ಕೃಷ್ಣ ಅವರ ಭೇಟಿಯಲ್ಲಿ ರಾಜಕೀಯ ಇಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್:

ಎಸ್.ಎಂ ಕೃಷ್ಣ ಅವರ ಭೇಟಿ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ನನ್ನ ಹಾಗೂ ಕೃಷ್ಣ ಅವರ ಸಂಬಂಧ ನಿಮ್ಮೆಲ್ಲರಿಗೂ ಗೊತ್ತಿದೆ. ಸಂಕ್ರಮಣದ ಸಂದರ್ಭದಲ್ಲಿ ಅವರಿಗೆ ಶುಭ ಕೋರಿ, ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅಷ್ಟು ಬಿಟ್ಟರೆ ಇನ್ನೇನಿಲ್ಲ.

ರಾಜ್ಯ ರಾಜಕಾರಣದಲ್ಲಿ ರಾಜಕಾರಣ ಮಾಡುವವರು ಮಾಡಲಿ. ನಾನು ಸಂಕ್ರಾಂತಿ, ದನ ಕರ, ಹೊಲ ಉಳುವುದು ಮಾಡಿಕೊಂಡಿದ್ದೇನೆ ಎಂದರು.

ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿ, ದಿನೇಶ್ ಗುಂಡೂರಾವ್ ಅವರು ಪಕ್ಷದ ಅಧ್ಯಕ್ಷ ಸ್ಥಾನದ ಬಗ್ಗೆ ಹೈ ಕಮಾಂಡ್ ಬಳಿ ಮಾತನಾಡಲಿ. ನನ್ನ ಪ್ರಕಾರ ಅವರ ಸ್ಥಾನ ಇನ್ನು ಖಾಲಿ ಇಲ್ಲ. ಅವರ ರಾಜೀನಾಮೆ ವಿಚಾರವಾಗಿ ಪಕ್ಷದವರು ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಪಕ್ಷದಲ್ಲಿ ಅವರು ತಮ್ಮ ಕರ್ತವ್ಯವನ್ನು ಮಾಡಿದ್ದಾರೆ.

ನಂತರ ಸಿಎಂ ಯಡಿಯೂರಪ್ಪ ಹಾಗೂ ಮಠಾಧೀಶರ ನಡುವಣ ಮಾತುಕತೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಅದೇ ಕಾರ್ಯಕ್ರಮಕ್ಕಾಗಿ ಹರಿಹರಕ್ಕೆ ಹೋಗುತ್ತಿದ್ದೇನೆ. ಅವರ ನಡುವೆ ಏನು ಮಾತುಕತೆ ಆಗಿದೆಯೋ ಗೊತ್ತಿಲ್ಲ. ಯಡಿಯೂರಪ್ಪ ಅವರು ಮಠಾಧೀಶರಿಗೆ ಏನು ಮಾತು ಕೊಟ್ಟಿದ್ದರೋ ಗೊತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜನರಿಗೆ, ಮಠಾಧೀಶರಿಗೆ ಮಾತು ಕೊಟ್ಟಿರಬಹುದು. ಯಾರು ಯಾವಾಗ ಏನು ಮಾತು ಕೊಟ್ಟಿರುತ್ತಾರೆ ಎಂದು ಗೊತ್ತಿಲ್ಲ. ಆ ವಿಚಾರದಲ್ಲಿ ನಾವ್ಯಾಕೆ ಮಧ್ಯ ಪ್ರವೇಶಿಸಬೇಕು? ಆಂತರಿಕವಾಗಿ ಅವರು ಏನು ಮಾತನಾಡಿಕೊಂಡಿದ್ದಾರೋ ನಮಗೆ ಗೊತ್ತಿಲ್ಲ. ಅವರ ನಡುವಿನ ಸಮಸ್ಯೆ ಅವರು ಬಗೆಹರಿಸಿಕೊಳ್ಳುತ್ತಾರೆ. ಹೀಗಾಗಿ ಅದರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ. ಅದರ ಅವಶ್ಯಕತೆ ನನಗೆ ಇಲ್ಲ.

ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು:

2020 ವಿಶೇಷವಾದ ವರ್ಷ. ನಮ್ಮ ರೈತರು, ದನ ಕರುಗಳಿಗೆ, ದವಸ ಧಾನ್ಯಗಳಿಗೆ, ಭೂಮಿಗೆ ಎಲ್ಲವಕ್ಕೂ ಪೂಜೆ ಮಾಡುವ ಪವಿತ್ರವಾದ ದಿನ. ಒಕ್ಕಲುತನ ಮಾಡುವ ಕುಟುಂಬಗಳಿಗೆ ಉತ್ಕೃಷ್ಟವಾದ ದಿನ ಸಂಕ್ರಾಂತಿ. ಎಲ್ಲರಿಗೂ ಒಳ್ಳೆಯದಾಗಲಿ ಸಂಕ್ರಮಣ ಉಂಟಾಗಲಿ ಎಂದು ನಾಡಿನ ಜನತೆಗೆ ಶುಭ ಕೋರುತ್ತೇನೆ.

Leave a Reply