ಕನಕಪುರ ಚಲೋ ಓಕೆ, ಬಳ್ಳಾರಿ ಪ್ರತಿಭಟನೆ ಯಾಕೆ? ಇದು ಸರ್ಕಾರದ ಡಬಲ್ ಗೇಮ್!

ಡಿಜಿಟಲ್ ಕನ್ನಡ ಟೀಮ್:

ಒಂದೆಡೆ ಕನಕಪುರದಲ್ಲಿ ಆರ್ ಎಸ್ಎಸ್ ಹಾಗೂ ಹಿಂದೂ ಸಂಘಟನೆಗಳ ‘ಕನಕಪುರ ಚಲೋ’ ಪ್ರತಿಭಟನೆಗೆ ಅನುಮತಿ ಕೊಟ್ಟು, ಮತ್ತೊಂದೆಡೆ ಬಳ್ಳಾರಿಯಲ್ಲಿ ಶಾಸಕ ಜಮೀರ್ ಅಹ್ಮದ್ ಅವರು ಬಳ್ಳಾರಿಯಲ್ಲಿ ಪ್ರತಿಭಟನೆ ಮಾಡಲು ಅನುಮತಿ ನೀಡಿಲ್ಲ. ಈ ಎರಡು ಪ್ರತಿಭಟನೆಗಳು ಧರ್ಮಕ್ಕೆ ಸಂಬಂಧಿಸಿದರೂ ಎರಡು ಪ್ರಕರಣಗಳಲ್ಲಿ ಸರ್ಕಾರ ಮಾತ್ರ ಇಬ್ಬಗೆಯ ನೀತಿ ಅನುಸರಿಸಿದೆ.

ಹೌದು, ರಾಜ್ಯದಲ್ಲಿ ಕಾಂಗ್ರೆಸ್​, ಬಿಜೆಪಿ ನಡುವೆ ಜಿದ್ದಾಜಿದ್ದಿನ ರಾಜಕೀಯ ಹೋರಾಟ ಶುರುವಾಗಿದೆ. ಕಾಂಗ್ರೆಸ್​ ಹಾಗು ಜೆಡಿಎಸ್​ ಪ್ರಾಣ ಪಣಕ್ಕಿಟ್ಟು ಕಿತ್ತಾಡುತ್ತಿದ್ದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ, ಕಾಂಗ್ರೆಸ್​ ಹೋರಾಟ ಶುರುವಾಗಿದೆ. ಅತ್ತ ಕಾಂಗ್ರೆಸ್​, ಬಿಜೆಪಿ ಹಿಂದಿನಿಂದಲೂ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದ್ದ ಗಣಿನಾಡು ಬಳ್ಳಾರಿಯಲ್ಲಿ ಅಸ್ತಿತ್ವಕ್ಕಾಗಿ ಕಾಂಗ್ರೆಸ್​ ಕಸರತ್ತು ನಡೆಸುತ್ತಿದೆ.

ಬಿಜೆಪಿ ಸರ್ಕಾರ ತನಗೆ ಯಾವ ರೀತಿ ರಾಜಕೀಯ ಲಾಭವಾಗುತ್ತದೆ ಎಂಬುದರ ಆಧಾರದ ಮೇಲೆ ಇಂದು ಎರಡೂ ಪ್ರಕರಣಗಳಲ್ಲಿ ವಿಭಿನ್ನ ನಿರ್ಧಾರ ಕೈಗೊಂಡು ಡಬಲ್​ ಸ್ಟ್ಯಾಂಡರ್ಡ್​​ ಬುದ್ಧಿ ತೋರಿಸಿದೆ.

ಬಿಜೆಪಿ ಪಕ್ಷದ ಪರವಾಗಿ ರಾಜ್ಯ ಪೊಲೀಸ್​ ಇಲಾಖೆ ಕೂಡ ಕೆಲಸ ಮಾಡ್ತಿದ್ಯಾ ಅನ್ನೋ ಅನುಮಾನವೂ ದಟ್ಟವಾಗಿದೆ.

