ಬಿಜೆಪಿಯವರ ಬಳಿ ಅಧಿಕಾರ ಇದೆ ಏನು ಬೇಕಾದ್ರೂ ಮಾಡಲಿ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಅವರ ಬಳಿ ಅಧಿಕಾರ ಇದೆ. ಅವರು ಏನು ಬೇಕಾದರೂ ಮಾಡಲಿ, ಅಶಾಂತಿ ಉಂಟು ಮಾಡಿದರೂ ನಾನೇನು ಮಾತನಾಡಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಯೇಸು ಪ್ರತಿಮೆ ವಿರುದ್ಧ ಬಿಜೆಪಿ ಹಾಗೂ ಆರ್ ಎಸ್ ಎಸ್ ಕಡೆಯಿಂದ ಕನಕಪುರ ಚಲೋ ಆಯೋಜಿಸಿರುವ ಕುರಿತು ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಡಿಕೆ ಶಿವಕುಮಾರ್, ‘ಕಲ್ಲಡ್ಕ ಪ್ರಭಾಕರ್ ಭಟ್ ಯಾರು? ನನಗೆ ಅವ್ರು ಯಾರು ಗೊತ್ತಿಲ್ಲ. ನಾನು ಮಾನವ ಜೀವನಕ್ಕೆ ಜಯವಾಗಲಿ. ಮಾನವ ಧರ್ಮದಲ್ಲಿ ನಾನು ನಂಬಿಕೆ ಇಟ್ಟವನು‌’ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ, ಆಡಳಿತ ಪಕ್ಷ ಇರಬೇಕು. ಪರ ವಿರೋಧ ಇರಬೇಕು. ಯಾರು ಬೇಕಾದರೂ ಕನಕಪುರಕ್ಕೆ ಬರಬಹುದು. ಬಾರನ್ನು ತಡೆಯುವುದು ನನ್ನ ಧರ್ಮ ಅಲ್ಲ. ಇದು ಬೆಂಗಳೂರು. ಇಡೀ ವಿಶ್ವ ಇಲ್ಲಿ ಏನೇನಾಗುತ್ತಿದೆ ಅಂತಾ ನೋಡ್ತಿದೆ. ಅಮೆರಿಕಾ, ಆಸ್ಟ್ರೇಲಿಯಾದಿಂದ ಫೋನ್ ಮಾಡ್ತಿದ್ದಾರೆ. ನಾನು ಏನು ಮಾತಾಡೊಲ್ಲ. ಅವ್ರ ಹತ್ರ ಅಧಿಕಾರ ಇದೆ. ಅವ್ರು ಏನು ಬೇಕಾದ್ರು ಮಾಡಿಕೊಳ್ಳಲಿ. ನನ್ನ ಕಾರ್ಯಕರ್ತರಿಗೆ ಹೇಳಿದ್ದೇನೆ. ಯಾರು ಏನೇ ಮಾತಾಡಿದ್ರು ಸುಮ್ಮನೆ ಇರಿ.‌ ಎಷ್ಟೇ ಬೈದರು ಸುಮ್ಮನೆ ‌ಇರಿ ಅಂತ ಹೇಳಿದ್ದೇನೆ. ಯಾರು ಗಲಾಟೆ ಮಾಡೋದು ಬೇಡ. ಅವ್ರು ಏನು ಬೇಕೋ ಅದನ್ನ ಮಾಡಿಕೊಂಡು ಹೋಗಲಿ .

