ವಾರದೊಳಗೆ ಕಾಶ್ಮೀರದಲ್ಲಿ ಇಂಟರ್ನೆಟ್ ನಿರ್ಬಂಧ ತೆರವು ಮಾಡಿ: ಸುಪ್ರೀಂ ಸೂಚನೆ

ಡಿಜಿಟಲ್ ಕನ್ನಡ ಟೀಮ್:

ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅಂತರ್ಜಾಲ ನಿರ್ಬಂಧ ಹೇರುವಂತಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಹೇರಲಾಗಿರುವ ಎಲ್ಲ ನಿರ್ಬಂಧವನ್ನು ಪರಿಶೀಲಿಸಿ ವಾರದೊಳಗೆ ಮತ್ತೆ ಇಂಟರ್ನೆಟ್ ಸೇವೆ ನೀಡಿ ಎಂದು ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಅಂತರ್ಜಾಲ ಸೇವೆ ಕಡಿತಗೊಳಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಸೇರಿದಂತೆ ಅನೇಕರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ.

ಸೂಕ್ಷ್ಮ ಪ್ರದೇಶ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಅಂತರ್ಜಾಲ ಸೇವೆ ಜಾರಿಗೆ ತನ್ನಿ ಎಂದಿದೆ. ಇದರ ಜತೆಗೆ ಎಲ್ಲ ಸರ್ಕಾರಿ, ಸ್ಥಳೀಯ ಸಂಸ್ಥೆಗಳ, ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳು ವೆಬ್ ಸೈಟ್ ಗಳನ್ನು ಮತ್ತೆ ಪುನಾರಾರಂಭಿಸಲು ತಿಳಿಸಿದೆ.

‘ಅಂತರ್ಜಾಲದ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅದರ ಪ್ರಕ್ರಿಯೆಯನ್ನು ಸಂವಿಧಾನದ ಆರ್ಟಿಕಲ್ 19(1)ರಲ್ಲಿ ರಕ್ಷಿಸಲಾಗಿದೆ. ಕೇವಲ ಆರ್ಟಿಕಲ್ 19(2)ರಲ್ಲಿ ನೀಡಲಾಗಿರುವ ಕಾರಣಗಳಿಗಾಗಿ ಮಾತ್ರ ಈ ಸ್ವಾತಂತ್ರದ ಮೇಲೆ ನಿರ್ಬಂಧ ಹೇರಬಹುದು. ಸರ್ಕಾರದ ನಿರ್ಧಾರದ ವಿರುದ್ಧ ಧ್ವನಿ, ಅತೃಪ್ತಿ ಅಥವಾ ಸಮಾಧಾನ ವ್ಯಕ್ತಪಡಿಸಿದ ಕಾರಣಕ್ಕೆ ಅಂತರ್ಜಾಲ ನಿರ್ಬಂಧ ಹೇರಲು ಸಾಧ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Leave a Reply