ರಾಮನಗರ ಜಿಲ್ಲೆ ಕನಕಪುರದ ಹಾರೋಬೆಲೆಯಲ್ಲಿ 114 ಅಡಿ ಎತ್ತರದ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಕಳೆದ ಕ್ರಿಸ್​ಮಸ್​ ದಿನದಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಭೂಮಿ ಪೂಜೆ ನೆರವೇರಿಸಿದ್ರು. ಕಾಂಗ್ರೆಸ್​ ಪಕ್ಷಕ್ಕೂ ಏಸು ಮೂರ್ತಿ ಪ್ರತಿಷ್ಠಾಪನೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಅದನ್ನು ಕ್ರೈಸ್ತ ಧರ್ಮದ ಟ್ರಸ್ಟ್​ ಒಂದು ನಿರ್ಮಾಣ ಮಾಡುತ್ತಿದೆ. ಆದ್ರೆ ಕನಕಪುರ ಕ್ಷೇತ್ರದ ಶಾಸಕ ಆಗಿರುವ ಕಾರಣ ಡಿ.ಕೆ ಶಿವಕುಮಾರ್​, ಶಂಕುಸ್ಥಾಪನೆಯಲ್ಲಿ ಭಾಗಿಯಾಗಿದ್ದರು. ಕ್ರೈಸ್ತ ಧರ್ಮ ಗುರುಗಳು ಭೂಮಿಯನ್ನು ಕೇಳಿ ಮನವಿ ಮಾಡಿಕೊಂಡಿದ್ದರಿಂದ ಕಪಾಲ ಬೆಟ್ಟದಲ್ಲಿ ಜಾಗ ಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿ, ಅದರ ಹಣವನ್ನು ಸ್ವತಃ ಡಿಕೆ ಶಿವಕುಮಾರ್​ ಅವರೇ ಪಾವತಿ ಮಾಡಿದ್ರು. ಇದನ್ನೇ ರಾಜಕೀಯ ದಾಳವಾಗಿ ಬಳಸಿಕೊಂಡ ಬಿಜೆಪಿ ನಾಯಕರು, ಅಂದಿನಿಂದಲೂ ಆಕ್ರೋಶ ಹೊರ ಹಾಕುತ್ತಲೇ ಬಂದಿದ್ರು.

ಬಿಜೆಪಿ ರಾಜಕೀಯ ಮಾಡುತ್ತಿದ್ದಂತೆ, ಸರ್ಕಾರ ವರದಿ ಕೇಳಿದೆ. ಏನು ಮಾಡ್ತಾರೋ ಮಾಡಲಿ ಇದು ಭಾಗವಂತನಿಗೂ ಭಕ್ತನಿಗೂ ಬಿಟ್ಟ ವಿಚಾರ ಎಂದಿದ್ದರು. ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುವ ಮುನ್ನವೇ ಇಲ್ಲಿ ಧರ್ಮದ ಹೆಸರಿನಲ್ಲಿ ರಾಜಕೀಯ ಬೆಳೆ ತೆಗೆಯಲು ಬಿಜೆಪಿ ಮುಂದಾಗಿದೆ.

ಪರಿಣಾಮ, ಇವತ್ತು ಹಿಂದೂಪರ ಸಂಘಟನೆಗಳು ಕನಕಪುರ ಚಲೋಗೆ ಕರೆ ಕೊಟ್ಟಿದ್ರು. ಸಾವಿರಾರು ಜನರನ್ನು ಕನಕಪುರ ಹಾರೊಬೆಲೆಯ ಕಪಾಲ ಬೆಟ್ಟಕ್ಕೆ ಕರೆದೊಯ್ಯುವ ನಿರ್ಧಾರ ಮಾಡಲಾಗಿತ್ತು. ಅದರಂತೆ ಇವತ್ತು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​, ಮಾಜಿ ಸಚಿವ ಯೋಗೇಶ್ವರ್​ ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿ ಡಿಕೆ ಶಿವಕುಮಾರ್​ ಹಾಗು ಅವರ ಸಹೋದರ ಡಿ.ಕೆ ಸುರೇಶ್​ ವಿರುದ್ಧ ಮಾತಿನ ಸುರಿಮಳೆ ಸುರಿಸಿದ್ರು. ಇದು ಕ್ರೈಸ್ತ ಧರ್ಮದ ವಿರುದ್ಧದ ಹೋರಾಟವೇ ಆಗಿತ್ತು.

