ಪೌರತ್ವ ಕೊಟ್ಟೇ ಕೊಡುತ್ತೇವೆ, ಏನು ಮಾಡುತ್ತೀರೋ ಮಾಡಿ; ವಿರೋಧ ಪಕ್ಷಗಳಿಗೆ ಅಮಿತ್ ಶಾ ಸವಾಲ್!

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಅಲ್ಪಸಂಖ್ಯಾತರಿಗೆ ನಾವು ಪೌರತ್ವ ಕೊಟ್ಟೇ ಕೊಡುತ್ತೇವೆ. ನೀವು ಏನು ಮಾಡುತ್ತೀರೋ ಮಾಡಿ… ಇದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರೋಧ ಪಕ್ಷಗಳಿಗೆ ಹಾಕಿದ ಸವಾಲು!

ಮಧ್ಯಪ್ರದೇಶದ ಜಬಲ್ ಪುರದಲ್ಲಿ ಇಂದು ನಡೆದ ಸಿಎಎ ಬೆಂಬಲ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್, ಅರವಿಂದ ಕೇಜ್ರಿವಾಲ್ ಹಾಗೂ ಮಮತಾ ಬ್ಯಾನರ್ಜಿ ಅವರು ಮತ ಬ್ಯಾಂಕ್ ರಾಜಕಾರಣ ಮಾಡುತ್ತಾ ಪಾಕಿಸ್ತಾನದವರಂತೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಈ ವೇಳೆ ಅವರು ಹೇಳಿದ್ದಿಷ್ಟು…

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪೌರತ್ವ ನೀಡುವ ಕಾಯ್ದೆಯೇ ಹೊರತು ಕಿತ್ತುಕೊಳ್ಳುವ ಕಾಯ್ದೆ ಅಲ್ಲ. ಇಂದು ಭಾರತೀಯ ಜನತಾ ಪಕ್ಷ ಸಿಎಎ ಬಗ್ಗೆ ರಾಷ್ಟ್ರವ್ಯಾಪಿ ಜನಜಾಗೃತಿ ನಡೆಸುತ್ತಿದೆ. ಅದಕ್ಕೆ ಕಾರಣ ಕಾಂಗ್ರೆಸ್, ಅರವಿಂದ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಕಮ್ಯುನಿಸ್ಟರು ಸಿಎಎ ವಿರುದ್ಧ ಮಾಡುತ್ತಿರುವ ಅಪಪ್ರಚಾರ.

ಸಿಎಎ ಭಾರತೀಯ ಮುಸಲ್ಮಾನರ, ಅಲ್ಪಸಂಖ್ಯಾತರ ಪೌರತ್ವ ಕಿತ್ತುಕೊಳ್ಳಲಿದೆ ಎಂದು ಇವರು ಅಪಪ್ರಚಾರ ನಡೆಸುತ್ತಿದ್ದಾರೆ. ಈ ವೇದಿಕೆ ಮೂಲಕ ರಾಹುಲ್ ಬಾಬಾ ಹಾಗೂ ಮಮತಾ ದೀದಿಗೆ ಒಂದು ಸವಾಲು ಹಾಕುತ್ತೇನೆ. ಸಿಎಎ ಕಾಯ್ದೆಯಲ್ಲಿ ಎಲ್ಲಾದರೂ ಪೌರತ್ವ ಕಿತ್ತುಕೊಳ್ಳುವ ಅಂಶ ಇದೆಯೇ ತೋರಿಸಿ.

ನಾವು ಪೌರತ್ವ ಯಾರಿಗೆ ಕೊಡುತ್ತಿದ್ದೇವೆ? ಪಾಕಿಸ್ತಾನದಲ್ಲಿ ಸೇರಿದಂತೆ ನೆರೆ ರಾಷ್ಟ್ರಗಳಲ್ಲಿ ಅತ್ಯಾಚಾರ, ಮತಾಂತರ ಹಾಗೂ ದೌರ್ಜನ್ಯಕ್ಕೆ ಒಳಗಾದ ಹಿಂದೂ, ಸಿಖ್, ಬೌದ್ಧ ಹಾಗೂ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದೇವೆ. ಅಲ್ಲಿ ದೌರ್ಜನ್ಯಕ್ಕೆ ಒಳಗಾಗಿ ತಮ್ಮ ಮಾನ, ತಮ್ಮ ಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಭಾರತಕ್ಕೆ ಬಂದಿರುವವರಿಗೆ ಪೌರತ್ವ ನೀಡುತ್ತೇವೆ.

ಇಂತಹ ಧಾರ್ಮಿಕ ನಿರಾಶ್ರಿತರು ದೇಶದಲ್ಲಿ ಮರ್ಯಾದೆಯಿಂದ ಬದುಕಲು ಅವಕಾಶ ನೀಡಲು ನಾವು ಸಿಎಎ ಜಾರಿಗೆ ತಂದಿದ್ದೇವೆ. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿದಾಗ ಪಾಕಿಸ್ತಾನದಲ್ಲಿ ಶೇ.30ರಷ್ಟು ಹಿಂದೂಗಳಿದ್ದರು. ಈಗ ಅವರ ಪ್ರಮಾಣ ಶೇ.3ಕ್ಕೆ ಇಳಿದಿದೆ. ಉಳಿದ ಶೇ.27 ರಷ್ಟು ಹಿಂದೂ ಸೋದರ, ಸೋದರಿಯರು ಎಲ್ಲಿ ಹೋದರು? ಅವರನ್ನು ಹತ್ಯೆ ಮಾಡಲಾಗಿದೆ ಅಥವಾ ಮತಾಂತರ ಮಾಡಲಾಗಿದೆ. ಅವರ ಮೇಲೆ ಅತ್ಯಾಚಾರ, ಬಲವಂತದ ಮತಾಂತರ ಆಗಿಲ್ಲವೇ?

