ಕೇಳಿ. ನನಗೆ ಏನು ಗೊತ್ತಿಲ್ಲ.

ನಾನು ದಿನಾ ಯಾರನ್ನು ಭೇಟಿ ಮಾಡುತ್ತೀನಿ ಎಂಬುದು ನನಗೆ ಬಿಟ್ಟದ್ದು. ಸಿದ್ದರಾಮಯ್ಯ ಮಾತ್ರ ಅಲ್ಲ, ಖರ್ಗೆ ಅವರು, ಪರಮೇಶ್ವರ್ ಅವರನ್ನು ಭೇಟಿ ಮಾಡುತ್ತೇನೆ. ಇಲ್ಲಿ ಬರುವ ನೂರಾರು ಜನರನ್ನು ಭೇಟಿ ಮಾಡುತ್ತೇನೆ. ನಿಮ್ಮನ್ನು ಭೇಟಿ ಮಾಡಿದ್ದೇನೆ. ನಮ್ಮಲ್ಲಿರುವ ಎಲ್ಲ ನಾಯಕರೂ ಪಕ್ಷಕ್ಕೆ ನಿಷ್ಠಾವಂತರೆ. ನಿಷ್ಠೆ ಇಲ್ಲದವರು ಯಾರು ಇಲ್ಲ.

ಇನ್ನು ಇಡಿ ನೋಟೀಸ್ ವಿಚಾರವಾಗಿ ಮಾಧ್ಯಮಗಳು ಸುಳ್ಳು ವರದಿ ಪ್ರಕಟಿಸಿವೆ. ನಾನು ಕೆಲಸದ ನಿಮಿತ್ತ ಇಡಿ ಕಚೇರಿಗೆ ಹೋಗಿದ್ದಾಗ ಅವರೇ ಇಡಿಯಿಂದ ನೋಟೀಸ್ ಬಂದಿದೆಯಾ ಅಂತಾ ನನ್ನನ್ನು ಕೇಳುತ್ತಾರೆ. ಮಾಧ್ಯಮಗಳಿಗೆ ಒಂದು ಘನತೆ ಇದೆ ಅದಕ್ಕೆ ತಕ್ಕ ರೀತಿಯಲ್ಲಿ ಕೆಲಸ ಮಾಡಿ. ನೋಟೀಸ್ ಬಂದಿದೆ ಅಂತಾ ಸುದ್ದಿ ಹಾಕುವುದರ ಜತೆಗೆ ನೋಟೀಸ್ ಪ್ರತಿಯನ್ನು ಹಾಕಿ. ಮೂಲಗಳ ಮಾಹಿತಿ ಆದರೆ ಆ ಮೂಲದಿಂದಲೇ ನೋಟೀಸ್ ಪ್ರತಿ ಪಡೆದುಕೊಳ್ಳಿ.

ಈಗಾಗಲೇ ಎಲ್ಲ ಸಂಕಟ ಅನುಭವಿಸಿ ಆಗಿದೆ. ಇನ್ನು ನೂರು ಸಂಕಟ ಬಂದರೂ ಎದುರಿಸಲು ಸಿದ್ಧನಾಗಿದ್ದೇನೆ. ಯಡಿಯೂರಪ್ಪನವರು ಸಿಬಿಐಗೆ ನೀಡಿದ್ದಾರೆ. ಇಲ್ಲಿ ಎಸಿಬಿ, ಲೋಕಾಯುಕ್ತ ಸಂಸ್ಥೆ ಇದ್ದರು ಅಲ್ಲಿಗೆ ಕಳುಹಿಸಿದ್ದಾರೆ. ಅವರ ಕರ್ತವ್ಯ ಅವರು ಮಾಡಿದಿದ್ದಾರೆ. ಸಿಬಿಐ ನವರು ಬರಲಿ ಅಂತಾ ನಾನು ಮನೆ ಬಾಗಿಲು ತೆರೆದುಕೊಂಡು ಕಾಯುತ್ತಿದ್ದೇನೆ. ಸುಪ್ರೀಂ ಕೋರ್ಟ್ ನಲ್ಲಿ ಡಿನೋಟಿಫಿಕೇಷನ್ ಪ್ರಕರಣ ವಜಾ ಆಗಿದೆ. ಅದರಲ್ಲಿ ನನಗೆ ಯಾವ ಸಂಕಟ ಇದೆ.

ನಾನು ಯಾವುದೇ ಸರ್ಕಾರಿ ಜಮೀನು ತೆಗೆದುಕೊಂಡಿಲ್ಲ. ಸರ್ಕಾರ ಬಿಟ್ಟ ಜಮೀನು ತೆಗೆದುಕೊಂಡಿದ್ದೇನೆ. ಬೇರೆಯವರು ಯಾರು ಡಿನೋಟಿಫಿಕೇಷನ್ ಮಾಡಿದ್ದಾರೆ, ಅವರದ್ದು ನೀವು ಹಾಕುವುದಿಲ್ಲ. ಅವರ ಪಟ್ಟಿ ನಾನು ತೆಗಿಲಾ? ನಿಮಗೂ ಅವರ ಬಗ್ಗೆ ಗೊತ್ತಿದೆ. ನೀವೂ ಒಬ್ಬರ ಪರ ಆಡುತ್ತಿದ್ದೀರಿ. ತೆಗೆಯುವ ಸಮಯ ಬಂದಾಗ ತೆಗೆಯುತ್ತೀನಿ. ಅದು ಯಾರು ಎಂಬುದು ಈಗ ಬೇಡ. ನಿಮ್ಮ ಮುಂದೆ ಹೇಳಿದರೆ ಬೇಗ ಮರೆತು ಹೋಗುತ್ತೆ. ಅಸೆಂಬ್ಲಿಯಲ್ಲಿ ಮಾತಾಡುತ್ತೇನೆ. ಎಲ್ಲವೂ ದಾಖಲಾಗಬೇಕು.’

ನಂತರ ಶಿವಕುಮಾರ್ ಅವರು ರಾಜ್ಯ ರಾಜಕೀಯಕ್ಕೆ ಬರುತ್ತಾರಾ ಅಥವಾ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸದ್ಯ ನಾನು ಕನಕಪುರದಲ್ಲಿ ಕಲ್ಲು ಹೊಡೆದುಕೊಂಡು, ರೇಷ್ಮೆ, ಕಡಲೆಕಾಯಿ ಬೆಳೆದುಕೊಂಡು ಇರ್ತೀನಿ’ ಎಂದು ಚಟಾಕಿ ಹಾರಿಸಿದರು.

Leave a Reply