ಕನಕಪುರಕ್ಕೆ ಬೇರೆ ಬೇರೆ ಕಡೆಯಿಂದ ಎಷ್ಟು ಗಾಡಿಗಳು ಹೋಗಿವೆ ಗೊತ್ತಿದೆ. ರಾಮನಗರದ ಮಾಜಿ ಮಂತ್ರಿ ಒಬ್ಬರೇ ನನಗೆ ಮಾಹಿತಿ ಕೊಟ್ಟರು. ತಪ್ಪು ತಿಳ್ಕೊಬೇಡಿ ಅಣ್ಣಾ.. ಏನೋ ಮಾಡ್ಕೊಂಡು ಹೋಗ್ತಾರೆ ಅಂದ್ರು. ಪಾಪ ಅವರ ಹೆಸರನ್ನ ಬಹಿರಂಗಪಡಿಸಲ್ಲ. ಅವರು ಇನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಆಗಬೇಕಾಗಿದೆ. ರಾಜಕಾರಣ ನಿಂತ ನೀರಲ್ಲ. ಏನು ಬೇಕಾದರು ಆಗಬಹುದು. ರಾಜಕಾರಣದಲ್ಲಿ ನಮ್ಮ ನೆರಳನ್ನೇ ನಂಬಲಿಕ್ಕೆ ಆಗಲ್ಲ. ರಾತ್ರಿ ಆದ್ರೆ ನಮ್ಮ ನೆರಳು ನಮ್ಮ ಜೊತೆನೇ ಇರಲ್ಲ. ಪರೋಕ್ಷವಾಗಿ ಸಿ.ಪಿ ಯೋಗೇಶ್ವರ್ ರಾಜಕಾರಣ ಬದಲಾಗಲಿದೆ.

ಕನಕಪುರಕ್ಕೆ ಯಾರು ಬೇಕಾದರೂ ಬರಬಹುದು. ಕೇವಲ ಇವರಲ್ಲ ಸಚಿವರುಗಳಾಗಲಿ, ದೊಡ್ಡ ದೊಡ್ಡ ನಾಯಕರಾಗಲಿ ಯಾರು ಬೇಕಾದರೂ ಬರಲಿ ನಾವು ಅವರನ್ನು ಸ್ವಾಗತಿಸುತ್ತೇವೆ. ಅಭಿವೃದ್ಧಿ ಮಾಡುತ್ತೇವೆ ಅಂತಿದ್ದಾರೆ, ಮಾಡಲಿ. ಅವರವರ ಖುಷಿಗೆ ಏನೇನ್ ಬೇಕು ಅದನ್ನ ಮಾಡ್ತಿದ್ದಾರೆ, ಮಾಡ್ಲಿ. ಕನಕಪುರ ಕಸ ಗೂಡಿಸುತ್ತೇವೆ ಅಂದ್ರು. ‌ಕ್ಲೀನ್ ಮಾಡ್ತೇವೆ ಅಂತಿದ್ದಾರೆ ಮಾಡ್ಲಿ. ನಾವು ಮಾಡಿರುವುದನ್ನು ನೋಡಲಿ. ಸೋಲಾರ್ ಪ್ಯಾನಲ್ ಮಾಡಿದ್ದೇನೆ, ರೈತರಿಗೆ ಪಂಪ್ ಕೊಟ್ಟಿದ್ದೇನೆ. ಪ್ರತಿ ಊರಿಗೆ ಕಾವೇನು ನೀರು ಕೊಟ್ಟಿದ್ದೇನೆ.ಬಿಲ್ಡಿಂಗ್ ಗಳನ್ನು ನೋಡಲಿ. ಇಡೀ ದೇಶಕ್ಕೆ ನರೇಗಾ ಅತ್ಯುತ್ತಮವಾಗಿ ಜಾರಿಗೆ ತಂದಿದೆ ಅಂತ ಸರ್ಟಿಫಿಕೇಟ್ ಕೊಟ್ಟಿದೆ.