ಇನ್ನು ಬಳ್ಳಾರಿ ವಿಚಾರ…
ಇದೇ ರೀತಿಯ ಧರ್ಮ ರಾಜಕಾರಣ ಗಣಿನಾಡು ಬಳ್ಳಾರಿಯಲ್ಲೂ ನಡೆದಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ಪರ ಅಭಿಯಾನ ನಡೆಸುತ್ತಿದ್ದ ಬಿಜೆಪಿ ಶಾಸಕ ಸೋಮಶೇಖರ್​ ರೆಡ್ಡಿ, ಮುಸ್ಲಿಮರು ಕೇವಲ 17 ಪರ್ಸೆಂಟ್​ ಇದ್ದೀರಿ, ನಾವು 80 ಪರ್ಸೆಂಟ್​ ಇದ್ದೀರಿ. ನಾವು ತಿರುಗಿ ಬಿದ್ದರೆ ಏನಾಗುತ್ತೆ ಯೋಜನೆ ಮಾಡಿ ನೋಡಿ ಎನ್ನುವ ಮೂಲಕ ಧಮ್ಕಿ ಹಾಕಿದ್ರು. ಈ ಧಮ್ಕಿ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​, ಇವತ್ತು ಬಳ್ಳಾರಿಗೆ ತೆರಳಿದ್ರು. ಇದಕ್ಕೂ ಮೊದಲೇ ನಿನ್ನೆ ಬಳ್ಳಾರಿ ಪೊಲೀಸರ ಬಳಿ ಅನುಮತಿಗಾಗಿ ಮನವಿ ಮಾಡಿಕೊಂಡಿದ್ರು. ಆದ್ರೆ ಅನುಮತಿ ಕೊಡದ ಪೊಲೀಸರು, ಮನವಿ ಸ್ವೀಕರಿಸಿ ಸುಮ್ಮನಾದ್ರು. ಇಲ್ಲಿ ಮುಸ್ಲಿಂ ಹಾಗು ಹಿಂದೂಗಳ ನಡುವೆ ಗಲಾಟೆಯಾಗುತ್ತೆ ಅನ್ನೋ ಮುಂಜಾಗ್ರತೆಯನ್ನು ಬಳ್ಳಾರಿ ಪೊಲೀಸ್ರು ತೆಗೆದುಕೊಂಡ್ರು.

ಕನಕಪುರದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಕಾಂಗ್ರೆಸ್​ ವಿರುದ್ಧ ಪ್ರತಿಭಟನೆ ಮಾಡಲು ಅವಕಾಶ ಕೊಡ್ತಾರೆ. ಆದ್ರೆ ಬಳ್ಳಾರಿಯಲ್ಲಿ ಬಿಜೆಪಿ ಶಾಸಕರ ವಿರುದ್ಧ ಪ್ರತಿಭಟನೆ ಮಾಡಲು ಕಾಂಗ್ರೆಸ್​ ಶಾಸಕ, ಕಾರ್ಯಕರ್ತರಿಗೆ ಅವಕಾಶ ಸಿಗಲ್ಲ.

ಧರ್ಮದ ವಿಚಾರವಾಗಿ ನಡೆಯುತ್ತಿರುವ ಎರಡೂ ಪ್ರಕರಣಗಳಿಗೆ ಸರ್ಕಾರ ಒಂದು ಅನುಮತಿ ನೀಡಬೇಕು. ಇಲ್ಲವಾದ್ರೆ ಅನುಮತಿ ನಿರಾಕರಿಸಬೇಕು. ಅದನ್ನು ಬಿಟ್ಟು ತಮಗೆ ಬೇಕಾದ ಪ್ರತಿಭಟನೆಗೆ ಅನುಮತಿ ಕೊಟ್ಟು, ತಮ್ಮ ವಿರುದ್ಧದ ಪ್ರತಿಭಟನೆಗೆ ಅನುಮತಿ ನಿರಾಕರಣೆ ಎಷ್ಟರ ಮಟ್ಟಿಗೆ ಸರಿ. ಬಿಜೆಪಿ ಸರ್ಕಾರದ ತಾಳಕ್ಕೆ ಪೊಲೀಸ್​ ಇಲಾಖೆ ಕುಣಿಯುತ್ತಿರುವುದಕ್ಕೆ ಇದೊಂದು ಸೂಕ್ತ ಉದಾಹರಣೆ.

Leave a Reply