ಕುಮಾರಸ್ವಾಮಿ ಸಿಡಿಸಿದ ಗಲಭೆ ಸಿಡಿಗೆ ಕಮಲ ದಳ ಸಿಟ್ಟು ಸಿಡುಕು..!

ಡಿಜಿಟಲ್ ಕನ್ನಡ ಟೀಮ್:

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಗಲಭೆ ಆಗಿ ಪೊಲೀಸರು ಗುಂಡು ಹಾರಿಸಿದ್ರು. ಇಬ್ಬರು ಮುಸ್ಲಿಮ್ ಸಮುದಾಯದ ಯುವಕರು ಸಾವನ್ನಪ್ಪಿದ್ರು. ಈಗ ಮತ್ತೆ ಗಲಭೆ ವಿಚಾರ ರಾಜ್ಯ ರಾಜಕಾರಣದಲ್ಲಿ ವಾಕ್ಸಮರಕ್ಕೆ ವಸ್ತುವಾಗಿದೆ. ಇದಕ್ಕೆ ಕಾರಣ ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿ!

ಹೌದು, ಗಲಭೆಯಲ್ಲಿ ಪೊಲೀಸರ ಗೋಲಿಬಾರ್ ಗೆ ಇಬ್ಬರು ಯುವಕರು ಬಲಿಯಾದ ಬಳಿಕ ರಾಜಕೀಯ ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಆಗ ಪೊಲೀಸರು ಗಲಭೆ ವಿಡಿಯೋ ಬಿಡುಗಡೆ ಮಾಡಿ ಯುವಕರು ಕಲ್ಲು ತೂರಾಟ ಮಾಡುತ್ತಿದ್ದರು ಹೀಗಾಗಿ ಗುಂಡು ಹಾರಿಸಿದ್ದಾಗಿ ತಿಳಿಸಿದ್ದರು. ಈಗ ಕುಮಾರಸ್ವಾಮಿ ಪೊಲೀಸರ ದೌರ್ಜನ್ಯ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಮಂಗಳೂರು ಗಲಭೆಯಲ್ಲಿ ಯಾವುದೇ ಪೊಲೀಸ್ ಗಾಯಗೊಂಡಿಲ್ಲ. ಲಾಠಿ ಚಾರ್ಜ್ ವೇಳೆ, ವಿದ್ಯಾರ್ಥಿಗೆ ಮತ್ತೊಬ್ಬ ಪೊಲೀಸ್ ಹೊಡೆಯೋ ವೇಳೆ ಇನ್ನೊಬ್ಬ ಪೊಲೀಸ್‌ಗೆ ಬಿದ್ದು ಏಟಾಗಿದೆ. ಮತ್ತೊಬ್ಬ ಪೊಲೀಸ್‌ ಮಂಡಿಗೆ ಗಾಯವಾಗಿದೆ. ಇದು ಬಿಟ್ಟು ಬೇರಾವ ಪೊಲೀಸ್‌ಗೂ ಗಾಯವಾಗಿಲ್ಲ. ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ಬೇಡ. ಸದನ ಸಮಿತಿ ರಚಿಸಿ ನಮ್ಮನ್ನೂ ಸೇರಿಸಿ.‌ ಎಲ್ಲ ಸೇರಿ ಹೋಗೋಣ. ಸರ್ಕಾರ ಮೆಚ್ಚಿಸಲು ಏನಾದ್ರೂ ಮಾಡೋ ಅಧಿಕಾರಿಗಳಿದ್ದಾರೆ. ನ್ಯಾ. ಗೋಪಾಲ ಗೌಡರಂತ‌ ಜಸ್ಟೀಸ್ ಹೋದಾಗಲೂ ಪೊಲೀಸರು ನಡೆದುಕೊಂಡ ರೀತಿ ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕುಮಾರಸ್ವಾಮಿ ಸಿಡಿ ಬಿಡುಗಡೆ ಮಾಡುತ್ತಿದ್ದಂತೆ ಬಿಜೆಪಿ ನಾಯಕರು ಹಾಗೂ ಪ್ರತಿಪಕ್ಷ ನಾಯಕರು ಬೆಂಕಿ ಕಾರುತ್ತಿದ್ದು, ಅವರ ಟೀಕಾ ಪ್ರಹಾರ ಹೀಗಿದೆ…