ಸ್ವಾತಂತ್ರ್ಯದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು ಒಂದು ಮಾತು ಹೇಳಿದ್ದರು, ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಯಾವುದೇ ತೊಂದರೆ ಆದರೆ ಭಾರತ ಅವರಿಗೆ ಆಶ್ರಯ ನೀಡಲಿದೆ ಎಂದು ತಿಳಿಸಿದ್ದರು. ರಾಹುಲ್ ಗಾಂಧಿ ಅವರೇ ನೀವು ಮಹಾತ್ಮ ಗಾಂಧೀಜಿ ಅವರ ಮಾತನ್ನೂ ಕೇಳುವುದಿಲ್ಲವೇ?

ಕಾಂಗ್ರೆಸ್ ನಾಯಕರೇ ಇವತ್ತು ಕಿವಿ ಕೊಟ್ಟು ಕೇಳಿ, ನೀವು ಏನು ಮಾಡುತ್ತೀರೋ ಮಾಡಿ. ನಾವು ಈ ಧಾರ್ಮಿಕ ನಿರಾಶ್ರಿತರಿಗೆ ಪೌರತ್ವ ಕೊಟ್ಟಿಯೇ ತೀರುತ್ತೇವೆ.

ಪಾಕಿಸ್ತಾನದಲ್ಲಿ ಲಕ್ಷಾಂತರ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ, ಮತಾಂತರ, ಹತ್ಯೆ ನಡೆಯುತ್ತಿದೆ. ಇವುಗಳು ಮಾನವ ಹಕ್ಕು ಉಲ್ಲಂಘನೆ ಅಲ್ಲವೇ? ಅವರ ನೋವು ಯಾವುದೇ ಮಾನವ ಹಕ್ಕು ಚಾಂಪಿಯನ್ನರಿಗೆ ಕಾಣುತ್ತಿಲ್ಲವೇ?

ನಮಗೆ ಜನರ ತೀರ್ಪು ಮುಖ್ಯ. ಕಾಶ್ಮೀರದಲ್ಲಿ 370ನೆ ವಿಧಿ ಮುಂದುವರಿಯಬೇಕಿತ್ತಾ? ಅಥವಾ ನಿರ್ಮೂಲನೆ ಮಾಡಬೇಕಿತ್ತಾ? ಕಾಂಗ್ರೆಸ್ ಸರ್ಕಾರದ ನಡೆ ವಿರೋಧಿಸಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ವಿರೋಧಿಸಿದರು. ಆದರೆ ಈಗ ರಾಮ ಮಂದಿರ ನಿರ್ಮಾಣಕಕ್ಕೆ ಸಮಯ ಉತ್ತಮವಾಗಿದ್ದು, ನಾಲ್ಕು ತಿಂಗಳಲ್ಲಿ ಆಗಸದೆತ್ತರದ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ.

ವಿರೋಧ ಪಕ್ಷಗಳು ಎಷ್ಟರಮಟ್ಟಿಗೆ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದರೆ ಅವರ ಮಾತುಗಳು ಪಾಕಿಸ್ತಾನದವರ ಧ್ವನಿಯಾಗುತ್ತಿದೆ. ಭಾರತ ಸರ್ಜಿಕಲ್ ದಾಳಿ ಮಾಡಿದಾಗ ಪಾಕಿಸ್ತಾನ ಅದನ್ನು ತಿರಸ್ಕರಿಸಿದರೆ, ವಿರೋಧ ಪಕ್ಷಗಳು ಸಾಕ್ಷಿ ಕೇಳಿದವು. ಸಿಎಎ ಜಾರಿಗೆ ತಂದರೆ ಪಾಕಿಸ್ತಾನವೂ ವಿರೋಧಿಸುತ್ತದೆ, ಇಲ್ಲಿ ವಿರೋಧ ಪಕ್ಷಗಳು ವಿರೋಧಿಸುತ್ತವೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದಲ್ಲಿ ದೌರ್ಜನ್ಯ ಆಗುತ್ತಿದೆ, ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದರೆ, ಇಲ್ಲಿ ವಿರೋಧ ಪಕ್ಷಗಳು ಅದನ್ನೇ ಹೇಳುತ್ತಿವೆ.

ಮಮತಾ ದೀದಿ ಅವರಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕೊಟ್ಟರೆ ನಿಮಗೆ ಆಗುವ ನಷ್ಟ ಏನು? ಚುನಾವಣೆಗಳಲ್ಲಿ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿಯೇ? ಬಿಜೆಪಿ ಮತ ಬ್ಯಾಂಕ್ ರಾಜಕೀಯ ಮಾಡುವುದಿಲ್ಲ. ಬದಲಿಗೆ ದೇಶದ ಹಿತದ ರಾಜಕೀಯ ಮಾಡುತ್ತೇವೆ.

Leave a Reply