ಇಡೀ ಕ್ಷೇತ್ರದವರು ನನ್ನ ಮಕ್ಕಳ ರೀತಿ. ಸರ್ಕಾರ ಜಾಗ ಕೇಳಿತು. ನಾನು ಶಾಲೆಗೆ ಜಾಗ ಬಿಟ್ಟು ಕೊಟ್ಟೆ. ಅಲ್ಲಿ ನನ್ನ‌ ಮಕ್ಕಳು ಓದುತ್ತಿಲ್ಲ ಎಲ್ಲಾ ಮಕ್ಕಳು ಬರುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಮಾಗಡಿ ರೋಡ್ ನಲ್ಲಿ ಕೆಂಪೇಗೌಡ ಪ್ರಾಧಿಕಾರಕ್ಕೆ ಕ್ರೈಸ್ತರು 5 ಎಕರೆ ಜಾಗ ಬಿಟ್ಟುಕೊಟ್ಟಿದ್ದಾರೆ. ನಾನು ಜಾರ್ಜ್ ಅವರೊಂದಿಗೆ ಮಾತನಾಡಿ, ಆರ್ಚ್ ಬಿಷಪ್ ಅವರಿಗೆ ಮನವಿ ಮಾಡಿಕೊಂಡಾಗ ಕೆಂಪೇಗೌಡ ಪ್ರಾಧಿಕಾರಕ್ಕೆ ಐದು ಎಕರೆ ಭೂಮಿ ಬಿಟ್ಟುಕೊಟ್ಟರು. ಬೇಕದ್ದರೆ ಹೋಗಿ ಕೇಳಿ. ಬಿಜೆಪಿ ಅವರು ರಾಜಕಾರಣ ಮಾಡಬೇಕು ಅಂತಾ ಮಾತನಾಡುತ್ತಿದ್ದಾರೆ. ಅವರಿಗೆ ಅವರ ಪಕ್ಷಕ್ಕೆ ಏನು ಒಳ್ಳೆಯದಾಗುತ್ತದೆಯೋ ಅದನ್ನು ಮಾಡುತ್ತಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ.

ಜಮೀರ್ ಅಹಮದ್ ಬಂಧನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಅದರ ಬಗ್ಗೆ ಗೊತ್ತಿಲ್ಲ. ಕನ್ನಡ ಮಾಧ್ಯಮಗಳು ತಮ್ಮ ತನ ಉಳಿಸಿಕೊಳ್ಳಬೇಕು. ನಿಮ್ಮ ಇಮೇಜ್ ಹಾಳು ಮಾಡಿಕೊಳ್ಳಬೇಡಿ. ಸತ್ಯ ಸುದ್ದಿ ಮಾಡಿ. ಏನೇನೋ ಸುಳ್ಳು ಸುದ್ದಿ ಮಾಡಿ ಹಾಳು ಮಾಡಿಕೊಳ್ಳಬೇಡಿ ಎಂದರು.

ದೆಹಲಿಗೆ ಹೋಗುವ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ನಾನು ಪಾರ್ಟಿ ಬಗ್ಗೆ ಮಾತಾಡೊಲ್ಲ ಅಂತಾ ಈಗಾಗಲೇ ಹೇಳಿದ್ದೇನೆ. ಮಾತಾಡೋ ಜಾಗದಲ್ಲಿ ಮಾತಾಡ್ತೀನಿ. ನನ್ನ ವಿಚಾರ ನಿಮಗೆ ಗೊತ್ತಿರುತ್ತೆ ಅಲ್ಲವಾ? ನನ್ನ ಫಾಲೋ ಮಾಡ್ತಿದ್ದೀರಾ ಗೊತ್ತಾಗುತ್ತೆ ಬಿಡಿ ಎಂದರು.

ಬಿಜೆಪಿ ನಡೆಯಿಂದ ಡಿಕೆಶಿ ಭಯ ಬೀಳ್ತಿದ್ದಾರಾ ಅನ್ನೊ ಪ್ರಶ್ನೆಗೆ ಉತ್ತರಿಸಿ, ಹೌದು, ಗಡ ಗಡ ನಡುಗುತ್ತಿದ್ದೇನೆ. ಈಗಲೂ ನಡುಗುತ್ತಿದ್ದೇನೆ ಎಂದು ಹಾಸ್ಯ ಮಾಡಿದರು.

Leave a Reply