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ:
ಮಂಗಳೂರು ಗಲಭೆ ಸಂಬಂಧ ಎಚ್‌ಡಿ‌ಕೆ ಸಿಡಿ ಬಿಡುಗಡೆ ಮಾಡಿದ್ದಾರೆ. ನಾನು ಮಂಗಳೂರಿಗೆ ಹೋಗಿದ್ದಾಗಲೇ ಹೇಳಿದ್ದೆ. ಪೊಲೀಸರು ಸೃಷ್ಠಿ ಮಾಡಿ ಅಮಾಯಕರ ಮೇಲೆ ಕೇಸ್ ಹಾಕಿದ್ದಾರೆ. ಯಾವುದೇ ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿಲ್ಲ. ಎಲ್ಲಾ ಸೃಷ್ಠಿ ಮಾಡಿರೋದು. ಪೊಲೀಸಿನವರು ತಪ್ಪು ಮಾಡಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಇದನ್ನು ಮಾಡಿದ್ದಾರೆ.

ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ:
ಕುಮಾರಸ್ವಾಮಿ ಹತ್ರ ಏನ್ ಸಿಡಿ ಇದ್ರೂ ವಿಚಾರಣೆ ನಡೆಯುತ್ತಿರುವ ಆಯೋಗದ ಮುಂದೆ ಕೊಡಲಿ. ಸಾಕ್ಷಿ ಕೊಟ್ಟರೆ ವಿಚಾರಣೆ ನಡೆಯುತ್ತೆ, ಸಿಡಿ ಪರಿಶೀಲಿಸ್ತಾರೆ.

ಬಸವರಾಜ ಬೊಮ್ಮಾಯಿ, ಗೃಹ ಸಚಿವ:
ಕುಮಾರಸ್ವಾಮಿ ಬೇಜವಾಬ್ದಾರಿ ನಡವಳಿಕೆಯನ್ನು ತೋರಿದ್ದಾರೆ. ಪೊಲೀಸರು‌ ಗಲಭೆ ಮಾಡಲ್ಲ, ಗಲಭೆ ನಿಯಂತ್ರಿಸ್ತಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಇದೇ ಪೋಲಿಸರಿದ್ರು, ಪೊಲೀಸರನ್ನು ತಪ್ಪಿತಸ್ಥರಾಗಿ ಮಾಡೋದು ಸರಿಯಿಲ್ಲ. ಕುಮಾರಸ್ವಾಮಿ ವಿಡಿಯೋ ಸಮರ್ಪಕವಾಗಿಲ್ಲ, ಸರಿಯಿಲ್ಲ. ವಿಡಿಯೋದಲ್ಲಿ ಹಿಂದೆ ಇರೋದು ಮುಂದೆ, ಮುಂದೆ ಇರೋದು ಹಿಂದೆ ಹಾಕಿ ತೋರಿಸಿದ್ದಾರೆ. ಜನ ಸೇರಿದಾಗ, ಕಲ್ಲು ಎಸೆದಾಗ ಲಾಠಿ ಚಾರ್ಜ್ ಆಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ಆಗಿದೆ. ಈಗ ಕುಮಾರಸ್ವಾಮಿ ಘಟನೆಯನ್ನು ತಿರುಚಿ ಹೇಳಲು ಮುಂದಾಗಿದ್ದಾರೆ. ಶಾಂತವಾಗಿರುವ ರಾಜ್ಯವನ್ನು ಕೆಣಕುವ ಕೆಲಸವನ್ನು ಕುಮಾರಸ್ವಾಮಿ ಮಾಡಿದ್ದಾರೆ.

