ಇರಾಕ್ ಮೇಲೆ ಮತ್ತೆರಡು ರಾಕೆಟ್ ದಾಳಿ! ಕಣ್ಣು ಮುಚ್ಚಬೇಡಿ ಎಂದು ಅಮೆರಿಕ ಸೇನೆಗೆ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್:

ಇರಾಕ್ ನ ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ಸೇನೆ ಕ್ಷಿಪಣಿ ದಾಳಿ ನಡೆದ 24 ಗಂಟೆಗಳ ಒಳಗಾಗಿ ಇಲ್ಲಿನ ಗ್ರೀನ್ ಜೋನ್ ಮೇಲೆ ಮತ್ತೆರಡು ರಾಕೆಟ್ ದಾಳಿ ನಡೆದಿದೆ.

ಈ ಪ್ರದೇಶದಲ್ಲಿ ಅಮೆರಿಕ ರಾಯಭಾರಿ ಕಚೇರಿ ಇದ್ದು ಬುಧವಾರ ತಡರಾತ್ರಿ ಈ ಪ್ರದೇಶದ ಮೇಲೆ ಎರಡು ರಾಕೆಟ್ ಹಾರಿಸಿ ದಾಳಿ ಮಾಡಲಾಗಿದೆ. ಈ ದಾಳಿಯನ್ನು ಹಶೆದ್ ಅಲ್ ಶಾಬಿ ಸಂಘಟನೆ ನಡೆಸಿದೆ.

ಕಳೆದ ವಾರ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್ ಸೇನಾ ಜೆನರಲ್ ಖಾಸಿಂ ಸೊಲೈಮನಿ ಹಾಗೂ ಇರಾಕಿ ಕಮಾಂಡರ್ ಅಬು ಮೆಹದಿ ಅಲ್ ಮಹಾಂದಿ ಸಾವಿಗೆ ಪ್ರತಿಕಾರವಾಗಿ ಈ ದಾಳಿಗಳು ನಡೆಯುತ್ತಿವೆ.

ಅಬು ಮೆಹದಿ, ಇರಾಕ್ ನಲ್ಲಿರುವ ಹಶೆದ್ ಅಲ್ ಶಾಬಿ ಪ್ಯಾರಾಮಿಲಿಟರಿ ಮುಖ್ಯಸ್ಥನಾಗಿದ್ದು, ಈ ಸಂಘಟನೆ ಇರಾನ್ ಜತೆ ಸಂಬಂಧ ಹೊಂದಿತ್ತು. ಈ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ಯಾರಾಮಿಲಿಟರಿಯ ಪ್ರಮುಖ ನಾಯಕ ಹಾಗೂ ಅಮೆರಿಕದ ಭಯೋತ್ಪಾದಕ ಪಟ್ಟಿಯಲ್ಲಿರುವ ಖಾಸಿ ಅಲ್ ಖಜಾಲಿ, ‘ಈ ದಾಳಿ ಇರಾನ್ ನಡೆಸಿರುವ ದಾಳಿಗಿಂತ ಕಡಿಮೆ ಇಲ್ಲ’ ಎಂದಿದ್ದಾನೆ.

ಇನ್ನು ಅಮೆರಿಕ ಸೇನೆಗೆ ಎಚ್ಚರಿಕೆ ರವಾನಿಸಿರುವ ಹಶೆದ್ ಸಂಘಟನೆ ಮತ್ತೊಬ್ಬ ನಾಯಕ ಹರಕತ್ ಅಲ್ ನೌಜಬಾ ಈ ದಾಳಿ ಅಬು ಮೆಹದಿ ಹತ್ಯೆಗೆ ಪ್ರತೀಕಾರವಾಗಿದೆ ಎಂದಿದ್ದಾನೆ. ಅಲ್ಲದೇ, ‘ಅಮೆರಿಕ ಸೈನಿಕರೆ ನೀವು ಒಂದು ಕ್ಷಣವೂ ಕಣ್ಣು ಮುಚ್ಚಬೇಡಿ. ನಿಮ್ಮ ಸೇನೆಯ ಕಡೇ ಸೈನಿಕ ಸಾಯುವವರೆಗೂ ನಮ್ಮ ಕಡೆಯಿಂದ ಅಬು ಮೆಹದಿ ಸಾವಿಗೆ ಪ್ರತೀಕಾರದ ದಾಳಿ ನಡೆಯಲಿದೆ’ ಎಂದು ಎಚ್ಚರಿಸಿದ್ದಾನೆ

Leave a Reply