‘ಪಕ್ಕೆಲುಬು’ ಉಚ್ಛರಿಸಲು ಆ ಬಾಲಕ ಪರದಾಡಿದ್ದೇಕೆ? ನಮ್ಮೊಳಗೂ ಇಂಥಾ ಕಥೆಗಳಿರಬಹುದಲ್ಲವೇ?

ಸೋಮಶೇಖರ ಪಿ. ಭದ್ರಾವತಿ

‘ಪಕ್ಕೆಲುಬು’ ಎಂಬ ಪದ ಉಚ್ಛರಿಸಲು ಬಾಲಕನ ಪರದಾಟ, ಆತನಿಗೆ ಕಲಿಸಲು ನಿರಂತರ ಪ್ರಯತ್ನ ಪಟ್ಟು ಕೋಪ ನೆತ್ತಿಗೇರಿಸಿಕೊಂಡ ಶಿಕ್ಷಕಿ…

ಈ ವಿಡಿಯೋ ನೋಡಿ ನನಗೆ ನನ್ನ ಬಾಲ್ಯದ ದಿನ ನೆನಪಾಯ್ತು. ಓದುವ ವಿಚಾರದಲ್ಲಿ ನಾನು ಹೊಡೆತ ತಿನ್ನದೇ ಇರುವ ದಿನಗಳು ನೆನಪೇ ಇಲ್ಲ. ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಗುರುಗಳು ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ಕೈಬೆರಳಿಡಿದು ಒಂದೊಂದೇ ಅಕ್ಷರ ಹೇಳಿಕೊಟ್ಟರೂ ನಂತರ ಅದನ್ನು ಕೂಡಿಸಿ ಪದವಾಗಿ ಹೇಳುವಾಗ ನಾನು ತಪ್ಪು ಮಾಡುತ್ತಿದ್ದೆ.

‘ಈ’ ಅಕ್ಷರ ಬರೆಯುವುದನ್ನು ಕಲಿಸಲು ನನ್ನ ತಂದೆ ಪಟ್ಟ ಪಾಡು ಅವರಿಗೇ ಗೊತ್ತು. ಇನ್ನು ‘ಲ’ ಅಕ್ಷರ ಉಚ್ಛಾರಣೆಯನ್ನು ‘ರ’ ಎಂದು ಹೇಳುತ್ತಿದ್ದೆ. ಶಾಲೆಯಲ್ಲಿ ಸಹಪಾಠಿಗಳು ಗೇಲಿ ಮಾಡಿದ್ದು ಉಂಟು.

ಆ ದಿನಗಳನ್ನು ನೆನೆಸಿಕೊಂಡಾಗ ನನಗೆ ಏಕಾಗ್ರತೆ ತಂದು ಕೊಳ್ಳಲು ಪರದಾಡುತ್ತಿದ್ದೆ ಎಂದು ಈಗ ಗೊತ್ತಾಗುತ್ತದೆ. ಪೋಷಕರು ಹಾಗೂ ಶಿಕ್ಷಕರು ಹೇಳುತ್ತಿದ್ದ ಪಾಠಗಳು ನನ್ನ ಮೆದುಳಿನಲ್ಲಿ ಗಟ್ಟಿಯಾಗಿ ನಿಲ್ಲುತ್ತಿರಲಿಲ್ಲ.

ಈ ಬಾಲಕನ ವಿಡಿಯೋ ನೋಡಿ ಆ ಬಾಲಕನಲ್ಲಿ ನನ್ನನು ನಾ ಕಂಡೆ. ನಂತರ ತಿಳಿದಿದ್ದು ಇದು ಮಕ್ಕಳಲ್ಲಿ ಕಲಿಕೆ ವಿಚಾರದಲ್ಲಿನ ಸಮಸ್ಯೆ ಅಂತಾ.

ಈ ಸಮಸ್ಯೆಯನ್ನು ವೈಜ್ಞಾನಿಕ ಭಾಷೆಯಲ್ಲಿ DYSLEXIA ಎಂದು ಕರೆಯುತ್ತಾರೆ. ಈ ಸಮಸ್ಯೆ ಇದ್ದರೆ ಬೇರೆಯವರು ಹೇಳುವ ಮಾತಿನ ಗ್ರಹಿಕೆ ಮಂದವಾಗಿರುತ್ತದೆ. ಇನ್ನು ಅಕ್ಷರಗಳು ಹಾಗೂ ಅವುಗಳ ಶಬ್ದವನ್ನು ಗುರುತಿಸಲು ಕಷ್ಟವಾಗುತ್ತದೆ. ಮೆದುಳಿನಲ್ಲಿ ಭಾಷೆಯ ಪ್ರಕ್ರಿಯೆ ನಡೆಯುವ ಜಾಗದಲ್ಲಿ ತೊಂದರೆ ಇದ್ದಾಗ ಮಕ್ಕಳಲ್ಲಿ ಈ ಸಮಸ್ಯೆ ಸಾಮಾನ್ಯ. ಇಂತಹ ಮಕ್ಕಳಲ್ಲಿ ಬಹುತೇಕರು ಸಾಮಾನ್ಯ ಬುದ್ಧಿಮಟ್ಟ ಹೊಂದಿದ್ದು ಶಾಲಾ ಕಲಿಕೆಯನ್ನು ತಡವಾದರೂ ಪೂರ್ಣಗೊಳಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಇತರರಿಂದ ಸಿಗುವ ಆತ್ಮಸ್ಥೈರ್ಯ, ಪ್ರೋತ್ಸಾಹ ಇವರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಹೀಗಾಗಿ ಪೋಷಕರು ಹಾಗೂ ಶಿಕ್ಷಕರು ಇಂತಹ ವಿದ್ಯಾರ್ಥಿಗಳನ್ನು ನಿಭಾಯಿಸುವಾಗ ಹೆಚ್ಚಿನ ತಿಳುವಳಿಕೆ ಸಹನೆ, ಕಾಳಜಿ ವಹಿಸಿದರೆ ಎಲ್ಲವೂ ಸರಿ ಹೋಗುತ್ತದೆ.

ಈ ಪ್ರಕರಣದಲ್ಲಿ ಸಚಿವ ಸುರೇಶ್ ಕುಮಾರ್ ಅವರ ನಡೆ ಸ್ವಾಗತಾರ್ಹ. ಮಕ್ಕಳ ವಿಚಾರದಲ್ಲಿ ಈ ಸೂಕ್ಷ್ಮತೆಯನ್ನು ತೋರಿದ ಅವರಿಗೆ ಅಭಿನಂದನೆಗಳು.

Leave a Reply