ಸಿ.ಟಿ ರವಿ, ಸಚಿವ:
ಯಾವ ಹಿನ್ನೆಲೆಯಲ್ಲಿ ಮಂಗಳೂರು ಘಟನೆ ಹೇಳಿದ್ದಾರೋ ಗೊತ್ತಿಲ್ಲ ಎರಡು ಅವಧಿಯಲ್ಲಿ ಸಿಎಂ ಆದವರು ಕುಮಾರಸ್ವಾಮಿ. ಬಿಜೆಪಿ, ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಪೊಲೀಸರು ಅಲ್ಲ ಅವರು ಕರ್ನಾಟಕ ರಾಜ್ಯದ ಪೊಲೀಸರು. ಕಟ್ ಅಂಟ್ ಪೇಸ್ಟ್ ವಿಡಿಯೋ ಹಿಡಿದುಕೊಂಡು ನಿರ್ಣಯಕ್ಕೆ ಬರುವುದು ಸರಿಯಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಜಿ ಸಿಎಂ ಹೆಚ್‌ಡಿಕೆ ಮಾಡಬಾರದು. ರಾಶಿ ರಾಶಿ ಕಲ್ಲು ತಂದು ಎಸೆದವರು, ಬೀದಿಗೆ ಬರುವಂತೆ ಪ್ರಚೋದನೆ ಮಾಡಿದವರು ಪೊಲೀಸರಾ..? ಇದರ ಬಗ್ಗೆ ಕುಮಾರಸ್ವಾಮಿ ಮಾತಾಡಿದರೆ ಸೆಕ್ಯುಲರ್ ಜೆಡಿಎಸ್ ಅನ್ನಬಹುದು. ಇಲ್ಲದೇ ಹೋದರೆ ಫಾದರ್ ಅಂಡ್ ಸನ್ ಪಾರ್ಟಿಯಾಗಲಿದೆ. ಕಲ್ಲು ಹೊಡೆದವರು ಪೊಲೀಸರು ಅಂದರೆ ಜನ ಏನಂದುಕೊಳ್ಳುತ್ತಾರೆ?

ಸಿ.ಎಂ ಇಬ್ರಾಹಿಂ, ಪರಿಷತ್ ಸದಸ್ಯ:
ಮಂಗಳೂರು ಮಾತ್ರವಲ್ಲದೇ ಬೇರೆ ಬೇರೆ ಕಡೆ ಪ್ರತಿಭಟನೆ ನಡೆದಿದೆ. ಆದ್ರೆ ಮಂಗಳೂರಿನಲ್ಲೇ ಯಾಕೆ ಈ ಗೋಲಿಬಾರ್ ನಡೀತು. ಈ ಬಗ್ಗೆ ನ್ಯಾಯಾಂಗ ತನಿಖೆ ಆಗ್ಬೇಕು. ಮಂಗಳೂರಿನಲ್ಲಿ ಸರ್ಕಾರಕ್ಕೆ ಪ್ಯಾರಲರ್ ಆಡಳಿತ ಇದೆ. ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರೋ ಕೆಲಸ ಆಗ್ತಿದೆ. ಈ ಘಟನೆಗೆ ಕಾರಣ ಏನು, ಯಾರು ಅನ್ನೋದು ತನಿಖೆ ಮೂಲಕ ಗೊತ್ತಾಗ್ಬೇಕು. ಪಾಕಿಸ್ತಾನದಿಂದ ಬರೋದು ಹಿಂದೂಗಳೇ ಅನ್ನೋದು ಹೇಗೆ ಕಂಡು ಹಿಡಿಯುತ್ತೀರಿ. ಪಾಕಿಸ್ತಾನದಿಂದ ಬಂದವರು ಮುಸ್ಲಿಮರ, ಹಿಂದೂಗಳಾ ಅನ್ನೋದನ್ನ ಹೇಗೆ ಪತ್ತೆ ಹಚ್ತೀರಿ..? ಹಿಂದೂಗಳ ಹೆಸರಲ್ಲಿ ಹಿಜ್ಬುಲ್ ಮುಜಾಹಿದ್ ಉಗ್ರ ಸಂಘಟನೆಯವರು ಬರೋ ಸಾಧ್ಯತೆ ಇದೆ ಅಲ್ವಾ..? ಈ ಕಾಯ್ದೆಯಿಂದ ಇಂತವರು ದೇಶದ ಒಳಗೆ ನುಗ್ಗಲು ದಾರಿ ಮಾಡಿಕೊಡ್ತಿದ್ದೀರಾ..?

ಅಪ್ಪಚ್ಚು ರಂಜನ್, ಬಿಜೆಪಿ ಶಾಸಕ:
ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಕೆಲಸವಿಲ್ಲದೆ ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಆಗಿದೆ. ಹೀಗಾಗಿ ಇಂತಹ ಮಾತಾಡುತ್ತಿದ್ದಾರೆ. ಆಪೆ ಆಟೋದಲ್ಲಿ ಕಲ್ಲುತಂದು ಮುಖಕ್ಕೆ ಬಟ್ಟೆಕಟ್ಟಿ ಹೊಡೆದಿದ್ದಾರೆ. ಇದನ್ನೆಲ್ಲಾ ಮಾಡಿದ್ದು ಯಾರು? ಇದೆಲ್ಲಾ ಆಗಿದ್ದು ಖಾದರ್ ಅವರ ಕುಮ್ಮಕ್ಕಿನಿಂದ.

Leave a Reply